ಸೇವೆ ಮಾಡುವವರಿಗೆ ಅಧಿಕಾರವೇ ಮುಖ್ಯವಲ್ಲ: ಗೀತಾ ಪ್ರಸನ್ನ

KannadaprabhaNewsNetwork | Published : Mar 25, 2025 12:49 AM

ಸಾರಾಂಶ

ಡಾ.ಎಂ.ಎಸ್‌. ಬಸವರಾಜ್‌ ಅವರು ಇತರ ವೈದ್ಯರಿಗೆ ಮಾದರಿಯಂತಿದ್ದಾರೆ. ಸದಾ ಸುಂದರ, ಮುಗ್ಧ ನಗುಮುಖದೊಂದಿಗೆ ರೋಗಿಗಳನ್ನು ಪ್ರೀತಿಯಿಂದ ಮಾತನಾಡಿಸುತ್ತಾ ಚಿಕಿತ್ಸೆ ನೀಡುತ್ತಿದ್ದರು. ವೈದ್ಯರು ಈ ರೀತಿ ಅರ್ಪಣಾ ಮನೋಭಾವದಿಂದ ಸೇವೆ ಮಾಡಿದರೆ ಸಾಕು ರೋಗ ಗುಣಮುಖವಾದಂತೆ.

ಕನ್ನಡಪ್ರಭ ವಾರ್ತೆ ಮೈಸೂರು

ಸೇವೆ ಮಾಡುವವರಿಗೆ ಅಧಿಕಾರವೇ ಮುಖ್ಯವಲ್ಲ. ಅಧಿಕಾರದಿಂದ ನಿವೃತ್ತರಾದರೂ ಕೂಡ ಸಮಾಜಕ್ಕೆ ಕೊಡುಗೆ ನೀಡಬಹುದು ಎಂದು ಜಿಲ್ಲಾ ಪೊಲೀಸ್‌ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಗೀತಾ ಪ್ರಸನ್ನ ಹೇಳಿದರು.

ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ ಹಾಗೂ ನವ ವಿಶ್ವಮಾನವ ಟ್ರಸ್ಟ್‌ ಮಾನಸ ಗಂಗೋತ್ರಿಯ ಇಎಂಎಂಆರ್‌ಸಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಮೈವಿವಿ ವೈದ್ಯಾಧಿಕಾರಿ ಡಾ.ಎಂ.ಎಸ್‌. ಬಸವರಾಜ್‌ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.

ಡಾ.ಎಂ.ಎಸ್‌. ಬಸವರಾಜ್‌ ಅವರು ಇತರ ವೈದ್ಯರಿಗೆ ಮಾದರಿಯಂತಿದ್ದಾರೆ. ಸದಾ ಸುಂದರ, ಮುಗ್ಧ ನಗುಮುಖದೊಂದಿಗೆ ರೋಗಿಗಳನ್ನು ಪ್ರೀತಿಯಿಂದ ಮಾತನಾಡಿಸುತ್ತಾ ಚಿಕಿತ್ಸೆ ನೀಡುತ್ತಿದ್ದರು. ವೈದ್ಯರು ಈ ರೀತಿ ಅರ್ಪಣಾ ಮನೋಭಾವದಿಂದ ಸೇವೆ ಮಾಡಿದರೆ ಸಾಕು ರೋಗ ಗುಣಮುಖವಾದಂತೆ ಎಂದರು.

ಕೋವಿಡ್‌ ಸಂದರ್ಭದಲ್ಲಿ ನಾವೆಲ್ಲಾ ಅನಿಶ್ಚತತೆ. ಅಭದ್ರತೆಯಿಂದ ಇದ್ದಾಗ ವೈದ್ಯರು ಚಿಕಿತ್ಸೆ ನೀಡಿ ಕಾಪಾಡಿದರು. ಈ ದೃಷ್ಟಿಯಿಂದ ನೋಡಿದರೆ ವೈದ್ಯರನ್ನು ದೇವರು ಎಂದು ಪರಿಗಣಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಮೈಸೂರು ಜಿಲ್ಲಾ ಹೆಚ್ಚುವರಿ ಪೊಲೀಸ್‌ ಮುಖ್ಯಾಧಿಕಾರಿ ಮಲ್ಲಿಕ್‌ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ವೈದ್ಯರ ಸೇವೆ ಅವಿಸ್ಮರಣೀಯ. ವೈದ್ಯರು ದೇಹದ ಸ್ವಾಸ್ಥ್ಯವನ್ನು ಕಾಪಾಡುತ್ತಾರೆ. ಪೊಲೀಸ್‌ ಇಲಾಖೆಯಲ್ಲಿರುವ ನಾವು ಎಲ್ಲರ ಸಹಕಾರದಿಂದ ಸಮಾಜದ ಸ್ವಾಸ್ಥ್ಯ ಕಾಪಾಡುತ್ತೇವೆ ಎಂದರು.

ವೈದ್ಯ ವೃತ್ತಿಗೆ ನಿವೃತ್ತಿ ಎಂಬುದೇ ಇಲ್ಲ. ಜೀವನದ ಕೊನೆಯುಸಿರು ಇರುವವರೆಗೂ ಸೇವೆ ನೀಡಬಹುದು ಎಂದ ಅವರು, ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ವೃತ್ತಿಪರತೆ ಕಡಿಮೆಯಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ನೀಡಬೇಕು ಎಂದರು.

ಮೈಸೂರು ನಗರಪಾಲಿಕೆಯ ನಿವೃತ್ತ ಆಯುಕ್ತ ಡಾ.ಪಿ. ಬೋರೇಗೌಡ ಮಾತನಾಡಿ, ಡಾ.ಎಂ.ಎಸ್‌. ಬಸವರಾಜ್‌ ಅವರದ್ದು ವಿರಳ ವ್ಯಕ್ತಿತ್ವ. ನಾನು ಪಾಲಿಕೆ ಆಯುಕ್ತನಾಗಿದ್ದಾಗ ಲಸಿಕೀಕರಣ ಕಾರ್ಯ ಯಶಸ್ಸಿಗೆ ಡಾ.ಬಸವರಾಜ್‌ ಅವರ ಸಹಕಾರ ದೊಡ್ಡದು. ಒಂದು ರೀತಿಯಲ್ಲಿ ಅವರು ವಿಶ್ವಕೋಶವಿದ್ದಂತೆ. ಅವರು ಸೇವೆಯಿಂದ ನಿವೃತ್ತರಾದರೂ ಅವರ ಅನುಭವವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲರಿಗೂ ತಲುಪಿಸಲು ಯೋಜನೆಯೊಂದನ್ನು ರೂಪಿಸಿದ್ದೇವೆ ಎಂದರು.

ಮೈವಿವಿ ಲಲಿತಕಲಾ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಅನಿಟ ವಿಮ್ಲ ಬ್ರ್ಯಾಗ್ಸ್‌ ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿ ಡಾ.ಎಂ.ಎಸ್‌. ಬಸವರಾಜ್‌ ಅವರು ಎಲ್ಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ರಾಯಭಾರಿ ರೀತಿಯಲ್ಲಿ ಕೆಲಸ ಮಾಡಿದರು. ರೋಗದ ಗಂಭೀರತೆಯನ್ನು ಅರಿತು ಅವರು ನೀಡಿದ ಸಲಹೆಯಂತೆ ನಾವು ಕೆಲಸ ಮಾಡಿದವು.ಇದರಿಂದ ಕೋವಿಡ್‌ ಹೆಚ್ಚು ಮಂದಿಗೆ ಹರಡುವುದನ್ನು ತಡೆಯಲು ಸಹಾಯಕವಾಯಿತು ಎಂದರು.

ಮಾನಸ ಗಂಗೋತ್ರಿ ವಿದ್ಯಾರ್ಥಿ ಕ್ಷೇಮುಪಾಲನಾ ನಿರ್ದೇಶಕ ಪ್ರೊ.ಸಿ. ಗುರುಸಿದ್ದಯ್ಯ ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿ ಡಾ.ಬಸವರಾಜ್‌ ಅವರ ಸೇವೆಯನ್ನು ಮರೆಯುವಂತಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಚಾಮರಾಜನಗರದಲ್ಲಿ ಎರಡು ಬಾರಿ ಶಾಸಕರಾಗಿದ್ದ ಎಂ.ಸಿ. ಬಸಪ್ಪ ಅವರ ಕುಟುಂಬಕ್ಕೆ ಸೇರಿದ ಡಾ.ಎಂ.ಎಸ್‌. ಬಸಪರಾಜ್‌ ಅವರು ಎಂದೂ ಆ ಪ್ರಭಾವವನ್ನು ಬಳಸಿಕೊಳ್ಳಲಿಲ್ಲ. ಕೇವಲ ವಿವಿ ನೌಕರರು, ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಹೊರಗಿನವರಿಗೂ ಕೂಡ ಮಹಾರಾಜ ಕಾಲೇಜಿನ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿದ್ದಾರೆ ಎಂದರು.

ಪೂರ್ಣತೃಪ್ತಿ ಕೊಟ್ಟಿದೆ:

ಸನ್ಮಾನಕ್ಕೆ ಕೃತಜ್ಞಕೆ ಸಲ್ಲಿಸಿ ಮಾತನಾಡಿದ ಡಾ.ಎಂ.ಎಸ್‌. ಬಸವರಾಜ್‌, ಕಳೆದ 43 ವರ್ಷಗಳಿಂದ ವೈದ್ಯನಾಗಿದ್ದು, ಮೈಸೂರು ವಿವಿಯಲ್ಲಿ 31 ವರ್ಷ ಸಲ್ಲಿಸಿರುವ ಸೇವೆ ಪೂರ್ಣ ತೃಪ್ತಿ ಕೊಟ್ಟಿದೆ. ಮಾಡಿದ ಕೆಲಸ ಭಾರ ಎನಿಸಬಾರದು. ಆಗ ಮಾತ್ರ ಈ ರೀತಿ ಭಾವನೆ ಬರುತ್ತದೆ. ಪ್ರೊ.ಎಂ. ಮಾದಯ್ಯ, ಪ್ರೊ. ಧನಂಜಯ ಅವರಿಂದಾಗಿ ಇಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಯಿತು. ಡಾ.ಪಿ. ಬೋರೇಗೌಡ, ಪ್ರೊ.ಸಿ.ಡಿ. ನರಸಿಂಹಯ್ಯ, ರಾಜು ಪ್ರೇಮಕುಮಾರ್‌ ಸೇರಿದಂತೆ ಸಾವಿರಾರು ಮಂದಿಗೆ ಚಿಕಿತ್ಸೆ ನೀಡಿದ್ದೇನೆ. ನಮ್ಮ ಆರೋಗ್ಯ ಕೇಂದ್ರದ ನೌಕರರಿಂದ ತಾಳ್ಮೆ ಕಲಿತಿದ್ದೇನೆ. ಕುಟುಂಬದ ಸಹಕಾರವೂ ಸಿಕ್ಕಿದೆ . ಈವರೆಗೆ ಸಹಕಾರ ನೀಡಿದ ಎಲ್ಲರನ್ನು ಸ್ಮರಿಸುತ್ತೇನೆ ಎಂದರು.

ಈ ಮಾಸಾಂತ್ಯಕ್ಕೆ ವಿವಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹುದ್ದೆಯಿಂದ ನಿವೃತ್ತಿಯಾಗುತ್ತಿದ್ದು, ಏ.1 ರಿಂದ ವೈದ್ಯಕೀಯ ಕಾಲೇಜಿನಲ್ಲಿ ಬೋಧನಾ ವೃತ್ತಿ ಆರಂಭಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಮಹಾರಾಜ ಕಾಲೇಜಿನ ಎನ್‌ಸಿಸಿ ಅಧಿಕಾರಿ ದಿವಾಕರ್‌ ಚಾಂಡಿ ಅವರಿಗೆ ಉನ್ನತ ಸೇವಾ ಪ್ರಶಸ್ತಿ ನೀಡಲಾಯಿತು. ಎನ್‌ಸಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವೇದಿಕೆಯ ಅಧ್ಯಕ್ಷ ಆರ್‌. ವಾಸುದೇವ, ಪದಾಧಿಕಾರಿಗಳಾದ ಭಾಸ್ಕರ್‌, ಎಸ್‌. ವಿನೋದ್‌, ಕೆ. ಗಣೇಶ್‌, ಎನ್‌. ಚಲುವೇಶ್‌, ಗಿರೀಶ್‌, ಚೆಲುವಾಂಬಿಕೆ ಮೊದಲಾದವರು ಇದ್ದರು. ಡಾ.ಮಧುಸೂದನ್‌, ಡಾ.ನಿಂಗರಾಜು, ಡಾ.ಲೋಕೇಶ್‌ ನಾಡಗೀತೆ ಹಾಡಿದರು. ಮಂಜುನಾಥ್‌ ಸುಬೇದಾರ್‌ ನಿರೂಪಿಸಿದರು. ಕೀರ್ತನಾ ಸ್ವಾಗತಿಸಿದರು.

Share this article