ಯೋಧರಿಗಾಗಿ ಧಾರವಾಡ ಐಐಟಿಯಿಂದ ಪೋರ್ಟಬಲ್‌ ಬಂಕರ್‌

KannadaprabhaNewsNetwork |  
Published : Nov 24, 2026, 01:00 AM IST
ಪೋರ್ಟಬಲ್‌ ಬಂಕರ್‌ | Kannada Prabha

ಸಾರಾಂಶ

ಭಾರತೀಯ ಸೇನೆಯ ಯೋಧರ ಸುರಕ್ಷತೆಗಾಗಿ, ಕಡಿಮೆ ವೆಚ್ಚ ಹಾಗೂ ಕಡಿಮೆ ತೂಕದ ಪೋರ್ಟಬಲ್‌ ಬಂಕರ್‌ ಅನ್ನು ಅಭಿವೃದ್ಧಿಪಡಿಸುವ ಮೂಲಕ ಧಾರವಾಡದ ಐಐಟಿಯು ರಕ್ಷಣಾ ಕ್ಷೇತ್ರದಲ್ಲಿ ಸ್ವದೇಶಿ ತಂತ್ರಜ್ಞಾನ ಬಳಕೆಗೆ ಮಹತ್ವದ ಕೊಡುಗೆ ನೀಡಿದೆ.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ:

ಭಾರತೀಯ ಸೇನೆಯ ಯೋಧರ ಸುರಕ್ಷತೆಗಾಗಿ, ಕಡಿಮೆ ವೆಚ್ಚ ಹಾಗೂ ಕಡಿಮೆ ತೂಕದ ಪೋರ್ಟಬಲ್‌ ಬಂಕರ್‌ ಅನ್ನು ಅಭಿವೃದ್ಧಿಪಡಿಸುವ ಮೂಲಕ ಧಾರವಾಡದ ಐಐಟಿಯು ರಕ್ಷಣಾ ಕ್ಷೇತ್ರದಲ್ಲಿ ಸ್ವದೇಶಿ ತಂತ್ರಜ್ಞಾನ ಬಳಕೆಗೆ ಮಹತ್ವದ ಕೊಡುಗೆ ನೀಡಿದೆ.

ಜಮ್ಮು ಮತ್ತು ಕಾಶ್ಮೀರದಂತಹ ಕಠಿಣ ಭೂಪ್ರದೇಶಗಳು ಸೇರಿ ದೂರದ ಸ್ಥಳಗಳಲ್ಲಿ ಯೋಧರು ಗುಂಡಿನ ದಾಳಿಯಿಂದ ರಕ್ಷಣೆ ಪಡೆಯಲು ಸಿಮೆಂಟ್ ಮತ್ತು ಮರಳಿನ ಚೀಲಗಳನ್ನು ಸಾಗಿಸುವುದು ದೊಡ್ಡ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ದಾಳಿಯಿಂದ ಸಿಬ್ಬಂದಿಯನ್ನು ರಕ್ಷಿಸಲು ಧಾರವಾಡ ಐಐಟಿ ಈ ನೂತನ ಬಂಕರ್‌ ಅನ್ನು ವಿನ್ಯಾಸಗೊಳಿಸಿದೆ.

ಈ ಬಂಕರ್‌ ಬೇರೆ ಬಂಕರ್‌ಗಳಿಗೆ ಹೋಲಿಸಿದರೆ ಹಗುರವಾಗಿದ್ದು, ಸಾಗಿಸಲು ಸುಲಭವಾಗಿದೆ ಮತ್ತು ತ್ವರಿತವಾಗಿ ಮುರಿದು ಜೋಡಿಸಬಹುದು. ಇದು ಕಷ್ಟಕರ ಭೂಪ್ರದೇಶಗಳಲ್ಲಿ ವಿಶೇಷವಾಗಿ ಉಪಯುಕ್ತ. ಈ ಯೋಜನೆಯನ್ನು ಭಾರತೀಯ ಸೇನೆಯು ಮಾರ್ಚ್ 2025ರಲ್ಲಿ ಮಂಜೂರು ಮಾಡಿತ್ತು. ಇದೀಗ ಪರೀಕ್ಷಾ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, 29.53 ಲಕ್ಷ ರು.ವೆಚ್ಚದಲ್ಲಿ 3 ಬಂಕರ್‌ಗಳನ್ನು ಸಿದ್ಧಪಡಿಸಿ ಸೇನೆಗೆ ಕಳುಹಿಸಲಾಗಿದೆ ಎಂದು ಬಂಕರ್‌ ಅಭಿವೃದ್ಧಿ ತಂಡದ ಸದಸ್ಯ ಧಾರವಾಡ ಐಐಟಿ ಮೆಕ್ಯಾನಿಕಲ್, ಮೆಟೀರಿಯಲ್ಸ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಜೂನಿಯರ್ ತಾಂತ್ರಿಕ ಸೂಪರಿಂಟೆಂಡೆಂಟ್ ಕುಲದೀಪ್ ಸಿಂಗ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಬಂಕರ್‌ ತೂಕ 450 ಕೆಜಿ:

ಈ ಬಂಕರ್ ಅನ್ನು ಸೆರಾಮಿಕ್ ಮತ್ತು ಕೆವ್ಲರ್ (ಬುಲೆಟ್‌ಪ್ರೂಫ್ ಜಾಕೆಟ್‌ಗಳಲ್ಲಿ ಸಾಮಾನ್ಯವಾಗಿ ಬಳಸುವ ವಸ್ತು) ಸೇರಿದಂತೆ ಸಂಯೋಜಿತ ವಸ್ತುಗಳಿಂದ (composite materials) ನಿರ್ಮಿಸಲಾಗಿದೆ. ಕೇವಲ 450 ಕೆಜಿ ತೂಕವಿರುವ ಇದು, ಸಿಮೆಂಟ್ ಮತ್ತು ಮರಳಿನ ಚೀಲಗಳನ್ನು ಬಳಸಿ ನಿರ್ಮಿಸುವ ಸಾಂಪ್ರದಾಯಿಕ ಬಂಕರ್‌ಗಳಿಗೆ (ಇವು 10,000 ಕೆಜಿ ವರೆಗೆ ತೂಕವಿರಬಹುದು) ಒಂದು ಹಗುರವಾದ ಪರ್ಯಾಯ ವ್ಯವಸ್ಥೆ. ಸುಲಭವಾಗಿ ಸಾಗಿಸಬಹುದು ಮತ್ತು ಸ್ಕ್ರೂಗಳು, ನಟ್‌ಗಳು ಹಾಗೂ ಬೋಲ್ಟ್‌ಗಳನ್ನು ಬಳಸಿ ಜೋಡಿಸಬಹುದು. ಇದಲ್ಲದೆ, ಮರಳಿನ ಚೀಲಗಳಿಗೆ ಹೋಲಿಸಿದರೆ ಇದು ಹೆಚ್ಚು ಸುರಕ್ಷಿತ.

ಪರೀಕ್ಷೆ ಯಶಸ್ವಿ:

ಭಾರತೀಯ ಸೇನೆಯ ‘ಈಸ್ಟರ್ನ್ ಕಮಾಂಡ್’, 100 ಮೀ.ಮತ್ತು 50 ಮೀ. ಅಂತರದಿಂದ ಎಕೆ-47 ಹಾಗೂ ಇನ್ಸಾಸ್ (Indian Small Arms System) ರೈಫಲ್‌ಗಳಿಂದ ಗುಂಡು ಹಾರಿಸುವ ಮೂಲಕ ಈ ಬಂಕರ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಈ ಪರೀಕ್ಷೆಯಲ್ಲಿ ಗುಂಡುಗಳು ಬಂಕರ್ ಅನ್ನು ಭೇದಿಸಲು ಸಾಧ್ಯವಾಗಲಿಲ್ಲ. ಈ ಬೆಳವಣಿಗೆಯು ಸೇನಾ ಸಿಬ್ಬಂದಿಯ ಸುರಕ್ಷತೆ ಹೆಚ್ಚಿಸುವುದರ ಜತೆಗೆ, ಕಡಿಮೆ ವೆಚ್ಚ ಮತ್ತು ಸುಲಭವಾಗಿ ನಿಯೋಜಿಸಬಹುದಾದ ರಕ್ಷಣಾತ್ಮಕ ಪರಿಹಾರ ಒದಗಿಸುತ್ತದೆ. ಅಲ್ಲದೆ, ಕೇಂದ್ರ ಸರ್ಕಾರದ ‘ಆತ್ಮನಿರ್ಭರ ಭಾರತ’ ಯೋಜನೆಗೆ ಅನುಗುಣವಾಗಿ, ಸ್ವದೇಶಿ ರಕ್ಷಣಾ ತಂತ್ರಜ್ಞಾನ ಬಲಪಡಿಸುವ ನಿಟ್ಟಿನಲ್ಲಿ ಖಂಡಿತ ಮಹತ್ವದ ಹೆಜ್ಜೆ ಎನ್ನುತ್ತಾರೆ ಸಿಂಗ್‌.

ಈ ಯೋಜನೆಯನ್ನು ಪಶ್ಚಿಮ ಬಂಗಾಳದ ಪಣಗಢದಲ್ಲಿರುವ 6 ಎಂಜಿನಿಯರ್ಸ್ ರೆಜಿಮೆಂಟ್, ಈಸ್ಟರ್ನ್ ಕಮಾಂಡ್, ಭಾರತೀಯ ಸೇನೆ ಪ್ರಾಯೋಜಿಸಿದೆ. ಈ ಯೋಜನೆಯ ನೇತೃತ್ವವನ್ನು ಸಹಾಯಕ ಪ್ರಾಧ್ಯಾಪಕರಾದ ಡಾ.ವ್ಯೋಮ್ ಶರ್ಮಾ ಮತ್ತು ಡಾ. ಪುನ್ನಾಗ್ ಚಟರ್ಜಿ ವಹಿಸಿದ್ದರು. ಅಭಿವೃದ್ಧಿ ತಂಡದಲ್ಲಿ ಸಿಂಗ್‌ ಜೊತಗೆ ಮೆಕ್ಯಾನಿಕ್ ವಿಭಾಗದ ಆನಂದ್ ದೊಡ್ಡಮಣಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವ ವಿಕಲಚೇತನರ ದಿನಾಚರಣೆ ವ್ಯವಸ್ಥಿತವಾಗಿ ಆಯೋಜಿಸಿ: ಡಾ. ದುರಗೇಶ್
ಯುವಜನ ಓದುವ ಹವ್ಯಾಸ ಬೆಳೆಸಿಕೊಳ್ಳಲಿ: ಶಾಸಕ ದಿನಕರ ಶೆಟ್ಟಿ