ಹಮಾಲಿ ಕಾರ್ಮಿಕರ ಕ್ಲಸ್ಟರ್‌ ಮತ್ತೆ ಮುನ್ನೆಲೆಗೆ

KannadaprabhaNewsNetwork |  
Published : Jun 21, 2025, 12:49 AM IST
ಸಸಸಸ | Kannada Prabha

ಸಾರಾಂಶ

2008 ರಲ್ಲಿ ಈ ಶಾಲೆಯ ಶಿಕ್ಷಕ ರಾಮು ಮೂಲಗಿ ಅವರಿಗೆ "ಕನ್ನಡಪ್ರಭ ವರ್ಷದ ವ್ಯಕ್ತಿ " ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಈ ಕ್ಲಸ್ಟರ್‌ ಚಿಂತನೆ ರಾಜ್ಯ ಸರ್ಕಾರದ ಮುಂದಿತ್ತು

ಹುಬ್ಬಳ್ಳಿ: ಇಲ್ಲಿನ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ "ಕರ್ನಾಟಕ ಹಮಾಲಿ ಕಾರ್ಮಿಕರ ಕ್ಲಸ್ಟರ್‌ " ವಿಷಯ ಮತ್ತೆ ಮುನ್ನೆಲೆಗೆ ಬಂದಿದ್ದು, ಇಷ್ಟರಲ್ಲಿಯೇ ವರ್ತಕರ ಸಂಘ ಮತ್ತು ಹಮಾಲಿ ಕಾರ್ಮಿಕರ ಸಂಘಗಳು ಸರ್ಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿವೆ.

ಶುಕ್ರವಾರ ಎಪಿಎಂಸಿ ಆವರಣದ ಶ್ರೀಮತಿ ಶಿವಲಿಂಗಮ್ಮ ಶಂಕರಗೌಡ ಬಾಳನಗೌಡ್ರ ಸರ್ಕಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರೊಜಕ್ಟರ್‌ ಅನಾವರಣ ಮತ್ತು ಕಾರ್ಮಿಕ ಮುಖಂಡ ದುರಗಪ್ಪ ಚಿಕ್ಕತುಂಬಳ ಅವರ ಜನ್ಮದಿನದ ನಿಮಿತ್ತ ಶಾಲಾ ಮಕ್ಕಳಿಗೆ ನೋಟ್‌ಬುಕ್‌ ವಿತರಣೆ ಕಾರ್ಯಕ್ರಮದಲ್ಲಿ ಈ ವಿಷಯ ಚರ್ಚೆಗೆ ಬಂದು, ಒಂದು ನಿರ್ಧಾರಕ್ಕೆ ಬರಲಾಯಿತು.

ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಈ ವಿಷಯ ಪ್ರಸ್ತಾಪಿಸಿ, 2008 ರಲ್ಲಿ ಈ ಶಾಲೆಯ ಶಿಕ್ಷಕ ರಾಮು ಮೂಲಗಿ ಅವರಿಗೆ "ಕನ್ನಡಪ್ರಭ ವರ್ಷದ ವ್ಯಕ್ತಿ " ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಈ ಕ್ಲಸ್ಟರ್‌ ಚಿಂತನೆ ರಾಜ್ಯ ಸರ್ಕಾರದ ಮುಂದಿತ್ತು ಎಂದು ನೆನಪು ಮಾಡಿದರು.

ಈ ಶಾಲೆಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಾದರಿಯಲ್ಲಿ ಮೇಲ್ದರ್ಜೆಗೆ ಏರಿಸುವುದು. ರಾಜ್ಯದ ಎಲ್ಲ ಎಪಿಎಂಸಿಗಳಲ್ಲಿನ ಹಮಾಲಿ ಕಾರ್ಮಿಕರ ಮಕ್ಕಳಿಗೆ ಇಲ್ಲಿ ಉಚಿತವಾಗಿ ವಸತಿ ಸಹಿತ ಶಿಕ್ಷಣ ನೀಡುವುದು. ಆ ಮಕ್ಕಳ ಪಾಲಕರಿಗೆ ಆಗಾಗ ಕಾರ್ಯಾಗಾರಗಳನ್ನು ಆಯೋಜಿಸಿ ಅವರನ್ನು ಚಟಗಳಿಂದ ಮುಕ್ತ ಮಾಡುವುದು, ಆರ್ಥಿಕ ಸಬಲತೆ, ಆರೋಗ್ಯ ವೃದ್ಧಿ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಅನಕ್ಷರಸ್ಥ ಸಮುದಾಯವಾದ ಈ ಕಾರ್ಮಿಕರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನವೇ ಈ ಕ್ಲಸ್ಟರ್ ಎಂದು ಸಿದ್ದಣ್ಣವರ ವಿವರಿಸಿದರು.

ಇದಕ್ಕೆ ಪ್ರತಿಕ್ರೀಯಿಸಿದ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಚನ್ನಬಸಪ್ಪ ಹೊಸಮನಿ, ಇದೊಂದು ಉತ್ತಮ ಯೋಜನೆಯಾಗಿದ್ದು, ಇದರಿಂದ ನಮ್ಮ ಎಪಿಎಂಸಿ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗುತ್ತದೆ. ಮೇಲಾಗಿ ನಮ್ಮ ಹಮಾಲಿ ಕಾರ್ಮಿಕರ ಬದುಕಿಗೆ ಮತ್ತು ಅವರ ಮಕ್ಕಳ ಏಳ್ಗೆಗೆ ಅನುಕೂಲವಾಗಲಿದೆ ಎಂದರು.

ಹಮಾಲಿ ಕಾರ್ಮಿಕರು ಮತ್ತು ಎಪಿಎಂಸಿ ವರ್ತಕರು ಸೇರಿ ಎಪಿಎಂಸಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರನ್ನು ಕಂಡು ಈ ಯೋಜನೆ ಕೈಗೆತ್ತಿಕೊಂಡು ಅನುಷ್ಠಾನ ಮಾಡಲು ಇಷ್ಟರಲ್ಲಿಯೆ ಬೆಂಗಳೂರಿಗೆ ನಿಯೋಗ ಹೋಗುವುದಾಗಿ ಭರವಸೆ ನಿಡಿದರು.

ಸಾನಿಧ್ಯ ವಹಿಸಿದ್ದ ಮೋಹನ ಗುರುಸ್ವಾಮಿ, ಹಮಾಲಿ ಕಾರ್ಮಿಕರ ಫೆಡರೇಶನ್‌ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಈ ಸಂದರ್ಭದಲ್ಲಿ ಮಾತನಾಡಿದರು.

ಬಸವನಗರ ಕಾಲನಿ ನಾಗರೀಕ ಸೇವಾ ಸಮಗದ ಅಧ್ಯಕ್ಷ ಹನುಮಂತಪ್ಪ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಧಾನ ಗುರುಮಾತೆ ಎ.ಪಿ.ಬೀಡಿಕರ್, ಅಜಯಕುಮಾರ ತೋರಸ್ಕರ್, ಗುರುಸಿದ್ದಪ್ಪ ಅಂಬಿಗೇರ, ಬಸವರಾಜ ಅಂಬಿಗೇರ, ದೇವೇಂದ್ರ ಟಣಕೆದಾರ, ಬಸಣ್ಣ ನೀರಲಗಿ, ಮಂಜುನಾಥ ಹುಜರಾತಿ, ಹನುಮಂತಪ್ಪ ಅಂಬಿಗೇರ, ಗುಲಾಬಸಾಬ ಯಲಿಗಾರ ಮತ್ತು ಶಾಲಾ ಶಿಕ್ಷಕ, ಶಿಕ್ಷಕಿಯರು ಇದ್ದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ