ಇ-ಆಟೊಗಳಿಗೆ ಪರ್ಮಿಟ್‌ ನೀಡುವ ಅಧಿಕಾರ ಕಾಯ್ದೆಯಲ್ಲೇ ಇಲ್ಲ: ಡಿಸಿ ಸ್ಪಷ್ಟನೆ

KannadaprabhaNewsNetwork | Published : Aug 30, 2024 1:09 AM

ಸಾರಾಂಶ

ಇ-ಆಟೊಗಳನ್ನು ನಿರ್ಬಂಧಿಸುವಂತೆ ಗುರುವಾರ ನಡೆದ ರಿಕ್ಷಾ ಚಾಲಕರ ಬೃಹತ್‌ ಪ್ರತಿಭಟನೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಚಾರದ ಕುರಿತು ಸ್ಪಷ್ಟನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದೇಶಾದ್ಯಂತ ಎಲೆಕ್ಟ್ರಿಕ್‌ ಆಟೊಗಳು ಸೇರಿದಂತೆ ಇ-ವಾಹನಗಳಿಗೆ ಪರ್ಮಿಟ್‌ ನೀಡಲು ಕೇಂದ್ರ ಮೋಟಾರು ವಾಹನ ಕಾಯ್ದೆ ಪ್ರಕಾರ ಅವಕಾಶವಿಲ್ಲ. ದಕ್ಷಿಣ ಕನ್ನಡದಲ್ಲಿ ಇ-ಆಟೊಗಳಿಗೆ ಪ್ರತ್ಯೇಕ ಆದೇಶ ಹೊರಡಿಸಿಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಸ್ಪಷ್ಟಪಡಿಸಿದ್ದಾರೆ.

ಇ-ಆಟೊಗಳನ್ನು ನಿರ್ಬಂಧಿಸುವಂತೆ ಗುರುವಾರ ನಡೆದ ರಿಕ್ಷಾ ಚಾಲಕರ ಬೃಹತ್‌ ಪ್ರತಿಭಟನೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಚಾರದ ಕುರಿತು ಸ್ಪಷ್ಟನೆ ನೀಡಿದರು.

ಕೇಂದ್ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್‌ 66(1) ಪ್ರಕಾರ ಆಟೊಗಳಿಗೆ ಪರ್ಮಿಟ್‌ ನೀಡಲಾಗುತ್ತದೆ. ಈ ಪರ್ಮಿಟ್‌ ಅನ್ವಯಿಸೋದು ಕೇವಲ ಪೆಟ್ರೋಲ್‌, ಸಿಎನ್‌ಜಿ, ಎಲ್‌ಪಿಜಿ ಆಟೊಗಳಿಗೆ ಮಾತ್ರ. ಇ- ಆಟೊಗಳಿಗೆ ಈ ಕಾನೂನಿನಡಿ ಪರ್ಮಿಟ್‌ ಮೂಲಕ ನಿರ್ಬಂಧ ಹೇರಲು ಅವಕಾಶವಿಲ್ಲ. ದಕ್ಷಿಣ ಕನ್ನಡ ಮಾತ್ರವಲ್ಲ, ಇಡೀ ಕರ್ನಾಟಕ, ದೇಶದಲ್ಲಿ ಕೂಡ ಇ-ವಾಹನಗಳು ಪರ್ಮಿಟ್‌ ಇಲ್ಲದೆ ಓಡಾಡುತ್ತಿವೆ ಎಂದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಅನ್ವಯಿಸಿ 1990ರ ದಶಕದಲ್ಲಿ ಕರ್ನಾಟಕ ಮೋಟಾರು ವಾಹನ ಕಾಯ್ದೆಯ ಸೆಕ್ಷನ್‌ 115 ಪ್ರಕಾರ ವಲಯ1 ಮತ್ತು 2 ಗುರುತಿಸಿ ಅಂದಿನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಎಲೆಕ್ಟ್ರಿಕ್‌ ಆಟೊಗಳು ರಸ್ತೆಗಿಳಿಯಲು ಆರಂಭವಾದಾಗ ಅದೇ ವಲಯ1-2 ನಿಯಮ ಇ-ಆಟೊಗಳಿಗೂ ಅನ್ವಯ ಮಾಡಲಾಗಿತ್ತು. ಇ-ಆಟೊಗಳಿಗೆ ದ.ಕ.ದಲ್ಲಿ ಮಾತ್ರ ಈ ನಿರ್ಬಂಧ ಇದ್ದುದನ್ನು ಪ್ರಶ್ನಿಸಿ ಇ-ಆಟೊ ಮಾಲೀಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಕುರಿತು ಕಾನೂನಾತ್ಮಕವಾಗಿ ಆದೇಶ ಹೊರಡಿಸುವಂತೆ ಕೋರ್ಟ್‌ ನಿರ್ದೇಶನ ನೀಡಿತ್ತು. ಅದರಂತೆ, ಕಾಯ್ದೆ ಪ್ರಕಾರ ದೇಶಾದ್ಯಂತ ಇ-ಆಟೊಗಳಿಗೆ ಪರ್ಮಿಟ್‌ ನಿರ್ಬಂಧ ಇಲ್ಲದಿರುವ ಆದೇಶವನ್ನೇ ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ಮಾಡಲಾಗಿತ್ತು. ಈ ಆದೇಶವನ್ನು ಪೆಟ್ರೋಲ್‌, ಸಿಎನ್‌ಜಿ, ಎಲ್‌ಪಿಜಿ ಆಟೊ ಚಾಲಕರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆ ಆದೇಶವನ್ನು ನ್ಯಾಯಾಲಯದ ಆದೇಶದಂತೆ, ದೇಶಾದ್ಯಂತ ಪ್ರಸ್ತುತ ಜಾರಿಯಲ್ಲಿರುವ ಕಾನೂನು ಪ್ರಕಾರ ಮಾಡಲಾಗಿದೆಯೇ ಹೊರತು ದ.ಕ.ಕ್ಕೆ ವಿಶೇಷ ಆದೇಶ ಮಾಡಿದ್ದಲ್ಲ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್‌ ಮಲ್ಲಾಡ್‌ ಇದ್ದರು.

ಸೆ.5ರಂದು ರಿಕ್ಷಾ ಚಾಲಕರ ಸಭೆ

ರಿಕ್ಷಾ ಚಾಲಕರ ಬೇಡಿಕೆಗಳ ಕುರಿತಂತೆ ಚರ್ಚಿಸಲು ಎಲ್ಲ ಆಟೊ ಸಂಘಟನೆಗಳೊಂದಿಗೆ ಸೆ.5ರಂದು ಸಭೆ ನಡೆಸಲಾಗುವುದು. ಜಿಲ್ಲೆಯಲ್ಲಿ ಈಗ ಇರುವ ವಲಯ ವಿಂಗಡಣೆ ಬೇಡ ಎಂದಾದರೆ ಅದನ್ನು ಬೇಕಾದರೆ ಪರಿಗಣಿಸಿ ಸೂಕ್ತ ಚರ್ಚೆ ನಡೆಸಬಹುದು. ಆದರೆ ಇ-ಆಟೊಗಳ ಕುರಿತಾಗಿ ದೇಶಾದ್ಯಂತ ಇರುವ ಕಾನೂನಿಗೆ ವಿರುದ್ಧವಾಗಿ ದ.ಕ.ಕ್ಕೆ ಮಾತ್ರ ಪ್ರತ್ಯೇಕ ಆದೇಶ ಮಾಡಲು ಆಗಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Share this article