ಮಂಗ್ಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಒತ್ತಾಯಿಸಿ ಅಂಚೆ ಕಾರ್ಡ್ ಚಳವಳಿ

KannadaprabhaNewsNetwork |  
Published : Oct 24, 2025, 01:00 AM IST
ಮಂಗ್ಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ಆಗ್ರಹಿಸಿ ಅಂಚೆ ಕಾರ್ಡ್‌ ಚಳವಳಿಗೆ ಚಾಲನೆ ನೀಡಿದ ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ | Kannada Prabha

ಸಾರಾಂಶ

ನಗರದ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಅವರಣದಲ್ಲಿರುವ ಮಂಗಳೂರು ವಕೀಲರ ಸಂಘದ ಕಚೇರಿಯಲ್ಲಿ ಅಂಚೆ ಕಾರ್ಡ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಒತ್ತಾಯಿಸಿ ಇಡೀ ಜಿಲ್ಲೆಯನ್ನೇ ಸೇರಿಸಿಕೊಂಡು ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಗುರುವಾರ ಅಂಚೆಕಾರ್ಡ್‌ ಚಳವಳಿ ನಡೆಸಲಾಗಿದೆ.

ನಗರದ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಅವರಣದಲ್ಲಿರುವ ಮಂಗಳೂರು ವಕೀಲರ ಸಂಘದ ಕಚೇರಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಈ ಅಭಿಯಾನಕ್ಕೆ ಚಾಲನೆ ನೀಡಿ, ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಯು ಸುದೀರ್ಘ ಅವಧಿಯ ಬೇಡಿಕೆಯಾಗಿದೆ, ಎಲ್ಲ ಪಕ್ಷಗಳ ನಾಯಕರೂ ಈ ಬೇಡಿಕೆಗೆ ಪಕ್ಷಾತೀತವಾಗಿ ಬೆಂಬಲ ನೀಡಿದ್ದಾರೆ, ಈ ಬೇಡಿಕೆ ಈಡೇರಲು ಇದೇ ರೀತಿಯ ಹೋರಾಟ ಮುಂದುವರಿಯಬೇಕಿದೆ ಎಂದರು.

ಈ ಭಾಗದಿಂದ ಬಹಳಷ್ಟು ವ್ಯಾಜ್ಯಗಳು ಹೈಕೋರ್ಟ್‌ಗೆ ಹೋಗುತ್ತಿದ್ದು, ಅದಕ್ಕಾಗಿ ನಾಗರಿಕರು ಪ್ರತಿ ವಿಚಾರಣೆಗೂ ಬೆಂಗಳೂರಿಗೆ ತೆರಳುವಂತಾಗಿದೆ. ಇದು ಅವರ ಖರ್ಚುವೆಚ್ಚಗಳನ್ನು ಹೆಚ್ಚಿಸಿದೆ, ದ.ಕ ಜಿಲ್ಲೆಗೂ ಧಾರವಾಡ, ಕಲಬುರ್ಗಿ ರೀತಿಯಲ್ಲೇ ಹೈಕೋರ್ಟ್‌ ಪೀಠ ಬೇಕು, ಈ ಅಭಿಯಾನ ತಾರ್ಕಿಕ ಅಂತ್ಯ ಕಾಣುವವರೆಗೂ ನಾನು ಸಹಕಾರ ನೀಡುತ್ತೇನೆ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಮೋನಪ್ಪ ಭಂಡಾರಿ ಮಾತನಾಡಿ, ಅಭಿಯಾನವನ್ನು ಯಶಸ್ವಿಯಾಗಿ ನಡೆಸುವುದಕ್ಕಾಗಿ ಸಮಿತಿ ರಚಿಸಲಾಗಿದೆ. ವಕೀಲರು, ಕಕ್ಷಿದಾರರು, ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರನ್ನು ಸೇರಿಸಿಕೊಂಡು ಮುನ್ನಡೆಯಬೇಕಿದೆ, ದಕ್ಷಿಣ ಕನ್ನಡಕ್ಕೆ ಹೈಕೋರ್ಟ್‌ ಪೀಠ ಬೇಕೇ ಬೇಕು ಹಾಗೂ ಅಭಿಯಾನವನ್ನು ಫಲಪ್ರದಗೊಳಿಸಲೇ ಬೇಕು ಎಂದರು.ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಭಾಗಕ್ಕೆ ಸಂಬಂಧಿಸಿದಂತೆ ಸುಮಾರು 6,000 ಪ್ರಕರಣಗಳು ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿ ಇವೆ. ಮಂಗಳೂರಿನಲ್ಲೇ ಹೈಕೋರ್ಟ್‌ ಪೀಠ ಸ್ಥಾಪನೆಯಾದರೆ ದ.ಕ, ಉಡುಪಿ ಅಲ್ಲದೆ, ಉ.ಕ, ಕೊಡಗು, ಚಿಕ್ಕಮಗಳೂರಿಗರಿಗೂ ಅನುಕೂಲವಾಗಲಿದೆ ಎಂದರು.

ಹೈಕೋರ್ಟ್‌ ಪೀಠ ಸ್ಥಾಪನೆಗೆ ಒತ್ತಾಯಿಸಿ ದ.ಕ. ಜಿಲ್ಲೆಯಿಂದ ಒಟ್ಟು 5,000 ಅಂಚೆಕಾರ್ಡ್‌ಗಳನ್ನು ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರಿಗೆ ಕಳುಹಿಸಲಾಗುತ್ತಿದೆ. ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮಗಳ ಮೂಲಕವೂ ಅಭಿಯಾನ ಆರಂಭಿಸಲಾಗುವುದು ಎಂದು ರಾಘವೇಂದ್ರ ತಿಳಿಸಿದರು.ವಿಧಾನ ಪರಿಷತ್‌ ಸದಸ್ಯ ಐವನ್ ಡಿʼಸೋಜಾ, ಮಾಜಿ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು