ಯಲಬುರ್ಗಾ:
ಗಳಿಸಿದ ಹಣ, ಬಂಗಾರ, ಬೆಳ್ಳಿಯನ್ನು ಯಾರಾದರೂ ಕದಿಯಬಹುದು. ಆದರೆ ಕಲಿತ ವಿದ್ಯೆಯನ್ನು ಯಾರು ಕದಿಯಲು ಸಾಧ್ಯವಿಲ್ಲ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಂತಹ ಚಿಂತನೆ ಮಾಡುವ ಅಗತ್ಯವಿದೆ ಎಂದು ಜಿಪಂ ಮಾಜಿ ಸದಸ್ಯ ಯಂಕಣ್ಣ ಯರಾಶಿ ಹೇಳಿದರು.ಪಟ್ಟಣದ ಅಕ್ಷಯ ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ರಾತ್ರಿ ನಡೆದ ೧೫ನೇ ವರ್ಷದ ಅಕ್ಷಯ ವೈಭವ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಗಳು ನಿರಂತರ ಅಭ್ಯಾಸದ ಮೂಲಕ ಉನ್ನತ ಗುರಿ ಮುಟ್ಟುವ ಛಲ ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದ ಶಿಕ್ಷಣ ಕಲಿಕೆ ಭದ್ರ ಬುನಾದಿಯಾಗಿದೆ. ಹೀಗಾಗಿ ಪಾಲಕರು ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ಎಂದು ಹೇಳಿದರು.ಜಿಪಂ ಮಾಜಿ ಸದಸ್ಯ ಸಿ.ಎಚ್. ಪಾಟೀಲ ಹಾಗೂ ತಾಪಂ ಇಒ ಸಂತೋಷ ಪಾಟೀಲ ಬಿರಾದಾರ ಮಾತನಾಡಿ, ಶಿಸ್ತು, ವಿದ್ಯೆ, ವಿನಯ ಇವುಗಳು ಇಂದಿನ ವಿದ್ಯಾರ್ಥಿಗಳಲ್ಲಿ ಇರಬೇಕಾದ ಅತ್ಯಂತ ಮೌಲ್ಯಯುತ ಗುಣಗಳಾಗಿವೆ. ಶಿಕ್ಷಕರು ಕರ್ತವ್ಯ ಪ್ರಜ್ಞೆಯನ್ನು ಅಳವಡಿಸಿಕೊಂಡು ಕಾರ್ಯನಿರ್ವೆಹಿಸಿದಾಗ ಶಿಕ್ಷಣ ಸುಧಾರಣೆಯಾಗುವುದರಲ್ಲಿ ಯಾವ ಅನುಮಾನವಿಲ್ಲ. ಮಕ್ಕಳ ಸಾಮರ್ಥಕ್ಕೆನುಗುಣವಾಗಿ ಶಿಕ್ಷಕರು ಪಾಠ ಬೋಧನೆ ಮಾಡಿದರೆ ಮಕ್ಕಳ ಕಲಿಕೆಯ ಗುಣಮಟ್ಟಕ್ಕೆ ಪೂರಕವಾಗುತ್ತದೆ ಎಂದು ಹೇಳಿದರು.
ಬಿಇಒ ಸೋಮಶೇಖರಗೌಡ ಪಾಟೀಲ ಮಾತನಾಡಿ, ಪಾಲಕರು ಮಕ್ಕಳಿಗೆ ೧೦೦ಕ್ಕೆ ನೂರು ಅಂಕ ಪಡೆಯಲೇಬೇಕು ಎಂದು ಒತ್ತಡ ಹೇರಬಾರದು. ಇದು ಮಗುವಿನ ಮನಸ್ಸಿನ ಮೇಲೆ ದುಷ್ಟಪರಿಣಾಮ ಬೀರಲಿದೆ. ಅವರಿಗೆ ಮುಕ್ತ ಮನಸ್ಸಿನಿಂದ ಅಭ್ಯಾಸ ಮಾಡಲು ಬಿಡಬೇಕು. ಪಾಲಕರು ಮಕ್ಕಳ ಕಲಿಕೆಯ ಗುಣಮಟ್ಟವನ್ನು ಪರಿಕ್ಷಿಸುವ ಕಾರ್ಯಕ್ಕೆ ಮುಂದಾಗಬೇಕು. ಅಂದಾಗ ಮಕ್ಕಳು ವಿದ್ಯಾವಂತರಾಗಲು ಸಾಧ್ಯ ಎಂದರು.ಸಂಸ್ಥೆ ಅಧ್ಯಕ್ಷ ಪ್ರಕಾಶ ಬೇಲೇರಿ ಸಭೆ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಸಂಸ್ಥೆ ನಿರ್ದೇಶಕರಾದ ಸುಧೀರ ಕೊರ್ಲಳ್ಳಿ, ಕಲ್ಲನಗೌಡ ಓಜನಹಳ್ಳಿ, ಡಾ. ಎಸ್.ಸಿ. ದಾನರಡ್ಡಿ, ಡಾ. ಶಂಕರ ಕಟ್ಟಿ, ಮುಖ್ಯಶಿಕ್ಷಕಿ ಸವಿತಾ ಓಜನಹಳ್ಳಿ ಮತ್ತಿತರರು ಇದ್ದರು. ಶಿಕ್ಷಕ ಹನುಮಂತ ಪುರದ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.