ನಿರಂತರ ತ್ರಿಫೇಸ್ ವಿದ್ಯುತ್ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Mar 10, 2026, 03:15 AM IST
ಬ್ಯಾಡಗಿ ತಾಲೂಕು ವಿವಿಧ ಗ್ರಾಮಗಳ ರೈತರು ಹಗಲು ಹೊತ್ತಲ್ಲಿ ನಾಲ್ಕು ತಾಸುಗಳ ಕಾಲ ನಿರಂತರ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಹೆಸ್ಕಾಂ ಎದುರು ಕೆಲಕಾಲ ಪ್ರತಿಭಟನೆ ನಡೆಅಇ ಮನವಿ ಸಲ್ಲಿಸಿದರು.. | Kannada Prabha

ಸಾರಾಂಶ

ಬ್ಯಾಡಗಿ ತಾಲೂಕು ವಿವಿಧ ಗ್ರಾಮಗಳ ರೈತರು ಹಗಲು ಹೊತ್ತಲ್ಲಿ ನಾಲ್ಕು ತಾಸುಗಳ ಕಾಲ ನಿರಂತರ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಹೆಸ್ಕಾಂ ಎದುರು ಕೆಲಕಾಲ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಬ್ಯಾಡಗಿ: ರೈತರಿಗೆ ಹಗಲು ವೇಳೆ ನಿರಂತರ ತ್ರಿಫೇಸ್ ವಿದ್ಯುತ್ ವಿತರಣೆ ಮಾಡುವಂತೆ ಆಗ್ರಹಿಸಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಹೆಸ್ಕಾಂ ಎಂಜಿನಿಯರ್‌ಗೆ ಮನವಿ ಸಲ್ಲಿಸಿದರು.

ತಾಲೂಕಿನ ಶಿಡೇನೂರು, ತಡಸ, ಹೊಸಗುಂಗರಕೊಪ್ಪ, ಆಣೂರು, ಕೊಲ್ಲಾಪುರ, ಬನ್ನಿಹಟ್ಟಿ, ಬಿಸಲಹಳ್ಳಿ, ನಂದಿಹಳ್ಳಿ, ಚಿಕ್ಕಣಜಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಮುಂಜಾನೆ ಕೆಇಬಿ ಮುಖ್ಯದ್ವಾರದ ಬಳಿ ಕೆಲಕಾಲ ಧರಣಿ ನಡೆಸಿದರಲ್ಲದೇ ರೈತರಿಗೆ ಆಗುತ್ತಿರುವ ತೊಂದರೆ ಸರಿಪಡಿಸದಿದ್ದರೇ ತೀವ್ರ ಸ್ವರೂಪದ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಆದೇಶ ಉಲ್ಲಂಘನೆ: ಈ ವೇಳೆ ಮಾತನಾಡಿದ ಕಿರಣಕುಮಾರ ಗಡಿಗೋಳ, ಈ ಹಿಂದೆ ಹೋರಾಟ ಕೈಗೊಂಡ ಸಂದರ್ಭದಲ್ಲಿ ಎಚ್ಚೆತ್ತುಕೊಂಡ ಸರ್ಕಾರ ಹಗಲು ವೇಳೆಯಲ್ಲಿ 4 ತಾಸು ಹಾಗೂ ರಾತ್ರಿ 3 ತಾಸುಗಳ ಕಾಲ ವಿದ್ಯುತ್ ಪೂರೈಸಲು ಆದೇಶಿಸಿತ್ತು. ಆದರೆ ಕಳೆದ 15 ದಿನಗಳಿಂದ ಬೆಳಗ್ಗೆ 8ರಿಂದ 12 ಗಂಟೆವರೆಗೆ ನಿರಂತರ ತ್ರಿಫೇಸ್ ನೀಡದೆ, ಮಧ್ಯದಲ್ಲಿ 1 ತಾಸು ವಿದ್ಯುತ್ ಸ್ಥಗಿತಗೊಳಿಸುತ್ತಿದ್ದು, ಇದರಿಂದ ನೀರು ಈ ಮೊದಲು ಹರಿದ ಜಾಗದಲ್ಲೇ ಮತ್ತೊಮ್ಮೆ ಹರಿಯಲಿದೆ. ಇದರಿಂದ ರೈತರು ಬೆಳೆಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೂಡಲೇ ನಿರಂತರ ವಿದ್ಯುತ್ ಪೂರೈಸುವಂತೆ ಆಗ್ರಹಿಸಿದರು.

ರಾತ್ರಿ ವಿದ್ಯುತ್ ನಮ್ಮ ನಷ್ಟಕ್ಕೇನು ಪರಿಹಾರ: ಆಣೂರು, ಕೊಲ್ಲಾಪುರ, ಶಿಡೇನೂರು, ತಡಸ, ಮುತ್ತೂರು, ಬೆಳಕೇರಿ, ಬಿಸಲಹಳ್ಳಿ, ಕದರಮಂಡಲಗಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕೊಳವೆ ಬಾವಿ ನೀರು ಬಳಕೆ ಮಾಡುತ್ತಿರುವ ರೈತರು ಬೀಜೋತ್ಪಾದನೆ ಸೇರಿದಂತೆ ತರಕಾರಿ, ಶುಂಠಿ, ಅಡಿಕೆ ಸೇರಿದಂತೆ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದಾರೆ. ಆದರೆ ರಾತ್ರಿ ವೇಳೆ ವಿದ್ಯುತ್ ಪೂರೈಸಿದಲ್ಲಿ ಕಾಡು ಪ್ರಾಣಿ ಸೇರಿದಂತೆ ವಿಷ ಜಂತುಗಳ ರೈತರಿಗೆ ತೊಂದರೆ ನೀಡುತ್ತಿದ್ದು ಎಲ್ಲವನ್ನೂ ಕೈಚಲ್ಲಿ ಕುಳಿತುಕೊಳ್ಳಬೇಕಾಗಿದೆ. ನಮ್ಮ ನಷ್ಟಕ್ಕೆ ಹೆಸ್ಕಾಂ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದಲ್ಲದೇ ಕೂಡಲೇ ನೈತಿಕ ಹೊಣೆ ಹೊತ್ತು ರೈತರ ಬೆಳೆನಷ್ಟ ಪರಿಹಾರವನ್ನು ಹೆಸ್ಕಾಂ ನೀಡುವಂತೆ ಒತ್ತಾಯಿಸಿದರು. ಈ ವೇಳೆ ಮಲ್ಲೇಶ ಅರಳೀಕಟ್ಟಿ, ಬಸವರಾಜ ಆಲದಕಟ್ಟಿ, ರೇವಣೇಶ ಗಾಣಿಗೇರ, ಲಿಂಗರಾಜ ದೊಡ್ಮನಿ, ಶಿವಕುಮಾರ ಗಡಿಗೋಳ, ಚಂದ್ರಪ್ಪ ದೇಸಾಯಿ, ನಿಂಗಪ್ಪ ಯಳಗೇರಿ, ಮಹೇಶಪ್ಪ ಕನಕಾಪುರ, ರುದ್ರೇಶ ಹಲಗಣ್ಣನವರ, ಬಸವರಾಜ ಹುಲ್ಲತ್ತಿ, ಪ್ರಭು ಬಿದರಿ, ಬಸವರಾಜ ದ್ಯಾವಣ್ಣನವರ, ಸಿರಿಯಾಜ್ ಬ್ಯಾಡಗಿ, ನಾಗಪ್ಪಕಾರಗಿ, ಬಸವರಾಜ ಕಡ್ಡೇರ, ವೀರಪ್ಪ ಬಿದರಿ, ಮಾಲತೇಶ ಹುಣಶೀಮರದ ಇನ್ನಿತರರಿದ್ದರು.

ಕಳೆದ 15 ದಿನಗಳಿಂದ ವಿದ್ಯುತ್ ಸಮಸ್ಯೆಯಾಗುತ್ತಿದ್ದು, ಹೆಚ್ಚಿನ ವಿದ್ಯುತ್ ಪಡೆದು ಹಗಲು ವೇಳೆ 4 ತಾಸು ತ್ರಿಫೇಸ್ ಪೂರೈಸಲಾಗುವದು. ಈ ಕುರಿತು ಮೇಲಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ಹೆಸ್ಕಾಂ ಎಇಇ ರಾಜು ಅರಳಿಕಟ್ಟಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಿಷ್ಠವೇತನ ನೀಡಿ, ಇಲ್ಲವಾದರೆ ಸೀರೆ ವಾಪಸ್‌ ಕಳುಹಿಸುತ್ತೇವೆ-ರೇವಣಕರ
ಕಾರಿನ ಮೇಲೆ ಕಂಟೈನರ್ ಬಿದ್ದು 8 ವರ್ಷದ ಮಗು ಬಲಿ