ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವ ಸರ್ಕಾರದ ಕ್ರಮವನ್ನು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಸ್ವಾಗತಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವ ಸರ್ಕಾರದ ಕ್ರಮವನ್ನು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಸ್ವಾಗತಿಸಿದ್ದಾರೆ.ಪ್ರಕರಣದ ಬಗ್ಗೆ ದಿನ ಕಳೆದಂತೆ ಹಲವು ಸಂಶಯಗಳು ಹುಟ್ಟಿಕೊಂಡಿದ್ದು, ಅಡಗಿರುವ ಸತ್ಯಾಸತ್ಯತೆಗಳು ಬಹಿರಂಗವಾಗಬೇಕಾದರೆ ಉನ್ನತ ಮಟ್ಟದ ತನಿಖೆ ಅಗತ್ಯವಿದೆ ಎಂದು ನಾವೂ ಬಯಸಿದ್ದೆವು. ಈ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ವಹಿಸಿರುವುದು ಉತ್ತಮ ಕ್ರಮ. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದವರನ್ನೇ ಪ್ರಕರಣದಲ್ಲಿ ಸಿಲುಕಿಸಿ ಕ್ರಿಮಿನಲ್ ಪಟ್ಟ ಕಟ್ಟಿರುವುದು ನ್ಯಾಯವಲ್ಲ. ತನಿಖೆಯ ಮೂಲಕ ನಿರಪರಾಧಿಗಳಿಗೆ ನ್ಯಾಯ ಸಿಗಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರದೀಪ್ ಪೂಜಾರಿ ಆತ್ಮಹತ್ಯೆಯ ಹಿಂದೆ ಅಡಗಿರುವ ಹಲವು ವಿಚಾರಗಳು ಬಹಿರಂಗವಾಗಬೇಕಿದೆ. ಪ್ರತಿಭಟನೆ ಮತ್ತು ಭಾಷಣಗಳ ಮೂಲಕ ಒತ್ತಡ ಹೇರಿ ಸತ್ಯವನ್ನು ಮುಚ್ಚಿಡುವ ಪ್ರಯತ್ನಗಳು ನಡೆಯುತ್ತಿರುವುದು ಸರಿಯಲ್ಲ. ಪ್ರದೀಪ್ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಮನವೊಲಿಸಲು ಆತನನ್ನು ಪ್ರೇರೇಪಿಸಿದವರು ಯಾರು? ಜಾಮೀನು ರದ್ದಾದರೆ 14 ವರ್ಷ ಜೈಲು ಸೇರಬೇಕಾಗುತ್ತದೆ ಎಂದು ಹೇಳಿ ಆತನನ್ನು ಮಾನಸಿಕವಾಗಿ ಕುಗ್ಗಿಸಿದವರು ಯಾರು? ಆತ್ಮಹತ್ಯೆಗೆ ಕಾರಣರಾದವರು ಯಾರು ಎಂಬುದು ತನಿಖೆಯಿಂದ ತಿಳಿಯಬೇಕಿದೆ ಎಂದು ಹೇಳಿದ್ದಾರೆ.ಘಟನೆ ನಡೆದ ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರಿಗೆ ಮಾಹಿತಿ ನೀಡಿದ ವ್ಯಕ್ತಿಗಳನ್ನೇ ಪ್ರಕರಣದಲ್ಲಿ ಸಿಲುಕಿಸಿರುವುದು ಅನ್ಯಾಯ. ಸಂತ್ರಸ್ತೆಯ ಮನೆಗೆ ನುಗ್ಗಿ ದಾಂದಲೆ ನಡೆಸಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರದೀಪ್ ಮೇಲೆ ಹಲ್ಲೆ ನಡೆದಿದ್ದು, ಘಟನೆಯ ಮೂರು ದಿನಗಳ ಬಳಿಕ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ವ್ಯಕ್ತಿಯೊಬ್ಬರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾನೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಹೀಗಾಗಿ ಆತನ ಸಾವಿಗೆ ಕಾರಣರಾದವರು ಯಾರು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಸಿಐಡಿ ತನಿಖೆಯಿಂದ ಎಲ್ಲ ಸತ್ಯಾಂಶಗಳು ಹೊರಬರಲಿ ಹಾಗೂ ಪ್ರಕರಣದಲ್ಲಿ ಸಿಲುಕಿರುವ ನಿರಪರಾಧಿಗಳಿಗೆ ನ್ಯಾಯ ದೊರೆಯಲಿ ಎಂದು ಅವರು ಆಗ್ರಹಿಸಿದ್ದಾರೆ.ಇದೇ ವೇಳೆ ಪ್ರಕರಣವನ್ನು ರಾಜಕೀಯಗೊಳಿಸಿ ಸಮಾಜವನ್ನು ಪಕ್ಷದ ವಿರುದ್ಧ ಎತ್ತಿಕಟ್ಟುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದ ಶುಭದರಾವ್, ಒತ್ತಡಕ್ಕೆ ಮಣಿದು ಅಮಾಯಕರನ್ನು ಗುರಿಯಾಗಿಸಿದರೆ ಕಾಂಗ್ರೆಸ್ ಮೌನವಾಗಿರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.