ಬಿಜೆಪಿ ಶಾಸಕರ ಆಕ್ಷೇಪಣೆ ಹಾಗೂ ಸಭಾತ್ಯಾಗದ ನಡುವೆಯೇ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಾಧಿಪತಿ ಸ್ಥಾನಕ್ಕೆ ರಾಜ್ಯಪಾಲರ ಬದಲಿಗೆ ಮುಖ್ಯಮಂತ್ರಿಗಳನ್ನು ನೇಮಿಸುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ-2024ಕ್ಕೆ ವಿಧಾನಸಭೆ ಅನುಮೋದನೆ ನೀಡಿದೆ.
ಬಿಜೆಪಿ ಶಾಸಕರ ಆಕ್ಷೇಪಣೆ ಹಾಗೂ ಸಭಾತ್ಯಾಗದ ನಡುವೆಯೇ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಾಧಿಪತಿ ಸ್ಥಾನಕ್ಕೆ ರಾಜ್ಯಪಾಲರ ಬದಲಿಗೆ ಮುಖ್ಯಮಂತ್ರಿಗಳನ್ನು ನೇಮಿಸುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ-2024ಕ್ಕೆ ವಿಧಾನಸಭೆ ಅನುಮೋದನೆ ನೀಡಿದೆ.
ಮಂಗಳವಾರ ಮಸೂದೆ ಅನುಮೋದನೆಗೆ ಮನವಿ ಮಾಡಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕಾಯ್ದೆಯಲ್ಲಿ ಕುಲಾಧಿಪತಿಯಾಗಿ ರಾಜ್ಯಪಾಲರ ನೇಮಕ ಮಾಡುವ ಅವಕಾಶವಿತ್ತು. ವಿಶ್ವವಿದ್ಯಾಲಯದ ಆಡಳಿತ ಮತ್ತು ಅಭಿವೃದ್ಧಿಗಾಗಿ ಹಾಗೂ ವಿದ್ಯಾರ್ಥಿಗಳ ಏಳಿಗೆಗಾಗಿ ಕುಲಾಧಿಪತಿಯಾಗಿ ಮುಖ್ಯಮಂತ್ರಿಗಳನ್ನು ನೇಮಿಸುವುದಕ್ಕೆ ಅವಕಾಶ ನೀಡಲು ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ ಎಂದರು.
ವಿಧೇಯಕಕ್ಕೆ ತಿದ್ದುಪಡಿ ತರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು, ರಾಜ್ಯಪಾಲರ ಮೇಲೆ ದ್ವೇಷ ಸಾಧಿಸುವ ಸಲುವಾಗಿ ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ. ಇದರಿಂದಾಗಿ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಬಿರುಕು ಹೆಚ್ಚಲಿದೆ. ಮುಖ್ಯಮಂತ್ರಿಗಳಿಗೆ ವಿಶ್ವವಿದ್ಯಾಲಯದ ಕಾರ್ಯದಲ್ಲಿ ತೊಡಗಿಕೊಳ್ಳಲು ಸಮಯ ದೊರೆಯುವುದಿಲ್ಲ. ಹೀಗಾಗಿ ರಾಜ್ಯಪಾಲರನ್ನೇ ಮುಂದುವರಿಸುವುದು ಸೂಕ್ತ ಎಂದು ಹೇಳಿದರು.
ಅದನ್ನೊಪ್ಪದ ಪ್ರಿಯಾಂಕ್ ಖರ್ಗೆ, ರಾಜ್ಯಪಾಲರ ಬದಲಾಗಿ ಮುಖ್ಯಮಂತ್ರಿಗಳು ಕುಲಾಧಿಪತಿಗಳಾದರೆ ವಿಶ್ವವಿದ್ಯಾಲಯ ಮತ್ತಷ್ಟು ಪ್ರಭಾವಿಯಾಗಿ ಕೆಲಸ ಮಾಡಲಿದೆ. ಅಲ್ಲದೆ, ಆಡಳಿತ ಮಂಡಳಿ ನೇಮಕ ಸೇರಿದಂತೆ ಇನ್ನಿತರ ಕಾರ್ಯದ ಜವಾಬ್ದಾರಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ನೀಡಲಾಗುತ್ತದೆ. ಹೀಗಾಗಿ ಯಾವುದೇ ರೀತಿಯ ಗೊಂದಲ ಮತ್ತು ದ್ವೇಷವೂ ಇದರಲಿಲ್ಲ ಎಂದು ತಿಳಿಸಿದರು.
ತಮ್ಮ ಮನವಿಯನ್ನು ಪುರಸ್ಕರಿಸದ ಸರ್ಕಾರ ಮತ್ತು ಸಚಿವರ ನಡವಳಿಕೆಯನ್ನು ವಿರೋಧಿಸಿದ ಬಿಜೆಪಿ ಮತ್ತು ಜೆಡಿಎಸ್ ಶಾಸಕರು, ವಿಧೇಯಕದ ತಿದ್ದುಪಡಿ ವಿರೋಧಿಸಿ ಸಭಾತ್ಯಾಗ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.