ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯ ಬಳಿಕ ಫಲಿತಾಂಶವೇ ಅದಲು ಬದಲಾಗಿದ್ದು, ದೇಶದ ಇತಿಹಾಸದಲ್ಲಿ ಇಂತಹದ್ದೊಂದು ಪ್ರಕರಣ ಮೊದಲಾಗಿದೆ. ಹೀಗಾಗಿ, ಸಾರ್ವಜನಿಕ ವಲಯದಲ್ಲಿ ಮತ್ತು ರಾಜಕೀಯ ವಲಯದಲ್ಲಿ ಸಾಷಕ್ಟು ಚರ್ಚೆಗೆ ಕಾರಣವಾಗಿದೆ.
ಈ ನಡುವೆ ಮೇ 2ರಂದು ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ 1822 ಅಂಚೆ ಮತ ಮರು ಎಣಿಕೆ ಹಾಗೂ 2023ರಲ್ಲಿ ಅಸಿಂಧು ಮತಗಳು ಎಂದು ಪರಿಗಣಿಸಿದ 279 ಅಂಚೆಗಳ ಮರು ಪರಿಶೀಲನಾ ಕಾರ್ಯಕ್ಕೆ ಚುನಾವಣಾ ಆಯೋಗದಿಂದ ನೇಮಕಗೊಂಡಿದ್ದ ಎಣಿಕಾ ಕೇಂದ್ರದ ವೀಕ್ಷಕರು ಇದೀಗ ಈ ಕುರಿತು ಸಂಪೂರ್ಣ ವರದಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ವೀಕ್ಷಕರು ಸಲ್ಲಿಕೆ ಮಾಡಿದ ವರದಿಯಲ್ಲಿ ಅಂಚೆ ಮತಗಳ ಕುರಿತು ಸಾಕಷ್ಟು ಗೊಂದಲ ಉಂಟಾಗಿರುವ ಬಗ್ಗೆ, 2023ರ ಚುನಾವಣೆಯ ಎಣಿಕೆ ಕಾರ್ಯದ ಲೋಪದ ಬಗ್ಗೆ ಹಾಗೂ ಈ ಕುರಿತು ತನಿಖೆ ನಡೆಸಬೇಕೆಂಬ ಬಗ್ಗೆಯೂ ಉಲ್ಲೇಖಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಮೊದಲನೇ ಹಂತದಲ್ಲಿ ಅಂಚೆ ಮತಗಳು ಎಣಿಕೆ ಆಗಬೇಕಾದ ನಿಯಮಾವಳಿಯ ಪ್ರಕಾರ ಎಣಿಕೆ ನಡೆದಿರುವುದಿಲ್ಲ. ಎರಡನೇಯದಾಗಿ ಅಸಿಂಧು ಗೊಂಡ ಮತಗಳಿಗೆ ನಿಖರವಾದ ಕಾರಣ ತಿಳಿಸಬೇಕಾಗಿತ್ತು. ಮೂರನೇಯದಾಗಿ ಗೆಲುವಿನ ಅಂತರವು ತಿರಸ್ಕೃತಗೊಂಡ ಮತಗಳ ಸಂಖ್ಯೆಗಿಂತ ಕಡಿಮೆ ಇರುವುದರಿಂದ 2023ರಲ್ಲಿ ಮತ ಎಣಿಕೆ ನಡೆದ ದಿನವೇ ಮರು ಎಣಿಕೆ ನಡೆಸಬೇಕಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಾಕಷ್ಟು ಗೊಂದಲ, ಚರ್ಚೆಗೆ ಎಡೆ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು 2023ರಲ್ಲಿ ಅಂಚೆ ಮತ ಮರು ಎಣಿಕೆ ವೇಳೆ ವಿಡಿಯೋ ಚಿತ್ರಣ ಹಾಗೂ ಇತರೆ ದಾಖಲಾತಿಗಳನ್ನು ಆಯೋಗಕ್ಕೆ ಸಲ್ಲಿಕೆ ಮಾಡಲಾಗಿದೆ. ಈ ಬಗ್ಗೆ ಆಯೋಗವು ತನಿಖೆ ನಡೆಸುವುದಕ್ಕೆ ಸಿದ್ಧತೆ ಸಹ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ನಡುವೆ ಸ್ಟ್ರಾಂಗ್ ರೂಂನಲ್ಲಿ ಸೀಲ್ ಮಾಡಿದ ಮತಗಳಲ್ಲಿ ಕೆಲವು ಮತಗಳು ನಾಪತ್ತೆ ಹೇಗೆ?, ಆ ಮತ ಎಲ್ಲಿ ಹೋದವು. ಜತೆಗೆ, 2023ರ ಮೇ 13 ರಂದು ಸಿಂಧು ಮತಗಳು ಎಂದು ಚುನಾವಣಾಧಿಕಾರಿ ಸೇರಿದಂತೆ ಎಲ್ಲ ಪಕ್ಷದ ಸದಸ್ಯರು ಸಹಿ ಮಾಡಿದ ಮತಗಳ ಪೈಕಿ ಬರೋಬ್ಬರಿ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ 255 ಅಂಚೆ ಮತ ಹಾಗೂ ಬಿಜೆಪಿ ಅಭ್ಯರ್ಥಿ ಜೀವರಾಜ್ ಲಭ್ಯವಾಗಿ 2 ಮತ ಹೇಗೆ ಈ ಡಬ್ಬಲ್ ಎಂಟ್ರಿ, ಮಲ್ಟಿಪಲ್ ಎಂಟ್ರಿ ಆಗುವ ಮೂಲಕ ಅಸಿಂಧು ಆಗುವುದಕ್ಕೆ ಸಾಧ್ಯ ಎಂಬುದರ ಬಗ್ಗೆ ಅಧಿಕಾರಿಗಳು ಹುಡುಕಾಟ, ಪರಿಶೀಲನೆ ಆರಂಭಿಸಿದ್ದಾರೆ.
ಎನ್.ಎಂ.ನಾಗರಾಜ್ ಜಿಲ್ಲಾಧಿಕಾರಿ, ಚಿಕ್ಕಮಗಳೂರು.