ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಹಿರೀಸಾವೆ ಗ್ರಾಮದ ಶ್ರೀ ಚೌಡೇಶ್ವರಿ ಭವನದಲ್ಲಿ ತಾಲೂಕು ಆಡಳಿತವು ಏರ್ಪಡಿಸಿದ್ದ ಪ್ರಜಾ ಸೇವಾ ಆಂದೋಲನ ಸಭೆಯಲ್ಲಿ ಮಾತನಾಡಿ, ಜನಸಾಮಾನ್ಯರ ಬದುಕು ಚಿಂತಾಜನಕ ಸ್ಥಿತಿಗೆ ತಲುಪಿದೆ. ಮಳೆಯ ತೀವ್ರ ಕೊರತೆಯ ಜೊತೆಗೆ ವಿದ್ಯುತ್ ಸಮಸ್ಯೆಯು ಬಿಗಡಾಯಿಸಿದೆ. ಕೆರೆ ಕಟ್ಟೆಗಳಲ್ಲಿ ನೀರಿಲ್ಲ. ಪರಿಣಾಮ ಅಂತರ್ಜಲ ತೀವ್ರ ಮಟ್ಟದಲ್ಲಿ ಕುಸಿದಿದ್ದು ಕೊಳವೆ ಬಾವಿಗಳಲ್ಲಿಯೂ ನೀರಿನ ಪ್ರಮಾಣವು ಗಣನೀಯವಾಗಿ ಕುಸಿಯುತ್ತಿದೆ. ಇದರಿಂದ ಮತ್ತಷ್ಟು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಬಗೆಹರಿಸುವಲ್ಲಿ ಕ್ರಮ ಕೈಗೊಳ್ಳಬೇಕು. ಜನಸಾಮಾನ್ಯರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ೧೫ ಸಾವಿರ ಅರ್ಜಿಗಳು ನೋಂದಣಿಯಾಗಿದ್ದು, ಅರ್ಹತೆ ಇದ್ದಲ್ಲಿ ಯಾವುದೇ ಕಾರಣಕ್ಕೂ ಕೈ ಬಿಡಬಾರದು. ವಿನಾಕಾರಣ ಕೈ ಬಿಟ್ಟರೆ ಪಿಡಿಒಗಳೇ ಜವಾಬ್ದಾರಿಯಾಗಲಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಈ ತಿಂಗಳ ೩೦ನೇ ತಾರೀಖಿನವರೆಗೂ ಅವಕಾಶ ಇದೆ ಎಂದು ತಿಳಿಸಿದರು.
ಎಚ್.ಹೊನ್ನೇನಹಳ್ಳಿ, ದಿಡಗ, ನುಗ್ಗೇಹಳ್ಳಿ ಸೇರಿ ಬಹುತೇಕ ಕಡೆ ಹೈಮಾಸ್ಟ್ ದೀಪಗಳು ಹಗಲಿನ ವೇಳೆಯೂ ಸಹ ಉರಿಯುತ್ತಿರುವುದು ಕಂಡು ಬರುತ್ತಿದೆ. ಇದರಿಂದ ವಿದ್ಯುತ್ ವ್ಯರ್ಥವಾಗಲಿದ್ದು ಜೊತೆಗೆ ಹೈಮಾಸ್ಟ್ ದುಸ್ಥಿತಿಗೊಂಡರೆ ಹೆಚ್ಚಿನ ಖರ್ಚು ತಗಲಿದೆ. ಆದ್ದರಿಂದ ಟೈಮರ್ಸ್ ಅಳವಡಿಸುವ ಮೂಲಕ ಸೂಕ್ತ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂದು ಪಿಡಿಒಗಳಿಗೆ ತಿಳಿಸಿದರು.
ಸರ್ವೇ ಇಲಾಖೆಗೆ ಸಂಬಂಧಪಟ್ಟಂತೆ ೧೫ ಅರ್ಜಿಗಳು, ಕಂದಾಯ ಇಲಾಖೆ- ೩೪, ಆರ್ ಡಿ ಪಿ ಆರ್ - ೧೭, ಕೆಇಬಿ- ೧, ನೀರಾವರಿ- ೧೬ ಹಾಗೂ ಇತರೆ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ೬ ಅರ್ಜಿಗಳು ಒಳಗೊಂಡಂತೆ ಒಟ್ಟು ೮೯ ಅರ್ಜಿಗಳು ಸಭೆಯಲ್ಲಿ ಸಲ್ಲಿಕೆಯಾಗಿವೆ. ಹಿರೀಸಾವೆ ಹೋಬಳಿ ವ್ಯಾಪ್ತಿಯ ರೈತರು ತಮ್ಮ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ತಿಳಿಸಿ ಬಗೆಹರಿಸುವಂತೆ ಮನವಿ ಮಾಡಿದರು. ಶಾಸಕರು ಹಾಗೂ ಅಧಿಕಾರಿಗಳು ಅಗತ್ಯ ದಾಖಲಾತಿಗಳೊಂದಿಗೆ ಬಗೆಹರಿಸುವಂತೆ ಭರವಸೆ ನೀಡಿದರು.