ಶಿರಸಿಯ ಪಂಡಿತ್ ಆಸ್ಪತ್ರೆಯಲ್ಲಿ 7 ತಿಂಗಳಿಗೆ ಹುಟ್ಟಿದ 900 ಗ್ರಾಂ ತೂಕದ ಮಗುವಿಗೆ ಆರೈಕೆ

KannadaprabhaNewsNetwork |  
Published : Oct 24, 2025, 01:00 AM IST
ಪೊಟೋ23ಎಸ್.ಆರ್.ಎಸ್‌11 (ನಗರದ ಪಂಡಿತ್ ಜನರಲ್ ಆಸ್ಪತ್ರೆಯಲ್ಲಿ ಮಗುವಿಗೆ ಮರುಜನ್ಮ ನೀಡಿದ ವೈದ್ಯರ ತಂಡ.) | Kannada Prabha

ಸಾರಾಂಶ

ನಗರದ ಪಂಡಿತ್ ಜನರಲ್ ಆಸ್ಪತ್ರೆ ವಿಶಿಷ್ಟ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಕೇವಲ 7 ತಿಂಗಳು (28 ವಾರ) ಗರ್ಭಾವಧಿಯಲ್ಲಿ ಹುಟ್ಟಿದ ಕೇವಲ 900 ಗ್ರಾಂ ತೂಕದ ಮಗು, ಚಿಕಿತ್ಸೆ ನಂತರ ಪೂರ್ಣ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿ ಮನೆಗೆ ತೆರಳಿತು.

ಶಿರಸಿ:

ನಗರದ ಪಂಡಿತ್ ಜನರಲ್ ಆಸ್ಪತ್ರೆ ವಿಶಿಷ್ಟ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಕೇವಲ 7 ತಿಂಗಳು (28 ವಾರ) ಗರ್ಭಾವಧಿಯಲ್ಲಿ ಹುಟ್ಟಿದ ಕೇವಲ 900 ಗ್ರಾಂ ತೂಕದ ಮಗು, ಚಿಕಿತ್ಸೆ ನಂತರ ಪೂರ್ಣ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿ ಮನೆಗೆ ತೆರಳಿತು.

ಈ ಅತ್ಯಂತ ಕಠಿಣ ವೈದ್ಯಕೀಯ ಸಾಧನೆಗೆ ಡಾ. ಸಂದೀಪ್ ಹೆಗಡೆ ನೇತೃತ್ವದ ಮಕ್ಕಳ ತಜ್ಞರ ಏನ್‌ಐಸಿಯು (NICU) ತಂಡ ಭಾಜನವಾಗಿದೆ. ತಂಡದ ನಿರಂತರ ಸೇವೆ, ಸೂಕ್ಷ್ಮ ನಿಗಾ ಮತ್ತು ವೈಜ್ಞಾನಿಕ ಆರೈಕೆಯ ಫಲವಾಗಿ ಮಗು ಬದುಕು ಮರಳಿ ಪಡೆದಂತಾಗಿದೆ. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ನೇತ್ರಾವತಿ ಶಿರಸಿಕರ್ ಈ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿ, ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ತಾಲೂಕಾ ಆಸ್ಪತ್ರೆಯ ವೈದ್ಯರು ನೀಡಿದ ಸೇವೆ ಶ್ಲಾಘನೀಯ. ಗ್ರಾಮೀಣ ಪ್ರದೇಶದಲ್ಲಿಯೂ ತಜ್ಞರ ಆರೈಕೆಯಿಂದ ಶಿಶು ಬದುಕುಳಿದಿರುವುದು ದೊಡ್ಡ ಸಾಧನೆ ಎಂದು ಹೇಳಿದರು.

ಮಗು ಜನಿಸಿದಾಗ ಉಸಿರಾಟದ ತೊಂದರೆ ಎದುರಾದ ಕಾರಣ 10 ದಿನಗಳ ಕಾಲ ಉಸಿರಾಟ ಸಹಾಯ (cpap) ನೀಡಲಾಯಿತು. ನಿಧಾನವಾಗಿ ಉಸಿರಾಟ ಸಾಮಾನ್ಯಗೊಂಡಂತೆ, ಅನೇಕ ಸವಾಲುಗಳನ್ನೂ ಕ್ರಮೇಣ ಎದುರಿಸಲಾಯಿತು. ಇನ್ಫೆಕ್ಷನ್‌ನಿಂದಾಗಿ 4 ವಾರಗಳ ಕಾಲ ಆಂಟಿಬಯೋಟಿಕ್ ಚಿಕಿತ್ಸೆ ನೀಡಲಾಯಿತು. ನಂತರ ಹಾಲು ಜೀರ್ಣಿಸುವ ಸಮಸ್ಯೆ, ರಕ್ತಹೀನತೆ, ಇವುಗಳನ್ನೂ ವೈದ್ಯರು ಯಶಸ್ವಿಯಾಗಿ ನಿಭಾಯಿಸಿದರು. ಅಗತ್ಯವಿದ್ದಾಗ ರಕ್ತ ನೀಡಲಾಯಿತು, ಶಿಶುವಿನ ಕಣ್ಣು (ROP) ಮತ್ತು ಕಿವಿ (OAE) ಪರೀಕ್ಷೆ ಸಹ ಪೂರ್ಣಗೊಳಿಸಲಾಯಿತು. ಮುಂದಿನ ದಿನಗಳಲ್ಲಿ ನಿಯಮಿತ ಫಾಲೋ-ಅಪ್ ಸಲಹೆ ನೀಡಲಾಗಿದೆ.

ಮಗುವಿನ ತಂದೆ-ತಾಯಂದಿರು ಸಂತಸ ವ್ಯಕ್ತಪಡಿಸಿದ್ದು, ಇದು ನಮ್ಮ ಮಗುವಿಗೆ ಮರುಜನ್ಮದಂತಾಗಿದೆ. ವೈದ್ಯರ ಸಮರ್ಪಿತ ಸೇವೆ ಮತ್ತು ದೇವರ ಕೃಪೆಯಿಂದ ಇವತ್ತು ಈ ದಿನ ನೋಡುತ್ತಿದ್ದೇವೆ ಎಂದು ನುಡಿದಿದ್ದಾರೆ.

ಗ್ರಾಮೀಣ ತಾಲೂಕಾ ಆಸ್ಪತ್ರೆಯ ಮಟ್ಟದಲ್ಲೇ ಇಂತಹ ಸಂಕೀರ್ಣ ಶಿಶು ಚಿಕಿತ್ಸೆಯಲ್ಲಿ ಯಶಸ್ಸು ಕಂಡಿರುವುದು ಶಿರಸಿಯ ಆರೋಗ್ಯ ವ್ಯವಸ್ಥೆಗೆ ಹೆಮ್ಮೆ ತರುವಂತಹ ಸಾಧನೆಯಾಗಿದೆ.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ