ಬಸವತತ್ವದ ಆಚರಣೆಯೇ ಮನುಷ್ಯನ ಬದುಕಿಗೆ ದಾರಿದೀಪ: ಬಸನಗೌಡ

KannadaprabhaNewsNetwork |  
Published : Nov 16, 2026, 02:15 AM IST
ಯಲಬುರ್ಗಾ ತಾಲೂಕಿನ ವನಜಭಾವಿಯಲ್ಲಿ ಹಮ್ಮಿಕೊಂಡಿದ್ದ ವಚನ ಪ್ರಾರ್ಥನೆ, ಮಾಸಿಕ ಶಿವಾನುಭವ ಹಾಗೂ ಚೆನ್ನಬಸವಣ್ಣ ಜಯಂತಿ ಉದ್ದೇಶಿಸಿ ಬಸವದಳ ಗೌರವಾಧ್ಯಕ್ಷ ಬಸನಗೌಡ ಪಾಟೀಲ್ ಮಾತನಾಡಿದರು. | Kannada Prabha

ಸಾರಾಂಶ

ಶ್ರೇಷ್ಠ ಗುರುವಿನ ಮೂಲಕ ಲಿಂಗದೀಕ್ಷೆ ಪಡೆದು, ಲಿಂಗಾಂಗ ಸಾಮರಸ್ಯದ ಜೀವನ ನಡೆಸಿದಾಗ ಮಾತ್ರ ಬದುಕು ಪಾವನವಾಗಲು ಸಾಧ್ಯ.

ಯಲಬುರ್ಗಾ: ಮಾನವ ದೇವಮಾನವ ಆಗಬೇಕಾದರೆ ಲಿಂಗಾಯತ ಧರ್ಮದ ಅಷ್ಟಾವರಣಗಳ ಅರಿವು ಮತ್ತು ಅವುಗಳ ಆಚರಣೆ ಅತ್ಯಂತ ಮುಖ್ಯವಾಗಿದೆ ಎಂದು ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ಬಸನಗೌಡ ಪೊಲೀಸ್ ಪಾಟೀಲ್ ಹೇಳಿದರು.

ತಾಲೂಕಿನ ವನಜಭಾವಿಯಲ್ಲಿ ರಾಷ್ಟ್ರೀಯ ಬಸವದಳ ವತಿಯಿಂದ ಹಮ್ಮಿಕೊಂಡಿದ್ದ ವಚನ ಪ್ರಾರ್ಥನೆ, ಮಾಸಿಕ ಶಿವಾನುಭವ ಹಾಗೂ ಚೆನ್ನಬಸವಣ್ಣ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶ್ರೇಷ್ಠ ಗುರುವಿನ ಮೂಲಕ ಲಿಂಗದೀಕ್ಷೆ ಪಡೆದು, ಲಿಂಗಾಂಗ ಸಾಮರಸ್ಯದ ಜೀವನ ನಡೆಸಿದಾಗ ಮಾತ್ರ ಬದುಕು ಪಾವನವಾಗಲು ಸಾಧ್ಯ. ಲಿಂಗಾಯತ ಧರ್ಮದಲ್ಲಿ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಗುರುವಿನ ಮೂಲಕ ಶಿಷ್ಯನಿಗೆ ಇಷ್ಟಲಿಂಗ ದೀಕ್ಷೆ ದೊರೆಯುತ್ತದೆ. ಆದರೆ ಯಾರನ್ನೂ ಗುರುವೆಂದು ಸ್ವೀಕರಿಸದೆ, ಸುಜ್ಞಾನ ಹೊಂದಿರುವ ಅರ್ಹ ಗುರುವನ್ನೇ ಸ್ವೀಕರಿಸಬೇಕು. ಅಜ್ಞಾನಿಯನ್ನೇ ಗುರುವೆಂದು ಒಪ್ಪಿಕೊಂಡರೆ ಗುರು ಮತ್ತು ಶಿಷ್ಯ ಇಬ್ಬರೂ ಭ್ರಷ್ಟರಾಗುವ ಅಪಾಯವಿದೆ ಎಂಬ ಎಚ್ಚರಿಕೆಯನ್ನು ಬಸವಣ್ಣನವರು ವಚನಗಳ ಮೂಲಕ ನೀಡಿದ್ದಾರೆ ಎಂದರು.

ಗುರು ಶಿಷ್ಯನಿಗೆ ಧರ್ಮ, ಇಷ್ಟಲಿಂಗ ಪೂಜೆ, ಅಷ್ಟಾವರಣ, ಪಂಚಾಚಾರ ಹಾಗೂ ಷಟ್‌ಸ್ಥಲಗಳ ಕುರಿತು ಅರಿವು ಮೂಡಿಸುವುದೇ ವೇದದೀಕ್ಷೆ. ಶಿಷ್ಯನ ಅಂತರಂಗದ ಜ್ಞಾನದ ಬೆಳಕನ್ನು ಇಷ್ಟಲಿಂಗದ ರೂಪದಲ್ಲಿ ಕರುಣಿಸುವುದು ಕ್ರಿಯಾದೀಕ್ಷೆ. ಇಷ್ಟಲಿಂಗದ ಅನುಸಂಧಾನದ ಸಂದರ್ಭದಲ್ಲಿ ಷಡಕ್ಷರಿ ಮಂತ್ರವನ್ನು ಜಪಿಸುವಂತೆ ತಿಳಿಸುವುದು ಮಂತ್ರದೀಕ್ಷೆಯಾಗಿದೆ. ಈ ಮೂರು ವಿಧದ ದೀಕ್ಷೆಗಳ ಮಹತ್ವವನ್ನು ಅರಿತು ಪ್ರತಿಯೊಬ್ಬರೂ ಧಾರ್ಮಿಕ ಮೌಲ್ಯಗಳೊಂದಿಗೆ ಬದುಕಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಬಸವದಳ ಕಾರ್ಯದರ್ಶಿ ಬಸವರಾಜ ಹೂಗಾರ ಮಾತನಾಡಿ, ಮನುಷ್ಯ ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗಲು ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ ಮತ್ತು ಮಂತ್ರ ಎಂಬ ಅಷ್ಟಾವರಣಗಳು ಅತ್ಯವಶ್ಯಕ. ಜೀವನದಲ್ಲಿ ಎದುರಾಗುವ ಅಡ್ಡಿ-ಆತಂಕಗಳು, ದುಶ್ಚಟ ಹಾಗೂ ದುರ್ನಡತೆಗಳಿಂದ ದೂರವಿದ್ದು ಸನ್ಮಾರ್ಗದಲ್ಲಿ ನಡೆಯಲು ಅಷ್ಟಾವರಣಗಳು ರಕ್ಷಾಕವಚದಂತೆ ಕಾರ್ಯನಿರ್ವಹಿಸುತ್ತವೆ ಎಂದರು.

ಶರಣ ಅಮರೇಶಪ್ಪ ಗಡಿಹಳ್ಳಿ, ಬಸವ ಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ ಮಾತನಾಡಿದರು. ವನಜಭಾವಿ ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ದೇವಪ್ಪ ಕೋಳೂರು, ಗಣ್ಯರಾದ ನಾಗನಗೌಡ ಜಾಲಿಹಾಳ, ರೇವಣಪ್ಪ, ಗಿರಿಮಲ್ಲಪ್ಪ ಪರಂಗಿ, ಹನುಮಂತಪ್ಪ ಹುಣಸಿಹಾಳ, ವಿರೂಪಾಕ್ಷಪ್ಪ ಮೇಟಿ, ಹನುಮಂತಪ್ಪ ಮೇಟಿ, ನಿಂಗಪ್ಪ ಪರಂಗಿ, ಶರಣಪ್ಪ ಗೊಂದಿ, ಹನುಮಂತಪ್ಪ ಪರಂಗಿ, ಚನ್ನಬಸಪ್ಪ ಮೇಟಿ, ಭೀಮನಗೌಡ ಗೌಡ್ರು, ಪರಮೇಶ್ವರ ಉಚ್ಚಲಕುಂಟಿ, ಮಹಿಳಾ ಗಣದ ಯಮನಮ್ಮ ಗೌಡ್ರು ಸೇರಿದಂತೆ ಗ್ರಾಮದ ಶರಣರು ಹಾಗೂ ಭಕ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಕರಲ್ಲಿ ದೇಶಪ್ರೇಮ, ಸಾಮಾಜಿಕ ಹೊಣೆ ಮೇಳೈಸಲಿ
ಹಿಂದೂ ಅಲ್ಪ ಸಂಖ್ಯಾತರಾದರೆ ಅಪಾಯ ಕಟ್ಟಿಟ್ಟ ಬುತ್ತಿ: ಕೃಷ್ಣಾನಂದ ಕಾಮತ್‌