ನಾಲ್ಕನೇ ದಿನಕ್ಕೆ ಕಾಲಿರಿಸಿದ ಅನಿರ್ದಿಷ್ಟಾವಧಿ ಪ್ರತಿಭಟನೆ । ಕಮಲೇಶ್ ಚಂದ್ರ ವರದಿ ಸಂಪೂರ್ಣ ಜಾರಿಗೆ ಒತ್ತಾಯ
ಏಳನೇ ವೇತನ ಆಯೋಗ ಮತ್ತು ಕಮಲೇಶ್ ಚಂದ್ರ ವರದಿ ಅನುಷ್ಠಾನಕ್ಕಾಗಿ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರು ನಗರದ ಬಿಬಿ ರಸ್ತೆಯ ಜಿಲ್ಲಾ ಕೇಂದ್ರ ಅಂಚೆ ಕಚೇರಿ ಮುಂದೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿರಿಸಿದೆ.
7ನೇ ವೇತನ ಆಯೋಗ ಜಾರಿ ಹಾಗೂ ಕಮಲೇಶ್ ಚಂದ್ರ ವರದಿಯನ್ನು ಸಂಪೂರ್ಣವಾಗಿ ಜಾರಿ, 8 ಗಂಟೆ ಕೆಲಸ, ನಿವೃತ್ತಿ ವೇತನ ನೀಡಿ 12/24/36 ವರ್ಷ ಸೇವೆ ಸಲ್ಲಿಸಿದವರಿಗೆ ಹೆಚ್ಚುವರಿ ಇಂಕ್ರಿಮೆಂಟ್ ನೀಡಿ, ನೂತನ ನೇಮಕಾತಿ ನೌಕರರಿಗೆ ಕೆಲಸದ ಆದಾರಿತವಾಗಿ ವೇತನ ನಿಗದಿಗೊಳಿಸಿ, ಎಲ್ಲಾ ಬಿಒ ಗಳಿಗೆ ಲ್ಯಾಪ್ ಟಾಪ್ ಪ್ರಿಂಟರ್, ಬ್ಯಾಡ್ ಬ್ಯಾಂಡ್ ನೆಟ್ವರ್ಕ್ ನೀಡುವಂತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಚಿಕ್ಕಬಳ್ಳಾಪುರ, ಗೌರಿಬಿದನೂರು ವಿಭಾಗೀಯ ನೌಕರರು ಅಂಚೆ ಕಚೇರಿಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಪ್ರತಿಭಟನೆಯನ್ನು ಉದ್ದೇಶಿಸಿ ನ್ಯಾಷನಲ್ ಯೂನಿಯನ್ ಗ್ರಾಮೀಣ ಅಂಚೆ ನೌಕರರ ಸಂಘದ ವಿಭಾಗೀಯ ಕಾರ್ಯದರ್ಶಿ ಸಂಜೀವಪ್ಪ ಮಾತನಾಡಿ, ದೇಶದಲ್ಲಿರುವ ಮೂರು ಲಕ್ಷ ಅಂಚೆ ನೌಕರರ ಕುಟುಂಬಗಳನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ನಮ್ಮ ಬೇಡಿಕೆ ಈಡೇರಿಕೆಗಾಗಿ ಈಗಾಗಲೇ ಸಾಕಷ್ಟು ಹೋರಾಟಗಳನ್ನು ಮಾಡಿದ್ದೇವೆ. ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದೇವೆ. ಆದರೂ ನಮ್ಮ ಬೇಡಿಕೆಗಳು ಈಡೇರಿಲ್ಲ. ಅದಕ್ಕಾಗಿ ಈಗ ಅನಿರ್ದಿಷ್ಟಾವದಿ ಪ್ರತಿಭಟನೆ ನಡೆಸುತಿದ್ದು, ಬೇಡಿಕೆ ಈಡೇರಿಸುವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದರು.
---------
ನೌಕರರ ಪ್ರಮುಖ ಬೇಡಿಕೆಗಳು
--------
ಕೆಲಸ ಮಾತ್ರ 8 ಗಂಟೆ ಮಾಡ್ತೇವೆ, ಆದ್ರೆ ಸಂಬಳ ಮಾತ್ರ 4 ಗಂಟೆ ಲೆಕ್ಕ. ನಮಗೆ 4 ಗಂಟೆ ಸಮಯ ಮಾತ್ರ ಕೆಲಸದ ಅವಧಿ ನಿಗದಿಗೊಳಿಸಲಾಗಿದೆ. ಆದ್ರೆ ಎಂಟು ಗಂಟೆಗಳ ಕಾಲ ದುಡಿಸಿಕೊಳ್ಳುತ್ತಾರೆ. ಬ್ಯಾಂಕುಗಳಲ್ಲಿ ನಿರ್ವಹಿಸಬೇಕಾದ ಎಲ್ಲ ಕೆಲಸಗಳನ್ನು ನಾವು ನಿರ್ವಹಿಸಬೇಕಿದೆ. ಮಕ್ಕಳು, ಗಂಡ, ಸಂಸಾರವನ್ನು ನೀಗಿಸುವುದು ಕಷ್ಟವಾಗುತ್ತಿದೆ. ನಮ್ಮ ಕೆಲಸವನ್ನು ಪರಿಗಣಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದೇವೆ.