ಬಿಲ್‌ ಪಾವತಿಗೆ ಕಾಂಗ್ರೆಸ್‌ ಸರ್ಕಾರದಲ್ಲೂ ಲಂಚಾವತಾರ

KannadaprabhaNewsNetwork |  
Published : Aug 30, 2024, 01:09 AM IST
ತುಮಕೂರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಎ.ಡಿ.ಬಲರಾಮಯ್ಯ ಮಾತನಾಡಿದರು | Kannada Prabha

ಸಾರಾಂಶ

ಪ್ರತಿ ಗುತ್ತಿಗೆ ಹಣದ ಪಾವತಿಗೂ ಅಧಿಕಾರಿಗಳಿಗೆ ಇಂತಿಷ್ಟು ಹಣ ನೀಡಬೇಕಾದ ಪರಿಸ್ಥಿತಿ ಎದುರಾಗಿದ್ದು, ಇದು ಗುತ್ತಿಗೆದಾರ ಬೆಂಕಿಯಿಂದ ಹಾರಿ ಬಾಣಲೆಗೆ ಬಿದ್ದಂತಾಗಿದೆ. ಕಾಂಗ್ರೆಸ್ ಸರ್ಕಾರದಲ್ಲೂ ಲಂಚ ಶೇ. 40 ಕ್ಕಿಂತ ಮಿತಿ ಮೀರಿದೆ ಎಂದು ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಎ.ಡಿ.ಬಲರಾಮಯ್ಯ ಆರೋಪಿಸಿದ್ದಾರೆ.

ತುಮಕೂರು: ಪ್ರತಿ ಗುತ್ತಿಗೆ ಹಣದ ಪಾವತಿಗೂ ಅಧಿಕಾರಿಗಳಿಗೆ ಇಂತಿಷ್ಟು ಹಣ ನೀಡಬೇಕಾದ ಪರಿಸ್ಥಿತಿ ಎದುರಾಗಿದ್ದು, ಇದು ಗುತ್ತಿಗೆದಾರ ಬೆಂಕಿಯಿಂದ ಹಾರಿ ಬಾಣಲೆಗೆ ಬಿದ್ದಂತಾಗಿದೆ. ಕಾಂಗ್ರೆಸ್ ಸರ್ಕಾರದಲ್ಲೂ ಲಂಚ ಶೇ. 40 ಕ್ಕಿಂತ ಮಿತಿ ಮೀರಿದೆ ಎಂದು ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಎ.ಡಿ.ಬಲರಾಮಯ್ಯ ಆರೋಪಿಸಿದ್ದಾರೆ.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಭರವಸೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ ತಮ್ಮದೇ ಸರ್ಕಾರ ಬಂದು ಒಂದೂವರೆ ವರ್ಷ ಕಳೆದರೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿಲ್ಲ. ಬದಲಿಗೆ ಹೆಚ್ಚಾಗಿದೆ. ಇದರಿಂದ ಗುತ್ತಿಗೆದಾರರು, ಸಾರ್ವಜನಿಕರು ನಲುಗಿ ಹೋಗಿದ್ದಾರೆ ಎಂದರು.ಹಿಂದೆ ಗುತ್ತಿಗೆದಾರರು ಕೊಟ್ಟಷ್ಟು ತೆಗೆದುಕೊಂಡು ಬಿಲ್ ಮಾಡುತ್ತಿದ್ದರೂ, ಇಂದು ಇಂತಿಷ್ಟೇ ಕೊಡಬೇಕು ಎಂದು ತಾಕೀತು ಮಾಡುತ್ತಾರೆ. ಇದರಿಂದ ಹಲವಾರು ಗುತ್ತಿಗೆದಾರರು ಊರು ಬಿಟ್ಟಿದ್ದಾರೆ. ಕೆಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರ್ಕಾರ ಸರಿಯಾದ ಕ್ರಮ ಕೈಗೊಳ್ಳದಿದ್ದರೆ ಕೆಲಸ ಸ್ಥಗಿತ ಮಾಡಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಜಿ.ಎಸ್.ಟಿ ಗುತ್ತಿಗೆದಾರರ ಜೀವ ಕಸಿಯುತ್ತಿದೆ. 2012-13ರಿಂದ ನಡೆದ ಕಾಮಗಾರಿಗಳಿಗೂ ಜಿ.ಎಸ್.ಟಿ ವಿಧಿಸುತ್ತಿದ್ದಾರೆ. 2018ರಲ್ಲಿ ಜಿ.ಎಸ್.ಟಿ ಜಾರಿಗೆ ಬಂದಿದೆ. ಆದರೆ ಅದರ ಹಿಂದೆ ಮಾಡಿದ ಕೆಲಸಗಳಿಗೂ ಜಿ.ಎಸ್.ಟಿ ವಿಧಿಸಿ, ಕಟ್ಟದ ಗುತ್ತಿಗೆದಾರರ ಖಾತೆಗಳನ್ನೇ ರದ್ದು ಪಡಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ರೀತಿ, ರಾಜ್ಯ ಸರ್ಕಾರವೂ ಬಿಡುಗಡೆ ಮಾಡಿದಷ್ಟು ಅನುದಾನಕ್ಕೆ ಮಾತ್ರ ಟೆಂಡರ್ ಕರೆಯಲಿ, ಅದನ್ನು ಬಿಟ್ಟು ಒಂದು ಕೋಟಿಗೆ ಟೆಂಡರ್ ಕರೆದು, 10 ಲಕ್ಷ ರು. ಬಿಡುಗಡೆ ಮಾಡುತ್ತಾರೆ. ಇದರಿಂದ ಸಾಲ ಮಾಡಿ ಕಾಮಗಾರಿ ಮಾಡಿದ ಗುತ್ತಿಗೆದಾರ ಪರಿತಪಿಸಬೇಕಾಗುತ್ತದೆ ಎಂದರು.ರಾಜ್ಯ ಸರ್ಕಾರ ಪ್ರತಿ ಎಂ.ಎಲ್.ಎ ಕ್ಷೇತ್ರಗಳಿಗೆ ಇಪ್ಪತೈದು ಕೋಟಿ ರು. ಬಿಡುಗಡೆ ಮಾಡಿದ್ದೇವೆ ಎಂದು ಟೆಂಡರ್ ಕರೆದಿದ್ದಾರೆ. ಆದರೆ ಹಣ ಬಿಡುಗಡೆಯಾಗಿರುವುದು ಕಡಿಮೆ. ಶಾಸಕರ ಒತ್ತಡಕ್ಕೆ ಮಣಿದು ಕೆಲಸ ಮಾಡಿದರೆ ಬಿಲ್‌ಗಾಗಿ ವರ್ಷಗಟ್ಟಲೆ ಕಾಯಬೇಕಿದೆ. ರಾಜ್ಯ ಸರ್ಕಾರ ಪ್ಯಾಕೆಜ್ ಪದ್ದತಿಯನ್ನು ರದ್ದು ಮಾಡಬೇಕು ಎಂದು ಬತ್ತಾಯಿಸುತ್ತಿದೇವೆ. ಅಧಿಕಾರಿಗಳು ಶಾಸಕರ ಕೈಗೊಂಬೆಗಳು ಆಗಿದ್ದಾರೆ. ಈ ಸರ್ಕಾರದಲ್ಲೂ ಶೇ.40 ಲಂಚ ಕೊಟ್ಟರೆ ಮಾತ್ರ ಬಿಲ್‌ ಆಗುತ್ತಿವೆ ಎಂದು ರಾಜ್ಯ ಸರ್ಕಾರದ ವಿರುದ್ದ ಆರೋಪ ಮಾಡಿದರು.ಚಿಕ್ಕನಾಯಕನಹಳ್ಳಿಯಲ್ಲಿ ಜೆಜೆಎಂ ಬಿಲ್‌ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರಿಂದ ಲೋಕಾಯುಕ್ತಕ್ಕೆ ಇಂಜಿನಿಯರ್‌ಗಳನ್ನು ಹಿಡಿದು ಕೊಡಬೇಕಾಗಿ ಬಂತು. ಇಂಜಿನಿಯರ್‌ಗಳು ಲಂಚಕ್ಕೆ ಬೇಡಿಕೆ ಇಟ್ಟರೆ ಮುಲಾಜು ಇಲ್ಲದೆ ಲೋಕಾಯುಕ್ತದಲ್ಲಿ ಕೇಸು ಹಾಕಿಸಿ ಗುತ್ತಿಗೆದಾರರ ಸಂಘ ಬೆಂಬಲಿಸುತ್ತದೆ ಎಂದು ಹೇಳಿದರು. ಚಿಕ್ಕನಾಯಕನಹಳ್ಳಿ ತಾಲೂಕಿನ ಗುತ್ತಿಗೆದಾರ ಚಿಕ್ಕೆಗೌಡ ಮಾತನಾಡಿ, ತಾಲೂಕಿನ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜನಿಯರ್‌ಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 34 ಲಕ್ಷ ರು. ಜೆಜೆಎಂ ಕೆಲಸ ಗುತ್ತಿಗೆ ಪಡೆದು ಕಾಮಗಾರಿ ಮುಗಿಸಿ ಒಂದು ವರ್ಷ ಕಳೆದರೂ ಬಿಲ್‌ ಪಾವತಿ ಮಾಡದೆ ವಿನಾಕಾರಣ ಕಾಲಹರಣ ಮಾಡುತ್ತಿದ್ದರು. ಲಂಚಕ್ಕೆ ಬೇಡಿಕೆ ಇಟ್ಟ ಪರಿಣಾಮ ಲೋಕಾಯುಕ್ತರ ಮೊರೆ ಹೋಗಬೇಕಾಯಿತು ಎಂದು ಹೇಳಿದರು.

ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಬಿ.ಪಿ.ಸುರೇಶ್‌ಕುಮಾರ್, ಖಜಾಂಚಿ ಕೋದಂಡರಾಮಯ್ಯ, ಸಹ ಕಾರ್ಯದರ್ಶಿ ಸಿ.ಆರ್. ಉಮೇಶ್ ಮತ್ತಿತರರು ಹಾಜರಿದ್ದರು.

ಜಿಪಂ ಸಿಇಒಗೆ ಲಂಚ ಕೊಡಬೇಕು

ಮೊದಲು ಹಿರಿತನದ ಆಧಾರದಲ್ಲಿ ಎಲ್.ಓ.ಸಿ. ಬಿಡುಗಡೆ ಮಾಡುತ್ತಿದ್ದರು. ಆದರೆ ಈಗ ಯಾರು ಕೈ ಬೆಚ್ಚಗೆ ಮಾಡಿದರೂ ಅವರಿಗೆ ಬಿಲ್ ಪಾವತಿಸುವಂತೆ ಸಚಿವರು, ಶಾಸಕರು ಒತ್ತಡ ತರುತ್ತಾರೆ. ಜೆಜೆಎಂ ಕಾಮಗಾರಿಯ ಹಣ ಪಡೆಯಲು ಜಿಪಂ ಸಿಇಒಗೆ ಇಂತಿಷ್ಟು ಲಂಚವನ್ನು ಇಂಜಿನಿಯರ್‌ಗಳ ಮೂಲಕ ತಲುಪಿಸಬೇಕು. ಇದಕ್ಕೆ ಚಿಕ್ಕನಾಯಕಹಳ್ಳಿಯಲ್ಲಿ ನಡೆದ ಲೋಕಾಯುಕ್ತ ದಾಳಿಯೇ ಸಾಕ್ಷಿ ಎಂದು ಎ.ಡಿ.ಬಲರಾಮಯ್ಯ ಆರೋಪಿಸಿದರು.

ಗುತ್ತಿಗೆದಾರರಿಗೆ ಬರಬೇಕಾದ ಬಾಕಿ ಎಷ್ಟು?

ರಾಜ್ಯದಲ್ಲಿ ಗುತ್ತಿಗೆದಾರರಿಗೆ ವಿವಿಧ ಇಲಾಖೆಗಳಿಂದ ೩೧ ಸಾವಿರ ಕೋಟಿ ರು. ಬಾಕಿ ಬರಬೇಕು. ಪಿ. ಆರ್. ಇ. ಡಿ 2500 ಕೋಟಿ ರು. ಕ್ರೇಡಲ್ 1000 ಕೋಟಿ ರು., ಎಮ್ ಐ 2900 ಕೋಟಿ ರು., ಎಸ್ ಎಚ್ ಡಿ ಪಿ 2000 ಕೊಟಿ ರು., ಪಿಡಬ್ಲ್ಯೂಡಿ 9000 ಕೋಟಿ ಸೇರಿ ವಿವಿಧ ಇಲಾಖೆಗಳ 31 ಸಾವಿರ ಕೋಟಿ ರು. ಬಿಲ್‌ ಬಾಕಿ ಇವೆ. ಮುಂದಿನ ಎರಡು ತಿಂಗಳಲ್ಲಿ ಬಾಕಿ ಬಿಡುಗಡೆ ಮಾಡದಿದ್ದರೆ ಗುತ್ತಿಗೆದಾರರ ಸಂಘದಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎ.ಡಿ.ಬಲರಾಮಯ್ಯ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!