ಮಳೆ ಅವಾಂತರ, ಅಡಿಕೆ ಬೆಳೆಗಾರರಲ್ಲಿ ಆತಂಕ

KannadaprabhaNewsNetwork |  
Published : Oct 24, 2025, 01:00 AM IST
ಮಳೆ  ಅವಾಂತರ ,ಭಯ ಬಿದ್ದಿದ್ದಾನೆ ಅಡಿಕೆ ಬೆಳೆಗಾರ | Kannada Prabha

ಸಾರಾಂಶ

ತಾಲೂಕಿನ ರೈತರು ಅವಲಂಬಿಸಿರುವ ಅಡಿಕೆ ಬೆಳೆಯ ಮೇಲೆ ಹೆಚ್ಚಿನ ಸಮಸ್ಯೆ ಉಂಟು ಮಾಡುತ್ತದೆ ಎಂಬ ಆತಂಕ ರೈತಾಪಿ ವರ್ಗದಲ್ಲಿ ಕಂಡುಬಂದಿದೆ.

ದೀಪಾವಳಿ ಹಬ್ಬ ಮುಗೀತು, ಆದರೂ ಮಳೆಗಾಲ ಬಿಟ್ಟಿಲ್ಲಪ್ರಸಾದ್ ನಗರೆ

ಕನ್ನಡಪ್ರಭ ವಾರ್ತೆ ಹೊನ್ನಾವರ

ದೀಪಾವಳಿ ಹಬ್ಬ ಮುಗೀತು ಆದರೂ ಮಳೆಗಾಲ ಬಿಟ್ಟಿಲ್ಲ ಎಂದು ಮಾತನಾಡಿಕೊಳ್ಳುವವರ ಸಂಖ್ಯೆ ಅಧಿಕವಾಗಿದೆ. ಕಾರಣ ಮುಂಗಾರು ಮಳೆ, ನೈಋತ್ಯ ಮಾನ್ಸೂನ್ ಮುಗಿದು ಇದೀಗ ಈಶಾನ್ಯ ಮಾರುತದ ಪ್ರಭಾವದಿಂದ ಮಳೆ ಬೀಳುತ್ತಿರುವುದು. ಅಲ್ಲದೆ ಇದರಿಂದ ತಾಲೂಕಿನ ರೈತರು ಅವಲಂಬಿಸಿರುವ ಅಡಿಕೆ ಬೆಳೆಯ ಮೇಲೆ ಹೆಚ್ಚಿನ ಸಮಸ್ಯೆ ಉಂಟು ಮಾಡುತ್ತದೆ ಎಂಬ ಆತಂಕ ರೈತಾಪಿ ವರ್ಗದಲ್ಲಿ ಕಂಡುಬಂದಿದೆ.

ಹವಾಮಾನದ ವೈಪರೀತ್ಯದ ಪರಿಣಾಮ ಹಲವು ರೀತಿಯ ಸಮಸ್ಯೆ ಕಂಡುಬರುತ್ತಿದೆ. ಜೂನ್ -ಜುಲೈನಲ್ಲಿ ಅಡಿಕೆ ಬೆಳೆಗೆ ಮೈಲುತುತ್ತನ್ನು ಹೊಡೆಸುವ ಸಮಸ್ಯೆ ಎದುರಾಗಿತ್ತು. ಅದರ ಪರಿಣಾಮದಿಂದ ಅಡಿಕೆ ಬೆಳೆಗೆ ಕೊಳೆರೋಗ ಬಾಧಿಸಿತ್ತು. ನಂತರ ಹಂಗೋ ಹಿಂಗೋ ಎಂದು ಕೊಳೆ ಔಷಧವನ್ನು ಸಿಂಪಡಣೆ ಮಾಡಿಕೊಂಡರು. ಎರಡು ಬಾರಿ ಔಷಧ ಸಿಂಪಡಣೆ ಮಾಡುವಲ್ಲಿ ಮೂರು ಬಾರಿ ಮೈಲುತುತ್ತನ್ನು ಸಿಂಪಡಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಹೀಗಿದ್ದೂ ರೈತರು ಮಳೆಗೆ ಹಿಡಿಶಾಪವನ್ನು ಹಾಕುತ್ತಾ ತಮ್ಮ ಕೆಲಸ ಮುಗಿಸಿದ್ದರು. ಅಕ್ಟೋಬರ್ ತಿಂಗಳು ಮುಗಿಯುತ್ತಾ ಬಂದರು ಮಳೆಗಾಲ ಮುಗಿದಿಲ್ಲ. ಪ್ರತಿ ದಿನ ಸಂಜೆ ಮಳೆ ಬೀಳುತ್ತಲೆ ಇದೆ. ಮುಂಗಾರು ಮಳೆಯಷ್ಟು ಜೋರಾಗಿ ಬೀಳುತ್ತಿಲ್ಲವಾದರೂ, ಮಳೆ ಹುಟ್ಟಿಸಿರುವ ಆತಂಕವಂತೂ ದೂರವಾಗಿಲ್ಲ.

ಅಡಿಕೆ ಒಣಗಿಸುವುದೇ ದೊಡ್ಡ ಚಿಂತೆ:

ಇನ್ನು ಮೈಲುತುತ್ತೆಯನ್ನು ಸಿಂಪಡಿಸಿದ ಬಳಿಕ ಹಣ್ಣಾದ ಅಡಿಕೆ ಕೊಯ್ಲು ಮಾಡಬೇಕು. ಈ ವೇಳೆಯಲ್ಲಿ ಜಾಸ್ತಿ ಅಡಿಕೆ ಕೊನೆ ಬರದೇ ಇದ್ದರೂ ಸಹ ಸರ್ವೆಸಾಮಾನ್ಯವಾಗಿ ಸರಾಸರಿ ಒಂದು ನೂರು ಕೊನೆಯಂತೂ ಬರುತ್ತದೆ. ಈ ಕೊಯ್ದ ಅಡಿಕೆಯನ್ನು ಒಣಗಿಸುವುದೇ ದೊಡ್ಡ ಚಿಂತೆಯಾಗಿ ರೈತರನ್ನು ಕಾಡುತ್ತಿದೆ. ಮನೆಯ ಅಂಗಳದಲ್ಲಿ ಒಣಗಿಸಲು ಸಾಧ್ಯವಾಗದೇ ಕೊಯ್ದ ಅಡಿಕೆ ಮೇಲೆ ಪ್ಲಾಸ್ಟಿಕ್ ಮುಚ್ಚಿಡಬೇಕಾದ ಅನಿವಾರ್ಯತೆ ಎದುರಾಗಿದೆ. ಚಾಲಿ ಅಡಿಕೆಯನ್ನು ಮಾಡಲು ಆಗದೇ ಇರುವ ಪರಿಸ್ಥಿತಿ ರೈತರದ್ದಾಗಿದೆ. ಅಲ್ಲದೆ ಎಷ್ಟು ಹೊತ್ತಿಗೆ ಮೋಡ ಕವಿಯುತ್ತದೆ, ಮಳೆ ಬರುತ್ತದೆ ಎಂಬುದನ್ನು ನೋಡುತ್ತಾ ಕುಳಿತುಕೊಳ್ಳಬೆಕಾಗಿದೆ.

ಅಡಿಕೆ ಸಿಂಗಾರದೊಳಗೆ ಮಳೆನೀರು ಸಿಲುಕುವ ಸಂಭವ

ಇನ್ನು ಮಳೆ ಇಡೀ ದಿನ ಸುರಿಯದೇ ಇದ್ದರು ಬಂದಷ್ಟು ಹೊತ್ತಲ್ಲಿ ಅನಾಹುತ ಮಾಡುತ್ತದೆ. ಈಗಾಗಲೇ ಅಡಿಕೆ ಮರದ ಮೇಲಿರುವ ಒಂದು ಕೊನೆ ಕೊಯ್ದಿದ್ದಾರೆ. ಆದರೆ ಮುಂದೆ ಅಡಿಕೆ ಆಗಲಿರುವ ಸಿಂಗಾರ ಬಿಡುವ ಹೊತ್ತು ಇದಾಗಿದೆ. ಈ ವೇಳೆಯಲ್ಲಿ ಮಳೆ ನೀರು ಸಿಂಗಾರದ ಒಳಗೆ ಹೋದರೆ ಸಿಂಗಾರ ಕೊಳೆಯುತ್ತದೆ. ಸಿಂಗಾರ ಕೊಳೆತರೆ ಅಡಿಕೆ ಇಳುವರಿ ತನ್ನಿಂದ ತಾನೆ ಕಡಿಮೆಯಾಗುತ್ತದೆ. ಅಡಿಕೆ ಬೆಳೆಯನ್ನೆ ನೆಚ್ಚಿಕೊಂಡಿದ್ದರೆ ಆಗದು ಎಂಬ ಮನಸ್ಥಿತಿಗೆ ಬೆಳೆಗಾರ ತಲುಪುತ್ತಿದ್ದಾನೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು