ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಪ್ರಜಾಸೇವಾ ಆಂದೋಲನ: ಸಚಿವ ಬಾಲಕೃಷ್ಣ

KannadaprabhaNewsNetwork |  
Published : Sep 06, 2026, 02:00 AM IST
ಪೊಟೋ೫ಸಿಪಿಟಿ೧: ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮವನ್ನು ಸಚಿವ ಎಚ್.ಸಿ.ಬಾಲಕೃಷ್ಣ ಉದ್ಘಾಟಿಸಿದರು. | Kannada Prabha

ಸಾರಾಂಶ

ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ಜನಸಾಮಾನ್ಯರ ಸಮಸ್ಯೆ ಗೆ ಪರಿಹಾರ ಕಂಡುಕೊಳ್ಳಲು, ಜನರ ಮನೆ ಬಾಗಿಲಿಗೆ ಸೇವೆ ಕಲ್ಪಿಸಲು ಪ್ರಜಾಸೇವಾ ಆಂದೋಲನಾ ರೂಪಿಸಲಾಗಿದೆ. ಈ ಹಿಂದೆ ನಡೆಯುವ ಕಾರ್ಯಕ್ರಮಗಳಿಗೆ ಲೆಕ್ಕಬುಕ್ಕ ಇಲ್ಲದಂತಾಗಿತ್ತು. ಆದರೆ, ಈ ಕಾರ್ಯಕ್ರಮದ ಸರ್ಕಾರದ ಅಧಿಕೃತ ಕಾರ್ಯಕ್ರಮವಾಗಿದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಸ್ಪಂದಿಸಿದರೆ ಸಾರ್ವಜನಿಕರ ಸಮಸ್ಯೆಗಳನ್ನು ಬೇಗ ಬಗೆಹರಿಸಬಹುದು. ಅಧಿಕಾರಿಗಳು ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಸಾರ್ವಜನಿಕರ ಕುಂದುಕೊರತೆ ಆಲಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಜಾಸೇವಾ ಆಂದೋಲನ ಹಮ್ಮಿಕೊಂಡಿದ್ದು, ಸರ್ಕಾರದ ಈ ವಿಶಿಷ್ಟ ಕಾರ್ಯಕ್ರಮವನ್ನು ಜನ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪೌರಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಬಾಲಕೃಷ್ಣ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಬಂದ ನಂತರ ಯಾರೂ ಮಾಡದಂಥ ಅದ್ಬುತ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೂಪಿಸಿದ್ದಾರೆ. ಇದೊಂದು ವಿಭಿನ್ನ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದ ಮೂಲಕ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಕರೆ ನೀಡಿದರು.

ಸಾರ್ವಜನಿಕ ಕುಂದುಕೊರತೆ ಅರಿಯಲು ಪೋರ್ಟಲ್ ರೂಪಿಸಲಾಗಿದೆ. ಅದರ ಮುಖಾಂತರ ನೀವು ಸಲ್ಲಿಸಿದ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿಯಲಿದೆ. ಇದರ ಮೇಲ್ವಿಚಾರಣೆ ಹಾಗೂ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ಸೇರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಡೆಸಲಿದ್ದಾರೆ. ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಎಂದು ತಿಳಿಸಿದರು.

ಹಿಂದಿನ ಸರ್ಕಾರ ರೂಪಿಸಿದ್ದ ಜಿಲ್ಲಾಧಿಕಾರಿ ನಡೆಗೆ ಹಳ್ಳಿ ಕಡೆಗೆ ಎಂಬಂಥ ಕಾಟಾಚಾರದ ಕಾರ್ಯಕ್ರಮ ಇದಲ್ಲ. ಬಡವರಿಗೆ ಅನುಕೂಲ ಆಗುವಂಥ ಕಾರ್ಯಕ್ರಮ ರೂಪಿಸಲಾಗಿದ್ದು, ಇದು ಸರ್ಕಾರದ ಬದ್ಧತೆಯ ಕಾರ್ಯಕ್ರಮವಾಗಿದೆ. ನಮ್ಮ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಯಾವುದನ್ನೂ ತಪ್ಪಿಸದಂತೆ ಅನುಷ್ಠಾನಕ್ಕೆ ತಂದಿದ್ದು, ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದರು.

ಮೊದಲ ಶನಿವಾರ ಮತ್ತು ಮೂರನೇ ಶನಿವಾರ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಜಾಸೇವಾ ಕಾರ್ಯಕ್ರಮ ನಡೆಯಲಿದೆ. ಎರಡು ಮತ್ತು ಮೂರನೇ ಶನಿವಾರ ಶಾಸಕರ ನೇತೃತ್ವದಲ್ಲಿ ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಪ್ರಜಾಸೇವಾ ಎಂಬುದು ಪ್ರತ್ಯೇಕ ಇಲಾಖೆಯಾಗಿದ್ದು, ಇದಕ್ಕೆ ಪ್ರತ್ಯೇಕ ಸಚಿವರನ್ನು ನೇಮಿಸುವುದಾಗಿ ಸಿಎಂ ತಿಳಿಸಿದ್ದಾರೆ, ಆದರೆ, ಸದ್ಯಕ್ಕೆ ಈ ಇಲಾಖೆಯನ್ನು ಅವರೇ ಹೊತ್ತಿದ್ದಾರೆ. ಇದು ಧ್ವನಿ ಇಲ್ಲದ ಜನರಿಗೆ ಶಕ್ತಿ ನೀಡುವ ಕಾರ್ಯಕ್ರಮವಾಗಿದೆ. ಪ್ರಜಾ ಸೇವೆಗಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಕೆಲವರು ಮಾತನಾಡುತ್ತಾರೆ, ಆದರೆ, ಕೆಲಸ ಮಾಡುವುದಿಲ್ಲ. ನಾವು ಮಾತನಾಡುವುದಿಲ್ಲ, ಕೆಲಸ ಮಾಡುತ್ತೇವೆ ಎಂದರು.

ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ಜನಸಾಮಾನ್ಯರ ಸಮಸ್ಯೆ ಗೆ ಪರಿಹಾರ ಕಂಡುಕೊಳ್ಳಲು, ಜನರ ಮನೆ ಬಾಗಿಲಿಗೆ ಸೇವೆ ಕಲ್ಪಿಸಲು ಪ್ರಜಾಸೇವಾ ಆಂದೋಲನಾ ರೂಪಿಸಲಾಗಿದೆ. ಈ ಹಿಂದೆ ನಡೆಯುವ ಕಾರ್ಯಕ್ರಮಗಳಿಗೆ ಲೆಕ್ಕಬುಕ್ಕ ಇಲ್ಲದಂತಾಗಿತ್ತು. ಆದರೆ, ಈ ಕಾರ್ಯಕ್ರಮದ ಸರ್ಕಾರದ ಅಧಿಕೃತ ಕಾರ್ಯಕ್ರಮವಾಗಿದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಸ್ಪಂದಿಸಿದರೆ ಸಾರ್ವಜನಿಕರ ಸಮಸ್ಯೆಗಳನ್ನು ಬೇಗ ಬಗೆಹರಿಸಬಹುದು. ಅಧಿಕಾರಿಗಳು ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದರು.

ಕಣ್ವ ಜಲಾಶಯದಿಂದ ₹೨೦೦ಕೋಟಿಯ ಮತ್ತೊಂದು ಲಿಫ್ಟ್ ಇರಿಗೇಷನ್ ಕಾರ್ಯಕ್ರಮ ರೂಪಿಸಲಾಗಿದೆ. ಇದರ ಜತೆಗೆ ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದೆ. ಚುನಾವಣಾ ಪೂರ್ವದಲ್ಲಿ ನಿವೇಶಕ್ಕೆ ಸಾಕಷ್ಟು ಅರ್ಜಿಗಳು ಬಂದಿದ್ದು, ನಿವೇಶನಗಳನ್ನು ನೀಡಲು ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು. ಮೊದಲ ಹಂತದ ಕಾರ್ಯಕ್ಕೆ ಬೇಗ ಚಾಲನೆ ನೀಡಲಾಗುವುದು. ಬಹಳ ಗ್ರಾಮಗಳಲ್ಲಿ ರಸ್ತೆ ವಿಸ್ತೀರ್ಣ, ಅಗಲೀಕರಣ ಆಗಬೇಕಿದೆ. ಅದನ್ನು ಮಾಡಲಾಗುವುದು. ನಮ್ಮವರೇ ಸಿಎಂ ಆಗಿರುವುದರಿಂದ ಅನುದಾನಕ್ಕೆ ಸಮಸ್ಯೆ ಇಲ್ಲ. ಸತ್ತೇಗಾಲ ಯೋಜನೆಗೆ ಕೆಲ ತಾಂತ್ರಿಕ ಅಡಚಣೆ ಉಂಟಾಗಿದ್ದು, ನಾಲ್ಕೈದು ತಿಂಗಳಲ್ಲಿ ಕೆಲಸ ಪೂರ್ಣವಾಗಲಿದೆ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಸುಧಾಮದಾಸ್ ಮಾತನಾಡಿ, ಡಿ.ಕೆ.ಶಿವಕುಮಾರ್ ಸಿಎಂ ಆದ ನಂತರ ರೂಪಿಸಿದ ಅತ್ಯುತ್ತಮ ಕಾರ್ಯಕ್ರಮ ಪ್ರಜಾಸೇವಾ ಆಂದೋಲನವಾಗಿದೆ. ಇದು ಅಧಿಕಾರಶಾಹಿಯನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗುವ ಕಾರ್ಯಕ್ರಮವಾಗಿದೆ. ಸರ್ಕಾರ ಮುತುವರ್ಜಿಯಿಂದ ಈ ಕಾರ್ಯಕ್ರಮ ರೂಪಿಸಿದ್ದು, ಇದನ್ನು ಸದುಪಯೋಗ ಮಾಡಿಕೊಳ್ಳುವುದು ಜನರ ಜವಾಬ್ದಾರಿ. ಎಷ್ಟೋ ಕಾರ್ಯಕ್ರಮಗಳು ಅರ್ಥ ಕಳೆದುಕೊಂಡಿರುವುದನ್ನು ನಾವು ನೋಡಿದ್ದೇವೆ. ಆದರೆ ಈ ಕಾರ್ಯಕ್ರಮ ಹಾಗಾಗದಂತೆ ನೋಡಿಕೊಳ್ಳಬೇಕು. ಜನರ ಕೆಲಸ ಮಾಡುವಾಗ ಸಾಕಷ್ಟು ಭ್ರಷ್ಟಾಚಾರ ನಡೆಯುವುದನ್ನು ತಡೆಯಲು ಈ ಕಾರ್ಯಕ್ರಮ ರೂಪಿಸಲಾಗಿದೆ. ಇದನ್ನು ಸದುಪಯೋಗ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ಉಪಾಧ್ಯಕ್ಷ ಎಸ್. ಗಂಗಾಧರ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಟರಾಜ್ ಗಾಣಕಲ್, ನಗರಸಭೆ ಅಧ್ಯಕ್ಷ ನಾಗೇಶ್, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಜೆ. ಮಂಜುನಾಥ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಪಂ ಸಿಇಒ ಅನ್ಮೋಲ್ ಜೈನ್, ಎಸ್ಪಿ ರೋಹನ್ ಜಗದೀಶ್ ಸೇರಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.

ಸಮಸ್ಯೆ ಪರಿಹಾರಕ್ಕೆ ಸೂಚನೆ:

ಪ್ರಜಾಸೇವೆ ಆಂದೋಲನ ಸಭೆಯ ಅಂಗವಾಗಿ ಸಾರ್ವಜನಿಕರು, ರೈತರು ಸಲ್ಲಿಸಿದ ಅಹವಾಲುಗಳನ್ನು ವೇದಿಕೆಯಲ್ಲಿಯೇ ಸ್ವೀಕರಿಸಿದ ಸಚಿವ ಎಚ್.ಸಿ. ಬಾಲಕೃಷ್ಣ ಹಾಗೂ ಶಾಸಕ ಸಿ.ಪಿ. ಯೋಗೇಶ್ವರ್ ಅವರು ಸ್ಥಳದಲ್ಲಿಯೇ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಜಾಸೇವೆ ಆಂದೋಲನದಲ್ಲಿ ವಿವಿಧ ಇಲಾಖೆಗಳ ವತಿಯಿಂದ ಸಾರ್ವಜನಿಕರು ಹಾಗೂ ರೈತರಿಂದ ಕುಂದುಕೊರತೆ ಹಾಗೂ ಅಹವಾಲುಗಳನ್ನು ಆಲಿಸಲು ಡಾ. ಬಿ.ಆರ್. ಅಂಬೇಡ್ಕರ್ ಭವನದ ಆವರಣದಲ್ಲಿ ೨೬ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಅಲ್ಲಿ ಕಂಪ್ಯೂಟರ್, ಪ್ರಿಂಟರ್‌ಗಳು, ಅರ್ಜಿಗಳು ಸೇರಿದಂತೆ ವಿವಿಧ ಪರಿಕರಗಳನ್ನು ಒದಗಿಸಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ತಮ್ಮ ಅಹವಾಲು ಹಾಗೂ ಕುಂದುಕೊರತೆಗಳನ್ನು ಸಲ್ಲಿಸಿದರು.

ಕಾನೂನುಬದ್ಧವಾಗಿರುವ ಅರ್ಜಿ ಶೀಘ್ರ ಇತ್ಯರ್ಥ: ಬಾಲಕೃಷ್ಣ

ಚನ್ನಪಟ್ಟಣ: ಇಂದು ತಾಲೂಕು ವ್ಯಾಪ್ತಿಯಲ್ಲಿ ನಡೆಸಿದ ಪ್ರಜಾಸೇವಾ ಆಂದೋಲನದಲ್ಲಿ ಸುಮಾರು ೮೦೦ರಿಂದ ೯೦೦ ಅರ್ಜಿ ಸ್ವೀಕೃತಗೊಂಡಿವೆ. ಕಾನೂನುಬದ್ಧವಾಗಿರುವ ಅರ್ಜಿಗಳನ್ನು ಶೀಘ್ರದಲ್ಲೇ ಇತ್ಯರ್ಥಪಡಿಸಲಾಗುವುದು ಎಂದು ಸಚಿವ ಎಚ್.ಸಿ.ಬಾಲಕೃಷ್ಣ ತಿಳಿಸಿದರು. ಪ್ರಜಾಸೇವಾ ಆಂದೋಲನದ ಅರ್ಜಿ ಸ್ವೀಕೃತಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಇದುವರೆಗೆ ಸುಮಾರು ೮೫೦೦ಯಿಂದ ೯ ಸಾವಿರ ಅರ್ಜಿಗಳು ಪೋರ್ಟಲ್‌ನಲ್ಲಿ ಸಲ್ಲಿಕೆಯಾಗಿವೆ ಎಂಬ ಮಾಹಿತಿ ಇದೆ ಎಂದರು.

ಕುಡಿಯುವ ನೀರಿನ ಸಮಸ್ಯೆ, ಜಮೀನು, ಪೋಡಿ ಸಮಸ್ಯೆ, ಪಿಂಚಣಿ, ನಿವೇಶನ ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಕೆಯಾಗಿವೆ. ಪ್ರತಿ ಬುಧವಾರ ಜಿಲ್ಲಾಧಿಕಾರಿಗಳಿಗೆ ಅರ್ಜಿ ರಿವ್ಯೂ ಮಾಡಲು ಸೂಚಿಸಲಾಗಿದೆ. ಮುಂದಿನ ಬಾರಿ ತಾಲೂಕಿಗೆ ಬಂದು ಪ್ರಜಾಸೇವೆ ಆಂದೋಲನ ನಡೆಸುವ ವೇಳೆಗೆ ಕಾನೂನುಬದ್ಧವಾಗಿರುವ ಸಮಸ್ಯೆಗೆ ಪರಿಹಾರ ದೊರಕಿಸಲಾಗುವುದು ಎಂದರು.

ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ಅರಿತ ಸಿಎಂ, ಸಚಿವರೇ ಖುದ್ದಾಗಿ ಹೋಗಿ ಜನರ ಸಮಸ್ಯೆ ಆಲಿಸಲು ಈ ಕಾರ್ಯಕ್ರಮ ರೂಪಿಸಿದ್ದಾರೆ. ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಜನ ನಮ್ಮನ್ನು ಗೆಲ್ಲಿಸಿದ್ದಾರೆ. ಈ ಕೆಲಸ ಮೊದಲಿನಿಂದ ಆಗಿದ್ದರೆ ಸರಿ ಇತ್ತು, ಅದು ಮೊದಲಿನಿಂದ ಆಗಿಲ್ಲ. ಹೊಸ ಮುಖ್ಯಮಂತ್ರಿ ಬಂದ ಮೇಲೆ ಬಡವರಿಗೆ ತೊಂದರೆ ಆಗಬಾರದು ಎಂಬ ಆಲೋಚನೆಯಲ್ಲಿ ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಟ್ಸಾಪ್‌ ಕರೆಯಲ್ಲೇ ಕನ್ನಾಳೆ ಗ್ಯಾಂಗ್‌ ಕೆಪಿಎಸ್ಸಿ ಡೀಲ್‌!
ಇಂದಿರಾ ಕಿಟ್‌ ಯೋಜನೆಗೆ ಬೆಲೆ ಏರಿಕೆಯ ಏಟು