ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕರಾಗಿ ಎಸ್. ಪ್ರಭಾಕರ್ ಕೇಂದ್ರೀಯ ಆಡಳಿತ ನ್ಯಾಯ ಮಂಡಳಿಯ ಆದೇಶದ ಮೇರೆಗೆ ಸೋಮವಾರ ಸಂಜೆ ಅಧಿಕಾರ ಸ್ವೀಕರಿಸಿದರು. ೨೦೨೩ ರ ಆ.೨೮ ರಂದು ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕರಾಗಿ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕರಾಗಿದ್ದ ಡಾ.ಪಿ.ರಮೇಶ್ ಕುಮಾರ್ ಜಾಗಕ್ಕೆ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು.ಆ.೨೯ ರಂದು ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕ್ಷೇತ್ರ ನಿರ್ದೇಶಕರಾಗಿ ಪ್ರಭಾಕರ್ ಮೊದಲ ಬಾರಿಗೆ ಅಧಿಕಾರ ಸ್ವೀಕರಿಸಿದ್ದರು. ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ, ಕ್ಷೇತ್ರ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ರಾಜ್ಯ ಸರ್ಕಾರ ಮಾಡಿದ್ದ ವರ್ಗಾವಣೆಯನ್ನು ಪ್ರಶ್ನಿಸಿ ಕೇಂದ್ರೀಯ ಆಡಳಿತ ನ್ಯಾಯ ಮಂಡಳಿಯಲ್ಲಿ ಮೊರೆ ಹೋಗಿ ತಡೆಯಾಜ್ಞೆ ತಂದು ಮತ್ತೆ ಅಧಿಕಾರ ಪಡೆದಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿ, ಕ್ಷೇತ್ರ ನಿರ್ದೇಶಕ ಪ್ರಭಾಕರ್ ಎಸ್ ಕಳೆದ ಆರು ತಿಂಗಳಿನಿಂದ ಕಾದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ, ಕ್ಷೇತ್ರ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ತಡೆಯಾಜ್ಞೆಯನ್ನು ಕೇಂದ್ರೀಯ ಆಡಳಿತ ನ್ಯಾಯ ಮಂಡಳಿ ಮಾ.೫ ರಂದು ರದ್ದು ಪಡಿಸಿತ್ತು.
ಕೇಂದ್ರೀಯ ಆಡಳಿತ ನ್ಯಾಯ ಮಂಡಳಿಯು ಅರಣ್ಯ ಸಂರಕ್ಷಣಾಧಿಕಾರಿ, ಕ್ಷೇತ್ರ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ಅರ್ಜಿ ವಜಾಗೊಳಿಸಿ ಆದೇಶ ನೀಡಿದ್ದರೂ ಸಿಎಟಿಯ ಆದೇಶದ ದೃಡೀಕೃತ ಪ್ರತಿ ಬೇಕು ಎಂದು ಉಪ ಅರಣ್ಯ ಅರಣ್ಯ ಸಂರಕ್ಷಣಾಧಿಕಾರಿ, ಕ್ಷೇತ್ರ ನಿರ್ದೇಶಕ ಪ್ರಭಾಕರ್ ಎಸ್ ಗೆ ಮಾ.೬ ರಿಂದಲೂ ಅಧಿಕಾರ ನೀಡಿರಲಿಲ್ಲ. ಮಾ.೧೧ ರಂದು ಸಿಎಟಿಯ ಆದೇಶದ ದೃಡೀಕೃತ ಪ್ರತಿಯೊಂದಿಗೆ ನೂತನ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕ್ಷೇತ್ರ ನಿರ್ದೇಶಕ ಪ್ರಭಾಕರ್ ಬಂಡೀಪುರ ಕಚೇರಿಗೆ ಸೋಮವಾರ ಸಂಜೆ ಬರುವ ಮಾಹಿತಿ ಅರಿತು ಸಿಎಫ್ ಡಾ.ಪಿ.ರಮೇಶ್ ಕುಮಾರ್ ಜಾಗ ಖಾಲಿ ಮಾಡಿದ್ದರು. ಬಳಿಕ ಸಿಎಫ್ ಕಚೇರಿಯಲ್ಲಿ ನೂತನ ಡಿಸಿಎಫ್, ಕ್ಷೇತ್ರ ನಿರ್ದೇಶಕ ಪ್ರಭಾಕರ್ ಅಧಿಕಾರ ಸ್ವೀಕರಿಸುವ ಮೂಲಕ ಬಂಡೀಪುರ ಡಿಸಿಎಫ್, ಕ್ಷೇತ್ರ ನಿರ್ದೇಶಕರಾಗಿ ೨ ನೇ ಬಾರಿಗೆ ಅಧಿಕಾರ ಪಡೆದಂತಾಗಿದೆ.ನೂತನ ಡಿಸಿಎಫ್, ಕ್ಷೇತ್ರ ನಿರ್ದೇಶಕ ಪ್ರಭಾಕರ್ ಎಸ್‌ಗೆ ಬಂಡೀಪುರ ಎಸಿಎಫ್ ನವೀನ್,ಗುಂಡ್ಲುಪೇಟೆ ಎಸಿಎಫ್ ಜಿ.ರವೀಂದ್ರ,ಓಂಕಾರ ಆರ್‌ಎಫ್‌ಒ ಕೆ.ಪಿ.ಸತೀಶ್ ಕುಮಾರ್,ಮದ್ದೂರು ಆರ್ ಎಫ್ ಒ ಬಿ.ಎಂ.ಮಲ್ಲೇಶ್,ಬಂಡೀಪುರ ದೀಪಾ ಹೂ ಗುಚ್ಛ ನೀಡಿ ಶುಭ ಕೋರಿದರು.