ಕೆಂಪೇಗೌಡ ಲೇಔಟ್‌ಗೆ ಆಗಸ್ಟ್‌ನಲ್ಲಿ ವಿದ್ಯುತ್‌

KannadaprabhaNewsNetwork | Updated : Jul 12 2024, 09:26 AM IST

ಸಾರಾಂಶ

ಹಲವು ಕಾರಣದಿಂದ ನಿಧಾನಗತಿಯಲ್ಲಿ ನಡೆಯುತ್ತಿರುವ ಕೆಂಪೇಗೌಡ ಲೇಔಟ್‌ಗೆ ವಿದ್ಯುತ್‌ ಭಾಗ್ಯ ಶೀಘ್ರವೇ ಸಿಗಲಿದೆ. ವಿದ್ಯುತ್‌ ಉಪಕೇಂದ್ರ ನಿರ್ಮಾಣ ಆಗಸ್ಟ್‌ನಲ್ಲಿ ಮುಗಿಯಲಿದೆ.

ಸಂಪತ್‌ ತರೀಕೆರೆ

  ಬೆಂಗಳೂರು:  ನಾಡಪ್ರಭು ಕೆಂಪೇಗೌಡ ಬಡಾವಣೆಯ (ಎನ್‌ಪಿಕೆಎಲ್‌) ಮೊದಲ ವಿದ್ಯುತ್‌ ಉಪಕೇಂದ್ರ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಆಗಸ್ಟ್‌ ಮೊದಲ ವಾರದಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾರ್ಯ ಆರಂಭಗೊಳ್ಳಲಿದೆ.

3/31.5 ಎಂವಿಎ, 66/11ಕೆವಿ ವಿದ್ಯುತ್‌ ಉಪಕೇಂದ್ರ ನಿರ್ಮಾಣವು ಅಂದಾಜು ₹46 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಎಸ್‌ಎಂ ಎಂಜಿನಿಯರ್ಸ್ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ವಿದ್ಯುತ್‌ ಉಪಕೇಂದ್ರ ನಿರ್ಮಾಣದ ಟೆಂಡರ್‌ ಪಡೆದುಕೊಂಡಿದ್ದು, 2022ರಲ್ಲಿಯೇ ಕಾಮಗಾರಿ ಮುಗಿಸಬೇಕಿತ್ತು. ಆದರೆ, ವಿವಿಧ ಅಡೆತಡೆಗಳ ಹಿನ್ನೆಲೆಯಲ್ಲಿ ಈ ಜುಲೈ ಅಂತ್ಯದೊಳಗೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಿದೆ.

ಪ್ರಸ್ತುತ ವಿದ್ಯುತ್‌ ಮುಖ್ಯ ಮಾರ್ಗಕ್ಕೆ (ಮೈನ್‌ ಲೇನ್‌) ಕೇಬಲ್‌ ಸಂಪರ್ಕ ಕಲ್ಪಿಸುವ ಕಾರ್ಯ ನಡೆಯುತ್ತಿದ್ದು ಎರಡು ವಾರದೊಳಗೆ ಮುಕ್ತಾಯವಾಗಲಿದೆ. ನಂತರ ಚಾರ್ಜಿಂಗ್‌ ಪ್ರಕ್ರಿಯೆ ಆರಂಭವಾಗಲಿದೆ. ಇದು ಮುಕ್ತಾಯವಾಗುತ್ತಿದ್ದಂತೆ ಬೀದಿ ದೀಪಗಳು, ಮನೆಗಳಿಗೆ ಸಂಪರ್ಕ ಕೊಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಈ ಉಪ ಕೇಂದ್ರದಿಂದ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆವರೆಗೂ ಇಂಟರ್‌ ಲಿಂಕಿಂಗ್‌ ಕೊಡಬಹುದಾದ ವ್ಯವಸ್ಥೆಯಿದೆ ಎಂದು ಬಿಡಿಎ ಅಧಿಕಾರಿಗಳು ‘ಕನ್ನಡ ಪ್ರಭ’ಕ್ಕೆ ತಿಳಿಸಿದರು.

ಕೊಮ್ಮಘಟ್ಟ ವಿದ್ಯುತ್‌ ಉಪಕೇಂದ್ರಕ್ಕೆ ವಿದ್ಯುತ್‌ ಸರಬರಾಜು ಮಾಡಲು ಬೆಸ್ಕಾಂಗೆ ಈಗಾಗಲೇ ₹59 ಕೋಟಿ ಪಾವತಿಸಲಾಗಿದೆ. ಆರಂಭದಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ನಿರ್ಬಂಧ ಇರಲಿದೆ. ಹೀಗಾಗಿ ಸುಮಾರು 4 ಸಾವಿರ ನಿವಾಸಗಳಿಗೆ ವಿದ್ಯುತ್‌ ಒದಗಿಸಬಹುದಾಗಿದೆ. ನಂತರ ಬಡಾವಣೆಯಲ್ಲಿ ಮನೆಗಳು ನಿರ್ಮಾಣವಾದಂತೆ ನಿರ್ಬಂಧವನ್ನು ಬೆಸ್ಕಾಂ ತೆರವುಗೊಳಿಸಲಿದ್ದು, 14 ಸಾವಿರ ನಿವಾಸಗಳಿಗೆ ವಿದ್ಯುತ್ ಸಂಪರ್ಕ ಕೊಡಬಹುದಾಗಿದೆ.

ಕೊಮ್ಮಘಟ್ಟ ಉಪಕೇಂದ್ರದಿಂದ ಬಡಾವಣೆಯ 4ರಿಂದ 7 ಬ್ಲಾಕ್‌ಗಳಿಗೆ ವಿದ್ಯುತ್‌ ಸಂಪರ್ಕ ಕೊಡಲು ಯೋಜಿಸಲಾಗಿದೆ. ಉಳಿದಂತೆ ಬ್ಲಾಕ್‌ 1-3 ಮತ್ತು 8-9 ಬ್ಲಾಕ್‌ಗಳಿಗೆ ಮಾಚೋಹಳ್ಳಿ ಕೈಗಾರಿಕಾ ಪ್ರದೇಶದ ಉಪಕೇಂದ್ರದಿಂದ ಸಂಪರ್ಕ ಕೊಡಲು ಮಾತುಕತೆ ನಡೆಸಲಾಗಿದೆ. ಇದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಭೀಮನಕೊಪ್ಪೆ ಉಪಕೇಂದ್ರ ನಿರ್ಮಾಣದ ನಂತರ ಬ್ಲಾಕ್‌ 6 ಮತ್ತು 7 ವಿದ್ಯುತ್‌ ಸಂಪರ್ಕ ದೊರೆಯಲಿದೆ.

ಮೂರು ವಿದ್ಯುತ್‌ ಕೇಂದ್ರಗಳು

ಕೊಮ್ಮಘಟ್ಟ ವಿದ್ಯುತ್‌ ಉಪಕೇಂದ್ರ ನಿರ್ಮಾಣಗೊಂಡು ಬಡಾವಣೆಯ ನಿವೇಶನಗಳಲ್ಲಿ ಕಟ್ಟಡಗಳು, ಮನೆಗಳು ನಿರ್ಮಾಣ ಆರಂಭಗೊಂಡ ಬಳಿಕ ಅಗತ್ಯವೆನ್ನಿಸಿದರೆ ಇನ್ನೂ ಮೂರು ವಿದ್ಯುತ್‌ ಕೇಂದ್ರಗಳನ್ನು ನಿರ್ಮಾಣ ಮಾಡಲು ಬಿಡಿಎ ಸಿದ್ಧತೆ ಮಾಡಿಕೊಂಡಿದೆ. ಕೊಮ್ಮಘಟ್ಟ ಉಪಕೇಂದ್ರದಿಂದ ಸುಮಾರು 14 ಸಾವಿರ ಮನೆಗಳಿಗೆ ವಿದ್ಯುತ್‌ ಸೌಕರ್ಯ ಕಲ್ಪಿಸಬಹುದಾಗಿದೆ.

ಎನ್‌ಪಿಕೆಎಲ್‌ ಲೇಔಟ್‌ನಲ್ಲಿ ಅಂದಾಜು 30 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡಿದ್ದು, ಕೊಮ್ಮಘಟ್ಟದ ವಿದ್ಯುತ್‌ ಉಪಕೇಂದ್ರದಿಂದ ಸಂಪೂರ್ಣವಾಗಿ ವಿದ್ಯುತ್‌ ಸಂಪರ್ಕ ಒದಗಿಸಲು ಸಾಧ್ಯವಿಲ್ಲ. ನಿವೇಶನಗಳಲ್ಲಿ ಮಾಲೀಕರು ಮನೆಗಳನ್ನು ಕಟ್ಟಿಕೊಳ್ಳುವುದನ್ನು ಆರಂಭಿಸಿದ ಬಳಿಕ ಅಗತ್ಯಕ್ಕೆ ಅನುಗುಣವಾಗಿ ಭೀಮನಕೊಪ್ಪೆಯಲ್ಲಿ 220/66/11 ಕೆವಿ, ಸೂಲಿಕೆರೆಯಲ್ಲಿ 66/11 ಕೆವಿ ಮತ್ತು ಸೀಗೇಹಳ್ಳಿಯಲ್ಲಿ 66/11 ಕೆವಿ ವಿದ್ಯುತ್‌ ಉಪಕೇಂದ್ರ ನಿರ್ಮಾಣವನ್ನು ಬಿಡಿಎ ಮಾಡಲಿದ್ದು, ಅದಕ್ಕಾಗಿ ಜಾಗವನ್ನು ಗುರುತಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮನೆ ಪ್ಲಾನ್‌ಗೆ ಅನುಮೋದನೆ

ಕೆಂಪೇಗೌಡ ಲೇಔಟ್‌ನಲ್ಲಿ ಮನೆಗಳನ್ನು ನಿರ್ಮಾಣ ಮಾಡಲು ಈ ಹಿಂದೆ ಬಿಡಿಎ 25 ನಿವೇಶನಗಳ ಮಾಲೀಕರು ಸಲ್ಲಿಸಿದ್ದ ಪ್ಲಾನ್‌ಗೆ ಅನುಮೋದನೆ ನೀಡಿತ್ತು. ಇದೀಗ 70ಕ್ಕೂ ಹೆಚ್ಚು ಮಂದಿ ಮನೆಗಳನ್ನು ನಿರ್ಮಾಣ ಮಾಡಲು ಅನುಮೋದನೆ ಕೋರಿ ಸಲ್ಲಿಸಿರುವ ಅರ್ಜಿಗಳಿಗೂ ಅನುಮತಿ ನೀಡಿದ್ದು, ಮನೆ ಕಟ್ಟಿಕೊಳ್ಳಲು ಬೇಕಾದ ಮೂಲಸೌಕರ್ಯಗಳನ್ನು ಪ್ರಾಧಿಕಾರ ಒದಗಿಸಲಿದೆ. ನಿವೇಶನಗಳ ಸಮೀಪವಿರುವ ಹಳ್ಳಿಗಳಿಂದ ತಾತ್ಕಾಲಿಕವಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಲಿದ್ದು, ಕೊಮ್ಮಘಟ್ಟದ ವಿದ್ಯುತ್‌ ಉಪಕೇಂದ್ರ ಆರಂಭಗೊಂಡ ಬಳಿಕ ಅಲ್ಲಿಂದಲೇ ವಿದ್ಯುತ್‌ ಸರಬರಾಜು ಮಾಡಲಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

Share this article