ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಇನ್ನು ಐವತ್ತು ವರ್ಷಗಳ ಕಾಲ ರೈತರಿಗೆ ತೊಂದರೆಯಾಗಬಾರದೆಂದು ಐದುನೂರು ಕೋಟಿ ರು. ವೆಚ್ಚದಲ್ಲಿ ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ ನಾಲ್ಕು ನೂರು ಕೆ.ವಿ.ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.ತಾಲೂಕಿನ ಕೊಂಡಾಪುರ ಗ್ರಾಮದ ಸಮೀಪ ಹಳ್ಳಕ್ಕೆ 75 ಲಕ್ಷ ರು.ವೆಚ್ಚದಲ್ಲಿ ನೂತನ ಚೆಕ್‍ಡ್ಯಾಂ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
493 ಹಳ್ಳಿಗಳಲ್ಲಿ ಯಾರು ಏನೆ ಕೇಳಲಿ ಬಿಡಲಿ ಯಾವ ಊರಿಗೆ ಏನು ಮಾಡಿದರೆ ಒಳ್ಳೆಯದು ಎನ್ನುವ ಆಲೋಚನೆಯಿಟ್ಟುಕೊಂಡು ಅಭಿವೃದ್ದಿ ಕೆಲಸಗಳಿಗೆ ಒತ್ತು ನೀಡುತ್ತಿದ್ದೇನೆ. ಅಮೃತಾಪುರದ ಬಳಿ ಎರಡು ಕೋಟಿ ರೂ.ವೆಚ್ಚದಲ್ಲಿ ಸಿ.ಸಿ.ರಸ್ತೆ ಮಾಡಿಸಿದ್ದೇನೆ. ಒಂದು ಕೋಟಿ ರೂ.ವೆಚ್ಚದಲ್ಲಿ ಶಿವಗಂಗ ಕೆರೆ ಏರಿ ಮೇಲೆ ಸಿ.ಸಿ.ರಸ್ತೆಯಾಗಿದೆ. ಕ್ಷೇತ್ರದ ನನ್ನ ಜನ, ಬಂಧು ಬಳಗ ಚೆನ್ನಾಗಿರಬೇಕೆಂಬುದು ನನ್ನ ಉದ್ದೇಶ. ಮಾದಿಗರಹಟ್ಟಿ ಹತ್ತು ಲಕ್ಷ ರು.ಗಳಲ್ಲಿ ದೇವಸ್ಥಾನ ಕಟ್ಟಿಸಿದ್ದೇನೆ ಎಂದರು.ಲಂಬಾಣಿಹಟ್ಟಿಯಲ್ಲಿ ದೇವಸ್ಥಾನ, ಆಂಜನೇಯಸ್ವಾಮಿ ದೇವಸ್ಥಾನಕ್ಕೆ ದುಡ್ಡು ಕೊಟ್ಟಿದ್ದೇನೆ. ರೈತರ ತೋಟ ಒಣಗಬಾರದೆಂದು ಜಿಲ್ಲೆಯಲ್ಲಿಯೇ ಎಲ್ಲೂ ಇಲ್ಲದಂತ ವಿದ್ಯುತ್ ಪವರ್ ಸ್ಟೇಷನ್ ಕೋಟೆಹಾಳ್ ಬಳಿ ನಿರ್ಮಾಣವಾಗಲಿದ್ದು, ಜೋಗ್‍ಫಾಲ್ಸ್‍ನಿಂದ ನೇರವಾಗಿ ಇಲ್ಲಿಗೆ ವಿದ್ಯುತ್ ಪೂರೈಕೆಯಾಗಲಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಭರತೇಶ್ ಮಾತನಾಡಿ, ಮೊದಲ ಬಾರಿಗೆ ಭರಮಸಾಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ನಂತರ ಎಲ್ಲಾ ಹಳ್ಳಿಗಳಲ್ಲಿ ಗಟ್ಟಿಮುಟ್ಟಾದ ರಸ್ತೆಗಳನ್ನು ಮಾಡಿಸಿದ್ದರಿಂದ ಜನ ರಸ್ತೆ ರಾಜ ಎನ್ನುವ ಬಿರುದು ನೀಡಿ ಎರಡನೆ ಬಾರಿಗೂ ಎಂ.ಚಂದ್ರಪ್ಪನವರನ್ನು ಗೆಲ್ಲಿಸಿದರು. ಯಾರಿಂದ ಏನನ್ನು ಹೇಳಿಸಿಕೊಳ್ಳದೆ ಎಲ್ಲಾ ಗ್ರಾಮಗಳಲ್ಲಿಯೂ ಅಭಿವೃದ್ದಿ ಕಾಮಗಾರಿಗಳನ್ನು ಮಾಡಿಸಿದ್ದಾರೆ. ಇನ್ನು ಎರಡು ತಿಂಗಳಲ್ಲಿ ತಾಲ್ಲೂಕಿನಲ್ಲಿರುವ ಕೆರೆಗಳಿಗೆ ನೀರು ತುಂಬಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಸರ್ಕಾರದಲ್ಲಿ ಅನುದಾನವಿಲ್ಲದಿರುವ ಕಷ್ಟದ ಕಾಲದಲ್ಲಿ ಹೋರಾಟ ಮಾಡಿ ಹಣ ತರುವ ಶಕ್ತಿ ಅವರಲ್ಲಿದೆ. ನಮ್ಮ ಊರಿನಲ್ಲಿ ಚೆಕ್‍ಡ್ಯಾಂ ಕಟ್ಟಿಸಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಪ್ಪ, ಸದಸ್ಯರಾದ ಮೂರ್ತಣ್ಣ, ಹಾಲೇಶ್, ತಿಮ್ಮಜ್ಜ, ಶಿವಣ್ಣ, ಗುತ್ತಿಗೆದಾರ ಮಹೇಶ್, ಗ್ರಾಮದ ಮುಖಂಡರು ಇದ್ದರು.