ಔರಾದ್‌ ತಹಸೀಲ್ದಾರ್‌ ಕಚೇರಿಗೆ ಪ್ರಭು ಚವ್ಹಾಣ್‌ ಭೇಟಿ

KannadaprabhaNewsNetwork |  
Published : Nov 11, 2023, 01:15 AM ISTUpdated : Nov 11, 2023, 01:16 AM IST
ಚಿತ್ರ 10ಬಿಡಿಆರ್60 | Kannada Prabha

ಸಾರಾಂಶ

ಬೆಳಗ್ಗೆ 10 ಗಂಟೆಗೆ ತಹಸೀಲ್ ಕಚೇರಿಗೆ ಬಂದ ಶಾಸಕರು, ಕಚೇರಿಯ ಎಲ್ಲ ವಿಭಾಗಗಳಲ್ಲಿ ಸಂಚರಿಸಿದಾಗ ಬೆರಳೆಣಿಕೆಯಷ್ಟು ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿರುವುದನ್ನು ಕಂಡು ತೀವ್ರ ಅಸಮಾಧಾನಗೊಂಡರು. ನಂತರ ಮುಖ್ಯದ್ವಾರದ ಬಳಿ ಕುಳಿತು ಅಧಿಕಾರಿ ಮತ್ತು ಸಿಬ್ಬಂದಿಯ ಸಮಯ ಪಾಲನೆಯ ಬಗ್ಗೆ ತಿಳಿದುಕೊಂಡರು

ಔರಾದ್: ಬೆಳಗ್ಗೆ 10 ಗಂಟೆಗೆ ತಹಸೀಲ್ ಕಚೇರಿಗೆ ಬಂದ ಶಾಸಕರು, ಕಚೇರಿಯ ಎಲ್ಲ ವಿಭಾಗಗಳಲ್ಲಿ ಸಂಚರಿಸಿದಾಗ ಬೆರಳೆಣಿಕೆಯಷ್ಟು ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿರುವುದನ್ನು ಕಂಡು ತೀವ್ರ ಅಸಮಾಧಾನಗೊಂಡರು. ನಂತರ ಮುಖ್ಯದ್ವಾರದ ಬಳಿ ಕುಳಿತು ಅಧಿಕಾರಿ ಮತ್ತು ಸಿಬ್ಬಂದಿಯ ಸಮಯ ಪಾಲನೆಯ ಬಗ್ಗೆ ತಿಳಿದುಕೊಂಡರು.

ಸುಮಾರು 17ಕ್ಕೂ ಹೆಚ್ಚು ಸಿಬ್ಬಂದಿ ವಿಳಂಬವಾಗಿ ಕಚೇರಿಗೆ ಆಗಮಿಸಿದರು. 15ಕ್ಕೂ ಹೆಚ್ಚು ನೌಕರರು ಅನಧಿಕೃತವಾಗಿ ಗೈರು ಹಾಜರಾಗಿರುವುದು ಕಂಡು ಬಂತು. ಇವರ ಸಂಬಳ ಕಡಿತಗೊಳಿಸಿ, ಕೂಡಲೇ ಕಾರಣ ಕೇಳಿ ನೋಟಿಸ್ ನೀಡಿ, ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಬೇಕೆಂದು ತಹಸೀಲ್ದಾರ್‌ಗೆ ಸೂಚಿಸಿದರು.

ಈ ವೇಳೆ ಜಿಲ್ಲಾಧಿಕಾರಿಯವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಸರಿಯಾಗಿ ಕೆಲಸ ಮಾಡದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಅವ್ಯವಸ್ಥೆ ಸುಧಾರಿಸಬೇಕೆಂದು ತಿಳಿಸಿದರು.

ಔರಾದ್‌ ತಹಸೀಲ್ ಕಚೇರಿ ಸಿಬ್ಬಂದಿ ಬಗ್ಗೆ ಜನರಿಂದ ನಿರಂತರ ದೂರುಗಳು ಬರುತ್ತಿರುವ ಹಿನ್ನೆಲೆ ದಿಢೀರ್ ಭೇಟಿ ನೀಡಲಾಗಿದೆ. ಸಾಕಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿ ತಡವಾಗಿ ಆಗಮಿಸುವುದು, ಅನಧಿಕೃತ ಗೈರಾಗುವುದು ಕಾಣಿಸಿದೆ. ಈ ಕುರಿತು ಸಚಿವರು, ಪ್ರಧಾನ ಕಾರ್ಯದರ್ಶಿಯವರಿಗೂ ಪತ್ರ ಬರೆಯಲಾಗುವುದು ಎಂದರು.

ತಹಸೀಲ್ ಆವರಣ ಕಸದಿಂದ ತುಂಬಿದೆ. ಇನ್ನೂ ಗುಟಕಾ ತಿಂದು ಗೋಡೆಯ ಮೇಲೆ ಉಗುಳುವುದು ಕಾಣಿಸುತ್ತಿದೆ. ಇವೆಲ್ಲವೂ ಸುಧಾರಣೆಯಾಗಬೇಕು. ಕಛೇರಿಯಲ್ಲಿ ಸಿಸಿ ಟಿವಿ ಅಳವಡಿಸಿ ಕಛೇರಿಯ ಸಿಬ್ಬಂದಿಯ ಮೇಲೆ ನಿಗಾ ವಹಿಸಬೇಕೆಂದು ತಹಸೀಲ್ದಾರರಾದ ಮಲಶೆಟ್ಟಿ ಚಿದ್ರೆ ಅವರಿಗೆ ಹೇಳಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ