ಅಧಿಕಾರ ಜನಸೇವೆ ಮಾಡಲು ಕೊಟ್ಟ ವರ

KannadaprabhaNewsNetwork |  
Published : May 21, 2026, 01:30 AM IST
00000 | Kannada Prabha

ಸಾರಾಂಶ

ಅಧಿಕಾರ ಎಲ್ಲರಿಗೂ ಸಿಗುವಂತಹುದಲ್ಲ, ಆದರೆ ಸಿಕ್ಕ ಅಧಿಕಾರವನ್ನು ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇದು ನನಗೆ ದೇವರು ಕೊಟ್ಟ ವರ ಎಂದು ಭಾವಿಸಬೇಕು.

ಕನ್ನಡಪ್ರಭ ವಾರ್ತೆ, ತುಮಕೂರುಅಧಿಕಾರ ಎಲ್ಲರಿಗೂ ಸಿಗುವಂತಹುದಲ್ಲ, ಆದರೆ ಸಿಕ್ಕ ಅಧಿಕಾರವನ್ನು ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇದು ನನಗೆ ದೇವರು ಕೊಟ್ಟ ವರ ಎಂದು ಭಾವಿಸಬೇಕು. ಆಗ ಮಾತ್ರ ಅಧಿಕಾರದಲ್ಲಿರುವವರು ಸದಾ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲೆಯಿಂದ ವರ್ಗಾವಣೆಗೊಂಡಿರುವ ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾ ತಿಳಿಸಿದರು.ತುಮಕೂರಿನ ವರದಕ್ಷಿಣೆ ವಿರೋಧಿ ವೇದಿಕೆ- ಸಾಂತ್ವನ ಕೇಂದ್ರದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸರಳ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯಾರೇ ಆಗಲಿ ತಮಗೆ ಸಿಕ್ಕ ಅಪರೂಪದ ಅಧಿಕಾರವನ್ನು ಸಮಾಜದ ಒಳಿತಿಗೆ ಬಳಸಿಕೊಳ್ಳಬೇಕು. ಈ ಸಮಾಜಕ್ಕೆ ನನ್ನ ಕೊಡುಗೆ ಏನು ಎಂದು ಚಿಂತಿಸಬೇಕು. ಏಕೆಂದರೆ ಲಕ್ಷಾಂತರ ಜನ ಉದ್ಯೋಗವಿಲ್ಲದೆ, ಅವಕಾಶಗಳಿಲ್ಲದೆ ಇರುವಾಗ ಅವಕಾಶವಂಚಿತರ ಬಗ್ಗೆ, ನೊಂದವರ ಬಗ್ಗೆ, ಅನ್ಯಾಯಕ್ಕೆ ಒಳಗಾದವರ ಬಗ್ಗೆ ನಾವು ಸ್ಪಂದಿಸಿದಾಗ ಅವರ ಸಮಸ್ಯೆಗಳೂ ನಿವಾರಣೆಯಾಗುತ್ತವೆ. ಸಮಾಜವೂ ಸುಸ್ಥಿತಿಯಲ್ಲಿರುತ್ತದೆ ಎಂದರು.ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿ ತುಮಕೂರಿಗೆ ಬರುವುದಕ್ಕೂ ಮುನ್ನ ತಿಪಟೂರಿನಲ್ಲಿ ನ್ಯಾಯಾಧೀಶಳಾಗಿ ಕಾರ್ಯ ನಿರ್ವಹಿಸಿದ್ದೆ. ಕಾನೂನು ಸೇವೆಗಳ ಪ್ರಾಧಿಕಾರದ ಜವಾಬ್ದಾರಿ ವಹಿಸಿಕೊಂಡಾಗ ಜನರ ನೋವು ನಲಿವುಗಳನ್ನು ಇನ್ನಷ್ಟು ತಿಳಿಯಲು ಸಹಕಾರಿಯಾಯಿತು. ಮಹಿಳೆಯರು, ಮಕ್ಕಳು, ಅಶಕ್ತರು, ಭಿಕ್ಷಾಟನೆಯಲ್ಲಿ ತೊಡಗಿರುವವರು, ಹೊಟ್ಟೆಪಾಡಿಗೆ ರಸ್ತೆ ಬದಿ ಕೆಲಸ ಮಾಡುವವರು, ಬಾಲ ಕಾರ್ಮಿಕರು, ಅಪರಾಧಕ್ಕೊಳಗಾಗಿ ಜೈಲಿನಲ್ಲಿ ಇರುವವರು ಇವರೆಲ್ಲರ ಸಮಸ್ಯೆ ಆಲಿಸುವ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ತೃಪ್ತಿ ತಂದಿವೆ. ಈ ಜಿಲ್ಲೆಯ ಜನ ಶಾಂತ ಸ್ವಭಾವದವರು ಒಳ್ಳೆಯ ವಾತಾವರಣ ಇಲ್ಲಿದೆ. ಇಲ್ಲಿನ ಸಂಘ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸಿದ್ದಗಂಗಾ ಸ್ವಾಮೀಜಿಗಳಂತಹ ಪುಣ್ಯ ಪುರುಷರು ಈ ಕಲ್ಪತರು ನಾಡಿನ ಹೆಸರನ್ನು ಮೇಲೆತ್ತರಕ್ಕೆ ಕೊಂಡು ಹೋಗಿದ್ದಾರೆ. ಅಂತಹ ಹಿರಿಯರ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದರು.ಲೇಖಕಿ, ವರದಕ್ಷಿಣೆ ವಿರೋಧಿ ವೇದಿಕೆ ಉಪಾಧ್ಯಕ್ಷೆ ಬಾ.ಹ. ರಮಾಕುಮಾರಿ ಮಾತನಾಡಿ, ಕಾನೂನು ಅರಿವು ಕಾರ್ಯಕ್ರಮಗಳ ಜೊತೆ ಜೊತೆಗೆ ಸಾಮಾಜಿಕ ಸಮಸ್ಯೆಗಳ ಕಡೆಗೆ ಸ್ಪಂದಿಸುವ ಕಾರ್ಯವನ್ನೂ ಪ್ರಾಧಿಕಾರದ ಕಾರ್ಯದರ್ಶಿಗಳಾಗಿ ನಿಭಾಯಿಸಿದ್ದು ಹೆಚ್ಚು ಗಮನ ಸೆಳೆದಿದೆ ಎಂದರು.ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ, ಮಿತ್ರ ಫೌಂಡೇಷನ್ ಆಪ್ತ ¸ ಮಾಲೋಚಕ ಸಿಸಿ ಪಾವಟೆ ಇತರರು ಮಾತನಾಡಿದರು. ವೇದಿಕೆ ಪದಾಧಿಕಾರಿಗಳಾದ ಸಿ.ಎಲ್. ಸುನಂದಮ್ಮ, ಬಿ.ಗಂಗಲಕ್ಷ್ಮಿ, ಟಿ.ಆರ್.ಅನಸೂಯ, ಗೀತಾ ನಾಗೇಶ್, ವಿಜ್ನಾನ ಕೇಂದ್ರದ ಅಧ್ಯಕ್ಷೆ ಎನ್. ಅಕ್ಕಮ್ಮ, ರಂಗನಾಥ್, ಸುಮಂತ್, ಸಾಂತ್ವನ ಕೇಂದ್ರದ ಸಮಾಲೋಚಕಿ ಪಾರ್ವತಮ್ಮ, ಮಾಣಿಕ್ಯ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರುದ್ರಭೂಮಿಗಾಗಿ ವೀರಶೈವ ಲಿಂಗಾಯತ ಸಮಾಜದಿಂದ ತಹಸೀಲ್ದಾರರಿಗೆ ಮನವಿ
ಪರೀಕ್ಷಾ ಪ್ರಾಧಿಕಾರಗಳು ಜವಾಬ್ದಾರಿಯಿಂದ ಕೆಲಸ ಮಾಡಲಿ