ಕನ್ನಡಪ್ರಭ ವಾರ್ತೆ ಗುಬ್ಬಿ
ಜನಸಂಖ್ಯೆ ನಿಯಂತ್ರಣದಿಂದ ದೇಶದ ಭವಿಷ್ಯ ಉಜ್ವಲವಾಗುವದಲ್ಲದೆ, ಮುಂದೆ ಆಗುವಂತ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪ್ರಭಾ ತಿಳಿಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರಿಗೂ ಜನಸಂಖ್ಯೆ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿದ್ದು, ಪ್ರತಿಯೊಬ್ಬ ನಾಗರಿಕರು ಜಾಗೃತರಾಗಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ಹಾಗೂ ಬಾಲ್ಯ ವಿವಾಹಗಳನ್ನು ತಡೆಯುವ ಬಗ್ಗೆ ಹೆಚ್ಚಿನದಾಗಿ ಜಾಗೃತರಾಗಬೇಕು. ಹೆಣ್ಣು ಮಕ್ಕಳ ಭವಿಷ್ಯ ರೂಪಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳನ್ನು ಅವಶ್ಯಕವಾಗಿವೆ ಎಂದು ತಿಳಿಸಿದರು.ಪ್ರಾಂಶುಪಾಲ ಆರ್.ವಿ. ಚಂದ್ರಶೇಖರ್ ಮಾತನಾಡಿ, ಹೆಚ್ಚುತ್ತಿರುವ ವಿಶ್ವ ಜನಸಂಖ್ಯೆಗೆ ವಿಶ್ವದ ಸಂಪನ್ಮೂಲಗಳು ಖಾಲಿಯಾಗುತ್ತಿರುವ ಅಸಮರ್ಥನಿಯ ದರವನ್ನು ಗಮನಿಸಿದರೆ, ಅಧಿಕ ಜನಸಂಖ್ಯೆಯು ಒಂದು ಪ್ರಮುಖ ಸಮಸ್ಯೆಯಾಗಿದೆ. ಜನಸಂಖ್ಯಾ ವಿಸ್ತರಣೆಯು ಪರಿಸರ ಮತ್ತು ಅಭಿವೃದ್ಧಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ನಿರ್ಣಾಯಕವಾಗಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ನಟರಾಜು ಮಾತನಾಡಿ, ಆರೋಗ್ಯವಂತ ಮಕ್ಕಳು ಆರೋಗ್ಯಕರ ಭೂಮಿಯನ್ನು ಸೃಷ್ಟಿಸಬಲ್ಲರು. ಅದರ ಅರ್ಥ ಪರಿಸರಕ್ಕಾಗಿ ಮಾತ್ರ ಮಕ್ಕಳನ್ನು ಉಳಿಸಬೇಕು ಅಂತಲ್ಲ, ಪ್ರತಿ ಮಗುವಿನ ಇರುವ ಜೀವಿಸುವ ಹಕ್ಕಿಗಾಗಿ ನಾವು ಅವರನ್ನು ಉಳಿಸಬೇಕು ಎಂದರು. ತಾಲೂಕಿನ ಆರೋಗ್ಯಾಧಿಕಾರಿ ಡಾ.ಬಿ.ಸಿ.ಬಿಂದು ಮಾಧವ ಮಾತನಾಡಿ, ಹೆಚ್ಚುತ್ತಿರುವ ಜನಸಂಖ್ಯೆಯು ಗರ್ಭಧಾರಣೆ ಮತ್ತು ಹೆರಿಗೆ ಸಮಯದಲ್ಲಿ ಮಹಿಳೆಯರು ಎದುರಿಸುವ ಆರೋಗ್ಯ ಸಮಸ್ಯೆಗಳತ್ತ ಗಮನಹರಿಸುತ್ತದೆ. ಲಿಂಗ ಸಮಾನತೆ, ಕುಟುಂಬ ಯೋಜನೆ ಮತ್ತು ತಾಯಿ ಆರೋಗ್ಯದ ಮಹತ್ವವನ್ನು ಮಹಿಳೆಯರು ಮತ್ತು ಪರುಷರು ಅರ್ಥಮಾಡಿಕೊಳ್ಳಬೇಕು ಎಂದರು. ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕೇಶವರಾಜು, ಹೆಚ್ಚುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಸವಾಲುಗಳು ಮತ್ತು ಅವಕಾಶಗಳ ಮೇಲೆ ಜಾಗತಿಕ ಗಮನವನ್ನು ಕೇಂದ್ರೀಕರಿಸುವುದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸುವ ಪ್ರಮುಖ ಉದ್ದೇಶವಾಗಿದೆ. ಈ ದಿನವು ಜನರಿಗೆ ಈ ಸಮಸ್ಯೆಗಳ ಬಗ್ಗೆ ಶಿಕ್ಷಣ ನೀಡುತ್ತದೆ ಮತ್ತು ಸರ್ಕಾರಗಳು, ಸಂಸ್ಥೆಗಳು ಮತ್ತು ವ್ಯಕ್ತಿಗಳು ಪರಿಹಾರಗಳನ್ನು ಕಂಡುಕೊಳ್ಳಲು ಒಟ್ಟಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಟಿ. ಕೃಷ್ಣಮೂರ್ತಿ, ಆರೋಗ್ಯ ನೀರಿಕ್ಷಣಾಧಿಕಾರಿ ರಮೇಶ್, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತಿತರರು ಇದ್ದರು.