ಮಹಿಳೆ ಮತ್ತು ಮಕ್ಕಳ ರಕ್ಷಣೆ ಕುರಿತು ಅರಿವು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಭಿತ್ತಿಪತ್ರ ಪ್ರದರ್ಶನ

KannadaprabhaNewsNetwork |  
Published : Oct 16, 2025, 02:00 AM IST
42 | Kannada Prabha

ಸಾರಾಂಶ

ವಿಜ್ಞಾನ ಓದಿನ ಜತೆಗೆ ಕಲೆ ಮತ್ತು ಸಾಹಿತ್ಯ ಅಭ್ಯಾಸ ಬದುಕನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಡುವುದರಿಂದ ಅದರ ಕಡೆ ಕೂಡ ಮನಸು ಮಾಡಿ. ವಿಜ್ಞಾನ ಕಲಿಕೆ ಕೇವಲ ಪದವಿ ಗಳಿಸಲು ಸಹಾಯ ಮಾಡುತ್ತದೆ. ಆದರೆ ಕಲೆ ಮತ್ತು ಸಾಹಿತ್ಯ ಮನಸನ್ನು ಹೆಚ್ಚು ಸಂತೋಷಗೊಳಿಸುತ್ತದೆ. ಅಲ್ಲದೆ, ಬದುಕನ್ನು ಅರ್ಥಪೂರ್ಣವಾಗಿ ಸಾಗಿಸಲು ಸಹಕಾರಿ.

ಕನ್ನಡಪ್ರಭ ವಾರ್ತೆ ಮೈಸೂರು

ಮಹಿಳೆ ಮತ್ತು ಮಕ್ಕಳ ರಕ್ಷಣೆ ಕುರಿತು ಅರಿವು ಮೂಡಿಸುವ ಸಲುವಾಗಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಇಂಗ್ಲಿಷ್ ವಿಭಾಗದ ವತಿಯಿಂದ ರಾಣಿ ಕೆಂಪನಂಜಮ್ಮಣ್ಣಿ ಅಮ್ಮನವರ ಉದ್ಯಾನದಲ್ಲಿ ಬುಧವಾರ ಭಿತ್ತಿಪತ್ರ ಪ್ರದರ್ಶನ ಏರ್ಪಡಿಸಿತ್ತು.

ದ್ವಿತೀಯ ಬಿ.ಎಸ್ಸಿ ಪದವಿ ತರಗತಿಯ ಸುಮಾರು 165 ವಿದ್ಯಾರ್ಥಿಗಳು ರಚಿಸಿದ ಸಮಾಜಮುಖಿ, ಮಹಿಳಾ ಅಭ್ಯುದಯ ಕೇಂದ್ರಿತ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು.

ಮಹಿಳೆ ಮತ್ತು ಮಕ್ಕಳ ರಕ್ಷಣೆ ಕುರಿತು ಅರಿವು ಮೂಡಿಸುವ ಭಿತ್ತಿಪತ್ರಗಳ ಜತೆಗೆ ರಕ್ತದಾನ, ಕೃತಕ ಬುದ್ಧಿಮತ್ತೆ, ನಿಧಾನವೇ ಪ್ರಧಾನ, ಆಹಾರ ವಿಜ್ಞಾನ, ಮಕ್ಕಳ ಸುರಕ್ಷತೆ, ಪ್ಲಾಸ್ಟಿಕ್ ಬಳಕೆ ನಿಷೇಧ, ಭೂಮಂಡಲ ರಕ್ಷಣೆ, ಡ್ರಗ್ಸ್ ನಿಷೇಧ, ಹವಾಮಾನ ವೈಪರೀತ್ಯ, ಆರೋಗ್ಯ ರಕ್ಷಣೆ, ಮಾನವ ಅಂಗಾಂಗ ದಾನ, ಹೆಣ್ಣುಮಕ್ಕಳ ಶಿಕ್ಷಣ, ಮರ ಗಿಡ ಪರಿಸರ ರಕ್ಷಣೆ, ಬಾಲಕಾರ್ಮಿಕ ಪದ್ಧತಿ ವಿರೋಧ, ವಾಯು ಮಾಲಿನ್ಯ, ಕ್ಯಾನ್ಸರ್, ಕೋವಿಡ್ 19, ಅರಣ್ಯೀಕರಣ, ಇಂಡಿಯಾ ಮತ್ತು ತಾತ್ವಿಕತೆ, ತಂಬಾಕು ಸೇವನೆ ಪರಿಣಾಮ, ಮಹಿಳೆ ಮೇಲೆ ದೌರ್ಜನ್ಯ, ಜಲ ಸಂರಕ್ಷಣೆ, ಟೆರಾಕೊಟಾ ಆಭರಣ, ಸಮಾಜಮುಖಿ, ಮಹಿಳಾ ಸಂವೇದನೆ ಮತ್ತು ಮಕ್ಕಳ ಕಲ್ಯಾಣ ಇತ್ಯಾದಿ ಸಾಮಾಜಿಕ ಅರಿವಿನ ವಿಷಯಗಳ ಕುರಿತು ವಿವಿಧ ವಿಭಾಗಗಳ ವಿದ್ಯಾರ್ಥಿಗಳು ರಚಿಸಿದ ಭಿತ್ತಿಪತ್ರಗಳ ಪ್ರದರ್ಶನ ಮಾಡಲಾಯಿತು.

ಮುಖ್ಯಅತಿಥಿಯಾಗಿ ದೃಶ್ಯ ಕಲಾವಿದ ಮತ್ತು ಗ್ರಾಫಿಕ್ ವಿನ್ಯಾಸಕ ಶ್ರೀದರ್ಶನ್ ಭಾಸ್ಕರ್ ಮಲ್ವಾಂಕರ್ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಓದಿನ ಜತೆಗೆ ಕಲೆ ಮತ್ತು ಸಾಹಿತ್ಯ ಅಭ್ಯಾಸ ಬದುಕನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಡುವುದರಿಂದ ಅದರ ಕಡೆ ಕೂಡ ಮನಸು ಮಾಡಿ ಎಂದು ಸಲಹೆ ನೀಡಿದರು.

ವಿಜ್ಞಾನ ಕಲಿಕೆ ಕೇವಲ ಪದವಿ ಗಳಿಸಲು ಸಹಾಯ ಮಾಡುತ್ತದೆ. ಆದರೆ ಕಲೆ ಮತ್ತು ಸಾಹಿತ್ಯ ಮನಸನ್ನು ಹೆಚ್ಚು ಸಂತೋಷಗೊಳಿಸುತ್ತದೆ. ಅಲ್ಲದೆ, ಬದುಕನ್ನು ಅರ್ಥಪೂರ್ಣವಾಗಿ ಸಾಗಿಸಲು ಸಹಕಾರಿ ಎಂದರು.

ಕೃತಕ ಬುದ್ಧಿಮತ್ತೆ ಆಳುತ್ತಿರುವ ಇಂದಿನ ದಿನಗಳಲ್ಲಿ ಆಧುನಿಕ ತಾಂತ್ರಿಕ ಕೌಶಲ್ಯ ಕಲಿಕೆ ಉದ್ಯೋಗ ಒದಗಿಸಿ ಕೊಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಪ್ರೊ.ಎಂ. ಅಬ್ದುಲ್ ರಹಿಮಾನ್ ಮಾತನಾಡಿ, ಪದವಿ ದಿನಗಳಲ್ಲಿ ಶೈಕ್ಷಣಿಕ ಓದಿನ ಜತೆಗೆ ಕಲೆ ಮತ್ತು ಕ್ರಿಯಾಶೀಲ ನಡೆಗಳ ಕಡೆಗೆ ಗಮನ ಹರಿಸಲು ಸಲಹೆ ನೀಡಿದರು.

ವಿದ್ಯುನ್ಮಾನ ಮತ್ತು ತಂತ್ರಜ್ಞಾನ ಎರಡು ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆ ಆಗುತ್ತಿರುವ ಈ ಕಾಲದಲ್ಲಿ ಬದುಕಿನ ಹಾದಿ ಕಂಡುಕೊಳ್ಳಲು ಕ್ರಿಯಾಶೀಲತೆ ಬಹುಮುಖ್ಯ ಪಾತ್ರ ವಹಿಸಲಿದೆ ಎಂದು ಹೇಳಿದರು.

ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗೋವಿಂದರಾಜು ಮಾತನಾಡಿ, ಭಿತ್ತಿಪತ್ರ ರಚನೆ ಕೇವಲ ಶೈಕ್ಷಣಿಕ ಅಗತ್ಯ ಪ್ರಕ್ರಿಯೆ ಮಾತ್ರ ಆಗದೆ, ಉದ್ಯೋಗ ಮತ್ತು ಬದುಕಿನ ಮಾರ್ಗವಾಗಿ ಮಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಅತಿಥಿಗಳಾಗಿ ಡಾ. ರಾಮಚಂದ್ರ, ಎನ್.ಎಸ್.ಎಸ್. ಅಧಿಕಾರಿ ಡಾ. ಬಿ. ಲಕ್ಷ್ಮಣ, ಡಾ. ನಂಜುಂಡಸ್ವಾಮಿ, ಅಧ್ಯಾಪಕರಾದ ಎಚ್.ಎಸ್. ರಂಗನಾಥ, ಎಚ್.ಆರ್. ದಿನೇಶ, ಕೆ.ಎಂ. ಮಂಜುನಾಥ, ಟಿ.ವಿ. ಲೋಕೇಶ್, ವಿದ್ಯಾರ್ಥಿಗಳು, ಅಧ್ಯಾಪಕರು, ಅಧ್ಯಾಪಕೇತರರು, ಕಾಲೇಜು ಅಭಿವೃದ್ಧಿ ಸಮಿತಿ ನೌಕರರು, ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV

Recommended Stories

ಪರಿಹಾರ ನೀಡಲು ಸರ್ಕಾರ ಬದ್ಧವಿದೆ
ನಾಯಿ ಕಡಿತಕ್ಕೊಳಗಾಗಿದ್ದರೆನಿರ್ಲಕ್ಷ್ಯ ಬೇಡ, ಚಿಕಿತ್ಸೆ ಪಡೆಯಿರಿ