ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಗ್ರಾಮ ಭಾರತಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ, ಮಂಡ್ಯದ ಕರ್ನಾಟಕ ಸಂಘ, ತಾಲೂಕು ರೈತಸಂಘ ಸೇರಿ ವಿವಿಧ ಸಂಘಟನೆಗಳು ಆಯೋಜಿಸಿರುವ ಮಹಾತ್ಮ ಗಾಂಧಿಯವರ ಬದುಕು ಮತ್ತು ಹೋರಾಟ ಕುರಿತ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಪರಿಸರ-ಕೃಷಿ ಮತ್ತು ಗಾಂಧಿ ಕುರಿತು ವಿಚಾರ ಮಂಡಿಸಿದರು.
ದೇಶದಲ್ಲಿಂದು ಪ್ರತಿವರ್ಷ 1.20 ಕೋಟಿ ಮಕ್ಕಳು ಪದವೀಧರರಾಗಿ ಹೊರಬರುತ್ತಿದ್ದಾರೆ. ಆದರೆ, ಕಳೆದ ವರ್ಷಗಳಲ್ಲಿ ಕೇವಲ 1.65 ಕೋಟಿ ಉದ್ಯೋಗಗಳು ಮಾತ್ರ ಸೃಷ್ಟಿಯಾಗಿವೆ. ಕೃತಕ ಬುದ್ದಿಮತ್ತೆ ಪ್ರಯೋಗಗಳು ಮತ್ತು ಆಧುನಿಕ ತಂತ್ರಜ್ಞಾನಗಳು ನಮ್ಮ ಯುವಕರ ಉದ್ಯೋಗ ಸೃಷ್ಟಿಗೆ ಬಂಡೆಗಲ್ಲಾಗಿವೆ ಎಂದರು.ಉದ್ಯೋಗ ಕಸಿದುಕೊಳ್ಳುವ ಯಾಂತ್ರೀಕರಣಕ್ಕೆ ಗಾಂಧಿ ವಿರುದ್ಧವಾಗಿದ್ದರು. ಮಾನವ ಸಂಪನ್ಮೂಲ ಸದ್ಬಳಕೆಯಾಗದಿದ್ದರೆ ದೇಶದಲ್ಲಿ ಆರ್ಥಿಕ ಅಸಮಾನತೆ ಉಂಟಾಗುತ್ತದೆ. ಇದರಿಂದ ಶ್ರೀಮಂತರು ಮತ್ತಷ್ಟು ಶ್ರೀಮಂತರಾದರೆ ಬಡವರು ಬದುಕು ಕಳೆದುಕೊಂಡು ಶ್ರೀಮಂತರ ಜೀತದಾಳುಗಳಂತೆ ಬದುಕಬೇಕಾದ ವ್ಯವಸ್ಥೆ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.
ಗಾಂಧಿ ಮಾತನ್ನು ಮೀರಿ ನಾವು ರಾಸಾಯನಿಕ ಕೃಷಿ ಪದ್ಧತಿಗೆ ಜೋತುಬಿದ್ದ ಕಾರಣ ಮಣ್ಣಿನ ಫಲವತ್ತತೆ ನಾಶವಾಗಿದ್ದು, ಇಳುವರಿ ಕುಂಠಿತಗೊಂಡಿದೆ. ಅತಿಯಾದ ರಾಸಾಯನಿಕ ಔಷಧಿ ಬಳಕೆಯಿಂದ ನಾವು ಬೆಳೆಯುತ್ತಿರುವ ಆಹಾರವೇ ವಿಷವಾಗಿ, ಭೂಮಿ ಮತ್ತು ನಮ್ಮ ಆರೋಗ್ಯ ಎರಡನ್ನೂ ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಹಳ್ಳಿಗಳ ವ್ಯಾಪ್ತಿಯಲ್ಲಿ ಬೆಳೆಯುವ ಬೆಳೆಗಳ ಮಾರುಕಟ್ಟೆ ನಿಯಂತ್ರಣ ರೈತರ ಕೈಯಲ್ಲಿಯೇ ಇರಬೇಕು ಎಂಬುದು ಗಾಂಧೀಜಿ ಆಶಯವಾಗಿತ್ತು. ಆದರೆ, ಇಂದು ನಮ್ಮ ರೈತನ ಗೋಧಿಯನ್ನು ಕೊಂಡು ಆಹಾರ ಉತ್ಪನ್ನ ಘಟಕಗಳನ್ನು ಸ್ಥಾಪಿಸಿರುವ ನೆಸ್ಲೆ ಕಂಪನಿ ಕೋಟ್ಯಂತರ ರು. ಲಾಭ ಮಾಡಿಕೊಳ್ಳುತ್ತಿದೆ. ಇಂತಹ ನೂರಾರು ವಿದೇಶಿ ಕಂಪನಿಗಳು ದೇಶದಲ್ಲಿಂದು ಬಂಡವಾಳ ಹೂಡಿಕೆ ಮಾಡಿ ಅಭಿವೃದ್ಧಿ ಹೆಸರಿನಲ್ಲಿ ದೇಶದ ಸಂಪತ್ತನ್ನು ಲೂಟಿ ಮಾಡುತ್ತಿವೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಎಲ್.ಮಂಜುನಾಥ್, ಉಪನ್ಯಾಸಕ ಡಿ.ಮಂಜುನಾಥ್, ಪ್ರಗತಿಪರ ಚಿಂತಕ ಗಂಗಾಧರ್, ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೇಹೊಸಹಳ್ಳಿ ಜವರಾಯಿಗೌಡ, ಶಫಿ ಮತ್ತಿತರರಿದ್ದರು.