ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸಮಾಜದ ಆರೋಗ್ಯ ಸಮತೋಲನದಲ್ಲಿ ಇರಬೇಕಾದರೆ ಮಾನವರ ಮಾನಸಿಕ ಆರೋಗ್ಯ ಉತ್ತಮವಾಗಿರಬೇಕು. ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವೂ ಉತ್ತಮವಾಗಿರಬೇಕಾದರೆ ಸಕಾರಾತ್ಮಕ ಚಿಂತನೆ ಅಗತ್ಯ ಎಂದು ನಿಮ್ಹಾನ್ಸ್ ನ ನಿವೃತ್ತ ಮಾನಸಿಕ ಆರೋಗ್ಯ ಸಲಹೆಗಾರ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಗೌರವಾಧ್ಯಕ್ಷ ಡಾ.ಸಿ.ಆರ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.ನಗರದ ಶೆಟ್ಟಿಹಳ್ಳಿ ಬಡಾವಣೆಯಲ್ಲಿ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಪ್ರೌಢಶಾಲಾ ಶಿಕ್ಷಕ ಕೆ.ಎಂ,ರೆಡ್ಡಪ್ಪ ಅವರ ಗೃಹಪ್ರವೇಶದಲ್ಲಿ ಪಾಲ್ಗೊಂಡ ಬಳಿಕ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ನಮ್ಮ ಮನಸ್ಸನ್ನು ಸದಾ ಸಮಾಧಾನಿಯಾಗಿರಿಸಿಕೊಳ್ಳಬೇಕು. ಚಿಂತೆ, ಕೋಪ, ದುಗುಡ ದುಮ್ಮಾನವೇ ಅನಾರೋಗ್ಯದ ಅಡಿಗಲ್ಲು ಎಂದರು.ಆರೋಗ್ಯ ಕಾಪಾಡಿಕೊಳ್ಳಲು ಟಿಪ್ಸ್
ಸಾಂಪ್ರದಾಯಿಕ ಆಹಾರ ಸೇವಿಸಿ ಜಂಕ್ ಫುಡ್, ಕರಿದ ಪದಾರ್ಥಗಳು ಹಾಗೂ ಹೋಟೆಲ್ ಊಟದಿಂದ ದೂರವಿರಬೇಕು. ಈ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ನಿತ್ಯ 6 ರಿಂದ 7 ಗಂಟೆಗಳ ನಿದ್ರೆ, ಸಾಕಷ್ಟು ನೀರು, ಸೇವನೆ, ದಿನಂಪ್ರತಿ 10 ನಿಮಿಷ ನಡಿಗೆ,ಇಂತಹ ಉತ್ತಮ ಅಂಶಗಳ ಪಾಲನೆಯು ನಮ್ಮ ಉತ್ತಮ ಆರೋಗ್ಯಕ್ಕೆ ಅತ್ಯಗತ್ಯವಿದೆ ಎಂದು ಸಲಹೆ ನೀಡಿದರು.ಆಧುನಿಕ ಜೀವನ ಶೈಲಿಯು ಅತಿಯಾದ ಆಸೆಗಳನ್ನು ಉತ್ಪತ್ತಿ ಮಾಡುತ್ತಿದೆ. ಪರಿಣಾಮ ಮಾನಸಿಕ ಒತ್ತಡ ಹೆಚ್ಚಿ, ನೆಮ್ಮದಿ ಮರೀಚಿಕೆಯಾಗಿದೆ.ಮಾನಸಿಕ ಆರೋಗ್ಯವನ್ನು ಸ್ಥಿರವಾಗಿ ಇಟ್ಟುಕೊಳ್ಳುವ ಮನಸ್ಸುಳ್ಳವರು ಕ್ರಿಯಾಶೀಲ ಚಿಂತನೆ,ರಚನಾತ್ಮಕ ಕೆಲಸ,ಉತ್ತಮ ಕೃತಿಗಳ ಅಭ್ಯಾಸದ ಜತೆಗೆ ದಿನಪತ್ರಿಕೆಗಳನ್ನು ತಪ್ಪದೆ ಓದುವ ಗುಣ ಬೆಳೆಸಿಕೊಳ್ಳಬೇಕು ಎಂದರು.ಸದಾಚಾರದ ಬದುಕು ನಡೆಸಿ
ಮಾನಸಿಕ ಆರೋಗ್ಯ ಕಾಪಾಡಲಿಲ್ಲ ಎಂದರೆ ದೇಹವು ಅನಾರೋಗ್ಯಕ್ಕೆ ತುತ್ತಾಗುವುದು ಖಚಿತ. ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯಸಂಬಂಧಿ ಕಾಯಿಲೆ, ಉಸಿರಾಟದ ಸಮಸ್ಯೆ ಎದುರಾಗುತ್ತದೆ. ಮನಸ್ಸಿನ ಆರೋಗ್ಯದಂತೆ ದೇಹದ ಆರೋಗ್ಯವೂ ಮುಖ್ಯ.ಮನಸ್ಸಿನಂತೆ ಮಹದೇವ ಎಂಬಂತೆ ಮನಸ್ಸಿದ್ದರೆ ಏನು ಬೇಕಾದರೂ ಮಾಡಬಹುದು. ಸಂಸ್ಕಾರಯುತ ಜೀವನ, ಸದಾಚಾರದ ಬದುಕು, ಕೇಡಿಲ್ಲದ ಚಿಂತನೆ, ನಿಯಮಿತ ಆಹಾರ ಮತ್ತು ವ್ಯಾಯಾಮ ನಮ್ಮ ಆರೋಗ್ಯದ ಗುಟ್ಟಾಗಿದೆ ಎಂದು ಹೇಳಿದರು.ಸಂವಾದ ಮೂಲಕ ಗೃಹಪ್ರವೇಶನಿವೃತ್ತ ಶಿಕ್ಷಕ ಕೆ.ಎಂ ರೆಡ್ಡಪ್ಪ, ತಮ್ಮ ಮನೆ ಸುರಭಿಯ ಗೃಹ ಪ್ರವೇಶ ಮತ್ತು ಮೊದಲ ಮಹಡಿಯನ್ನು ಸಾರ್ವಜನಿಕ ಗ್ರಂಥಾಲಯನ್ನಾಗಿಸಿ ವಿನೂತನವಾಗಿ ಗೃಹ ಪ್ರವೇಶ ನಡೆಸಿದರು. ಗೃಹಪ್ರವೇಶಕ್ಕೆ ಅರ್ಚಕರನ್ನ ಕರೆಸಿ ಹೋಮ ಹವನ ಮಂತ್ರ ತಂತ್ರ ಮಾಡಿಸಿದೆ ಕೆ ಜೆ ವಿ ಎಸ್ ಗೌರವಾಧ್ಯಕ್ಷ ಡಾ ಸಿ.ಆರ್ ಚಂದ್ರಶೇಖರ್ ರನ್ನ ಕರೆಸಿ ಮಾನಸಿಕ ಆರೋಗ್ಯ ಕುರಿತ ಸಂವಾದ ಏರ್ಪಡಿಸಿ ವಿಚಾರ ವಿನಿಮಯ ಮೂಲಕ ಗೃಹಪ್ರವೇಶ ಮತ್ತು ಗ್ರಂಥಾಲಯ ಉದ್ಘಾಟನೆ ಮಾಡಿಸಿ, ಗೃಹ ಪ್ರವೇಶಕ್ಕೆ ಆಗಮಿಸಿದ ಎಲ್ಲರಿಗೂ ಭೂರಿ ಭೋಜನ ಹಾಕಿಸಿ, ಬಸವಣ್ಣನವರ ಸಂದೇಶಗಳಿರುವ ಕಿರು ಪುಸ್ತಕವನ್ನು ವಿತರಿಸಿದರು.
ಈ ಸಂಧರ್ಭದಲ್ಲಿ ಡಾ.ಸಿ.ಆರ್.ಚಂದ್ರಶೇಖರ್ ರವರನ್ನು ಶಿಕ್ಷಕ ಕೆ.ಎಂ.ರೆಡ್ಡಪ್ಪ ಕುಟುಂಬಸ್ಥರು ಆತ್ಮೀಯವಾಗಿ ಸನ್ಮಾನಿಸಿದರು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಉಪಾಧ್ಯಕ್ಷ ಡಾ.ಆರ್,ಎನ್.ರಾಜಾನಾಯಕ್, ಕಸಾಪ ಜಿಲ್ಲಾಧ್ಯಕ್ಷ ಡಾ. ಕೋಡಿ ರಂಗಪ್ಪ, ಕಸಾಪ ಜಿಲ್ಲಾ ಕಾರ್ಯದರ್ಶಿ ಅಮೃತ್‌ಕುಮಾರ್, ಕೆ.ಜೆ.ವಿಸ್ ಕಾರ್ಯದರ್ಶಿ ಈ. ಬಸವರಾಜು, ಹಿರಿಯ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ಕೆಜೆವಿಎಸ್ ನ ಆಪ್ತ ಸಲಹೆಗಾರರಾದ ಮುನಿಕೃಷ್ಣಪ್ಪ, ಆನಂದಪ್ಪ, ತಾಲೂಕು ಕಸಾಪ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ, ಚಾಂದ್ ಪಾಶ, ಶಿಕ್ಷಕಿ ಸುಶೀಲ,ಅಣ್ಣೆಮ್ಮ , ಮತ್ತಿತರರು ಇದ್ದರು.