ಜಟಿಲ ಸಮಸ್ಯೆಗಳಲ್ಲಿ ಜನಸಂಖ್ಯಾ ಸ್ಫೋಟವು ಒಂದು: ಡಾ. ಬಸವರಾಜ ಪುಂಡಪ್ಪನವರ

KannadaprabhaNewsNetwork |  
Published : Jul 15, 2026, 02:15 AM IST
ಮೊರಬದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಭಾರತದಲ್ಲಿ ಜನಸಂಖ್ಯಾ ಏರಿಕೆ ಜ್ವಲಂತ ಸಮಸ್ಯೆಯಾಗಿದೆ. ಈ ತೀವ್ರತರ ಏರಿಕೆ ದೇಶದ ಅಭಿವೃದ್ಧಿಗೆ ಮಾರಕವಾಗಿದ್ದು, ಬಡತನ, ನಿರುದ್ಯೋಗ, ಆಹಾರ, ವಸತಿಯಂತಹ ಸಮಸ್ಯೆ ಸೃಷ್ಟಿಸುತ್ತಿದೆ ಎಂದು ಡಾ. ಬಸವರಾಜ ಪುಂಡಪ್ಪನವರ ಹೇಳಿದರು.

ಧಾರವಾಡ:

ಭಾರತವನ್ನು ಕಿತ್ತು ತಿನ್ನುವ ಅನೇಕ ಜಟಿಲ ಸಮಸ್ಯೆಗಳಲ್ಲಿ ಜನಸಂಖ್ಯಾ ಸ್ಫೋಟನೆಯೂ ಒಂದು. ಇದು ಕೇವಲ ಭಾರತದ ಸಮಸ್ಯೆ ಮಾತ್ರವಲ್ಲ, ಜಾಗತಿಕ ಮಟ್ಟದ ಸಮಸ್ಯೆ ಎಂದು ಜೆಎಸ್‌ಎಸ್‌ ಜನಸಂಖ್ಯಾ ಸಂಶೋಧನಾ ಕೇಂದ್ರದ ಸಂಶೋಧನಾ ಪರಿವೀಕ್ಷಕ ಡಾ. ಬಸವರಾಜ ಪುಂಡಪ್ಪನವರ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಮೊರಬದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಜನಸಂಖ್ಯಾ ಸ್ಫೋಟದ ದುಷ್ಪರಿಣಾಮ-ಪರಿಹಾರ’ ವಿಷಯ ಕುರಿತು ಮಾತನಾಡಿದರು.

ಭಾರತದಲ್ಲಿ ಜನಸಂಖ್ಯಾ ಏರಿಕೆ ಜ್ವಲಂತ ಸಮಸ್ಯೆಯಾಗಿದೆ. ಈ ತೀವ್ರತರ ಏರಿಕೆ ದೇಶದ ಅಭಿವೃದ್ಧಿಗೆ ಮಾರಕವಾಗಿದ್ದು, ಬಡತನ, ನಿರುದ್ಯೋಗ, ಆಹಾರ, ವಸತಿಯಂತಹ ಸಮಸ್ಯೆ ಸೃಷ್ಟಿಸುತ್ತಿದೆ. ಅದು ನಮ್ಮ ವೈಯಕ್ತಿಕ ಜೀವನ ಪರಿಸರದ ಮೇಲೂ ದುಷ್ಟರಿಣಾಮ ಬೀರುತ್ತಿದೆ. ಜನಸಂಖ್ಯೆ ಏರಿಕೆಗೆ ಅನೇಕ ಕಾರಣಗಳಿದ್ದು ಭಾರತದ ವಿಜ್ಞಾನ, ತಂತ್ರಜ್ಞಾನಗಳ ಪ್ರಗತಿಗೂ ಇದು ಧಕ್ಕೆಯಾಗುತ್ತದೆ ಎಂದರು.

ಜನಸಂಖ್ಯಾ ತೀವ್ರತರ ಏರಿಕೆ ತಡೆಗಟ್ಟಲು ಜನರಿಗೆ ಅಗತ್ಯ ಶಿಕ್ಷಣ ನೀಡುವುದರೊಂದಿಗೆ ಸರ್ಕಾರದ ಜನಪ್ರಿಯ ಯೋಜನೆ, ಕುಟುಂಬ ಯೋಜನೆಯನ್ನು ಪ್ರತಿಯೊಬ್ಬರೂ ಪರಿಪಾಲನೆ ಮಾಡಬೇಕು. ಮದುವೆಯ ವಯಸ್ಸನ್ನು ಮುಂದೂಡಬೇಕು. ಇದಕ್ಕೂ ಮೊದಲು ಜನರ ಮನಪರಿವರ್ತನೆಯಾಗಬೇಕು. ದೇಶದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಸಿಬಿಸಿ ಉಪಾಧ್ಯಕ್ಷ ರವಿಕುಮಾರ ಕಗದಾಳ, ದೇಶದ ಜನರು ಇಂತಹ ಭೀಕರ ಸಮಸ್ಯೆಗಳ ಬಗ್ಗೆ ಅರಿವು, ಜಾಗೃತಿ ಹೊಂದಿರಬೇಕು. ಒಂದು ಸಮಸ್ಯೆ ಅನೇಕ ಸಮಸ್ಯೆಗಳಿಗೆ ಕಾರಣವಾಗಬಾರದು ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಸಮಸ್ಯೆ ಯಾವುದೇ ಇರಲಿ, ಲಘುವಾಗಿ ಪರಿಗಣಿಸಬಾರದು. ದೇಶದ ಭವಿಷ್ಯದ ಬಗ್ಗೆ ಪ್ರತಿ ವಿದ್ಯಾರ್ಥಿ ಚಿಂತನಶೀಲರಾಗಬೇಕು. ಆತ್ಮಸ್ಥೈರ್ಯ ಹೊಂದಿರಬೇಕೆಂದು ಹೇಳಿದರು.

ಪ್ರಾಚಾರ್ಯ ಸಯ್ಯದ್‌ ಫಯಾಜ್‌ ಅಹಮದ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಬಂಧ ಸ್ಪರ್ಧೆ ವಿಜೇತ ಮಕ್ಕಳಿಗೆ ನಗದು, ಪುರಸ್ಕಾರ ನೀಡಿ ಗೌರವಿಸಲಾಯಿತು. ಶ್ಯಾಮ ಶಾವಿ ಸ್ವಾಗತಿಸಿದರು. ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಸ್ತಾವಿಸಿದರು. ಮಲ್ಲಿಕಾರ್ಜುನ ರಡ್ಡೇರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಾವರಿ ಯೋಜನೆಗಳ ವಿಷಯದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲದು: ಶಾಸಕ ಮಾನೆ
ನಗರದ ರಸ್ತೆ ಅಗೆದಿರುವುದಕ್ಕೆ ನಗರಾಭಿವೃದ್ಧಿ ಕೋಶಕ್ಕೆ ಸಿಎಂ ಸಚಿವಾಲಯದಿಂದ ಪತ್ರ