ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯವು ಜರುಗಲಿದ್ದು, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8000 ಹೆಚ್ಚಿನ ಅಂಚೆ ಮತ ಮತಪತ್ರಗಳು ಸ್ವೀಕೃತಗೊಂಡಿವೆ. ಘೋಷಣೆ ಪತ್ರದಲ್ಲಿನ ಮಾಹಿತಿ ಆಧಾರದ ಮೇಲೆ ಸಿಂಧು ಅಥವಾ ಅಸಿಂಧು ಎಂದು ಪರಿಗಣಿಸಲಾಗುತ್ತದೆ.
ಈ ಸಂದರ್ಭದಲ್ಲಿ ಜಿಲ್ಲಾ ಮಾಸ್ಟರ್ ಟ್ರೈನರ್ ಆದಂತಹ ಸತೀಶ್ ಮಾತನಾಡಿ, ಮತದಾನ ಎನ್ನುವುದು ಎಷ್ಟು ಮುಖ್ಯವೋ ಹಾಗೆ ಮತ ಎಣಿಕೆಯೂ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ಅಧಿಕಾರಿಯು ಮತ ಎಣಿಕೆ ಸಂದರ್ಭದಲ್ಲಿ ಮೈಯೆಲ್ಲಾ ಕಣ್ಣಾಗಿಸಿಕೊಂಡು ಕಾರ್ಯವನ್ನು ನಿರ್ವಹಿಸುವುದು ಬಹಳ ಮುಖ್ಯ ಎಂದರು.ಪ್ರತಿಯೊಂದು ಕ್ಷೇತ್ರದಲ್ಲೂ 14 ಟೇಬಲ್ ಗಳು ಇದ್ದು, 500 ಅಂಚೆ ಮತಪತ್ರಗಳನ್ನು ಹಂಚಲಾಗುತ್ತದೆ. ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಸ್ವೀಕೃತವಾದಂತಹ ಹಾಗೂ ತಿರಸ್ಕೃತಗೊಂಡಂತಹ ಮತ ಪತ್ರಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಬೇಕು. ನಂತರದಲ್ಲಿ ತಿರಸ್ಕೃತಗೊಂಡಂತಹ ಮತಪತ್ರಗಳನ್ನು ಚುನಾವಣಾ ಅಧಿಕಾರಿಗಳಿಗೆ ನೀಡಿ ಅವರಿಂದ ಅಂತಿಮ ಪರಿಶೀಲನೆಯನ್ನು ನಡೆಸಬೇಕು. ಅವರ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ ರಘು ಮಾತನಾಡಿ, ಮತದಾನದ ಗೌಪ್ಯತೆಯನ್ನು ಕಾಪಾಡುವುದು ಬಹಳ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಪ್ರಮಾಣ ಪ್ರತಿಜ್ಞಾನಿಧಿಯನ್ನು ತೆಗೆದುಕೊಂಡು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಈ ತರಬೇತಿ ಕಾರ್ಯಕ್ರಮದಲ್ಲಿ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ಮಡಿಕೇರಿ, ವಿರಾಜಪೇಟೆ, ಚಾಮುಂಡೇಶ್ವರಿ ಕ್ಷೇತ್ರ, ಕೃಷ್ಣರಾಜ ಕ್ಷೇತ್ರ ಹಾಗೂ ನರಸಿಂಹರಾಜ ಕ್ಷೇತ್ರದ ಎಆರ್ ಓಗಳು, ಕೃಪಾ ಗಣೇಶ್, ಚುನಾವಣಾ ಮತ ಎಣಿಕೆ ಅಧಿಕಾರಿಗಳು, ಜಿಲ್ಲಾ ಮಟ್ಟದ ಚುನಾವಣಾಧಿಕಾರಿಗಳು ಪಾಲ್ಗೊಂಡಿದ್ದರು.