ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಪ್ರಜಾಸೇವೆ ಆಂದೋಲನ

KannadaprabhaNewsNetwork |  
Published : Sep 13, 2026, 02:30 AM IST
ಬಳ್ಳಾರಿ ತಾಲೂಕಿನ ರೂಪನಗುಡಿಯ ಗ್ರಾಪಂ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಶಾಸಕ ಬಿ.ನಾಗೇಂದ್ರ ಹಾಗೂ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.  | Kannada Prabha

ಸಾರಾಂಶ

ಬಾಕಿ ಅರ್ಜಿಗಳ ಸ್ಥಿತಿಗತಿ ಕೇವಲ 15 ದಿನಗಳಲ್ಲಿ ಅರ್ಜಿದಾರರ ಮನೆ ವಿಳಾಸಕ್ಕೆ ನೇರವಾಗಿ ಪತ್ರದ ಮೂಲಕ ಅಥವಾ ದೂರವಾಣಿ ಮೂಲಕ ತಲುಪಿಸಲಾಗುತ್ತದೆ.

ಬಳ್ಳಾರಿ: ಬಡ ಜನತೆ ಹಾಗೂ ಗ್ರಾಮೀಣ ಭಾಗದ ನಾಗರಿಕರ ಸಮಸ್ಯೆಗಳಿಗೆ ಮನೆ ಬಾಗಿಲಲ್ಲೇ ಪರಿಹಾರ ಕಲ್ಪಿಸುವ ಮಹತ್ವಾಕಾಂಕ್ಷೆಯೊಂದಿಗೆ ನೂತನ ಪ್ರಜಾಸೇವೆ ಇಲಾಖೆ ಅಸ್ತಿತ್ವಕ್ಕೆ ಬಂದಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಕರೆ ನೀಡಿದರು.

ಬಳ್ಳಾರಿ ತಾಲೂಕಿನ ರೂಪನಗುಡಿಯ ಗ್ರಾಪಂ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪ್ರಜಾಸೇವೆ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಜಾಸೇವಾ ಆಂದೋಲನ ಸಭೆಯು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು, ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ನಾಗರಿಕರ ಮೂಲಭೂತ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಆಯೋಜಿಸಲಾಗುವ ಪ್ರಮುಖ ವೇದಿಕೆಯಾಗಿದೆ. ದೇಶದಲ್ಲೇ ಪ್ರಥಮ ಬಾರಿಗೆ ಇಂತಹ ಪ್ರತ್ಯೇಕ ಸಚಿವಾಲಯ ರಾಜ್ಯದಲ್ಲಿ ಸ್ಥಾಪನೆಯಾಗಿದ್ದು, ಕಟ್ಟಕಡೆಯ ಗ್ರಾಮಗಳ ಬಡವರಿಗೂ ಸರ್ಕಾರದ ಸೌಲಭ್ಯ ತಲುಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಬಳ್ಳಾರಿಯಲ್ಲಿ ಸಲ್ಲಿಕೆಯಾದ 800ಕ್ಕೂ ಹೆಚ್ಚು ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಚುರುಕಾಗಿದ್ದು, ಬಾಕಿ ಅರ್ಜಿಗಳ ಸ್ಥಿತಿಗತಿ ಕೇವಲ 15 ದಿನಗಳಲ್ಲಿ ಅರ್ಜಿದಾರರ ಮನೆ ವಿಳಾಸಕ್ಕೆ ನೇರವಾಗಿ ಪತ್ರದ ಮೂಲಕ ಅಥವಾ ದೂರವಾಣಿ ಮೂಲಕ ತಲುಪಿಸಲಾಗುತ್ತದೆ. ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು 1902 ಉಚಿತ ಸಹಾಯವಾಣಿ ಆರಂಭಿಸಲಾಗಿದ್ದು, ಫೋನ್ ಕರೆ ಮೂಲಕವೇ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿ, ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ನಿಮ್ಮ ಸಹಕಾರ ಎಂಬ ಧ್ಯೇಯದೊಂದಿಗೆ ತಿಂಗಳಲ್ಲಿ ಪ್ರತಿ ಶನಿವಾರ ಶಾಸಕರು ಮತ್ತು ಉಸ್ತುವಾರಿ ಸಚಿವರು ಹೋಬಳಿ ಮಟ್ಟಕ್ಕೆ ತೆರಳಿ ಜನರ ಅಹವಾಲು ಆಲಿಸುತ್ತಿದ್ದಾರೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ., ಸಾರ್ವಜನಿಕರ ಕುಂದುಕೊರತೆಗಳಿಗೆ ಕೇವಲ ಕಾಗದದ ರೂಪದಲ್ಲಿ ಸೀಮಿತವಾಗದೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆಯ ಪ್ರಜಾಸೇವಾ ಆಂದೋಲನ 2ನೇಯ ಸಭೆ ರೂಪನಗುಡಿ ಹೋಬಳಿಯಲ್ಲಿ ಆಯೋಜಿಸಲಾಗಿದೆ ಎಂದರು.

ಹಿಂದಿನ ಐಪಿಜಿಆರ್‌ಎಸ್ ಹಾಗೂ ಜನಸ್ಪಂದನ ವ್ಯವಸ್ಥೆಗಳಲ್ಲಿ ಅರ್ಜಿಗಳು ಕಚೇರಿ ಹಂತದಲ್ಲೇ ಮುಕ್ತಾಯವಾಗುತ್ತಿದ್ದ ಬಗ್ಗೆ ಪ್ರಸ್ತಾಪಿಸಿದ ಅವರು, ಹೊಸ ವ್ಯವಸ್ಥೆಯಡಿ ತಹಸೀಲ್ದಾರ್, ಎಸಿ ಹಾಗೂ ಡಿಸಿ ನೇತೃತ್ವದಲ್ಲಿ ಪರಿಶೀಲನೆ ನಡೆಯಲಿದೆ. ಕಳೆದ ವಾರ ವಿಜಯನಗರ ಜಿಲ್ಲೆಯಲ್ಲಿ ಚಾಲನೆ ಪಡೆದ ಈ ಆಂದೋಲನ ಪ್ರತಿ ಶನಿವಾರ ಎಲ್ಲ ಹೋಬಳಿಗಳಲ್ಲಿ ಮತ್ತು ಮುಂದಿನ ದಿನಗಳಲ್ಲಿ ಗ್ರಾಪಂ ಮಟ್ಟದಲ್ಲೂ ವಿಸ್ತರಿಸಲಾಗುವುದು ಎಂದು ಹೇಳಿದರು.

ಕಳೆದ ಸಭೆಯಲ್ಲಿ ಸ್ವೀಕರಿಸಲಾದ ಸುಮಾರು 740 ಅರ್ಜಿಗಳ ಪೈಕಿ, ಸ್ಥಳದಲ್ಲೇ ಬಗೆಹರಿಯುವ, ಕಾಲಾವಕಾಶ ಬೇಕಾದ ಮತ್ತು ಸರ್ಕಾರದ ನೀತಿ ನಿರ್ಧಾರಕ್ಕೆ ಒಳಪಡುವ ವಿಷಯಗಳೆಂದು ವರ್ಗೀಕರಿಸಿ ಈಗಾಗಲೇ ಎರಡು ಬಾರಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ. ಪ್ರಜಾಸೇವಾ ಆಂದೋಲನದಡಿ ಬರುವ ಪ್ರತಿ ಅರ್ಜಿ ಐಪಿಜಿಆರ್‌ಎಸ್‌ನಲ್ಲಿ ದಾಖಲಿಸಿಕೊಂಡು ಅರ್ಜಿದಾರರಿಗೆ ಸಮರ್ಪಕ ಪರಿಹಾರ ಸಿಕ್ಕ ಬಳಿಕವೇ ಕಡತ ಮುಕ್ತಾಯಗೊಳಿಸಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರ ಕುಂದುಕೊರತೆ ನೇರವಾಗಿ ಆಲಿಸಿ ಸ್ಥಳದಲ್ಲೇ ಪರಿಹರಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ನೂರಾರು ಸಾರ್ವಜನಿಕರು ಭಾಗವಹಿಸಿ ತಮ್ಮ ದೈನಂದಿನ ಸಮಸ್ಯೆ ಹಾಗೂ ಅಹವಾಲು ಮುಖಂಡರು ಮತ್ತು ಶಾಸಕರ ಮುಂದೆ ತೋಡಿಕೊಂಡರು. ಸಭೆಯಲ್ಲಿ ಬಂದ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಶಾಸಕ ಬಿ. ನಾಗೇಂದ್ರ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ವೇದಿಕೆಗೆ ಕರೆಸಿ ಸಮಸ್ಯೆಗಳನ್ನು ತಕ್ಷಣವೇ ಇತ್ಯರ್ಥಪಡಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಬಳ್ಳಾರಿ ತಾಲೂಕಾಧ್ಯಕ್ಷ ಗೋನಾಳ್ ಎಂ.ನಾಗಭೂಷಣ್ ಗೌಡ, ಎಸ್ಪಿ ಡಾ.ಸುಮನ್ ಡಿ. ಪೆನ್ನೇಕರ್, ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೆರ್, ಎಡಿಸಿ ಮಹಮ್ಮದ್ ಝುಬೇರ್ ಎನ್., ಉಪವಿಭಾಗಾಧಿಕಾರಿ ರಾಜೇಶ್ ಎಚ್.ಡಿ.,ತಹಸೀಲ್ದಾರ ಟಿ.ರೇಖಾ, ತಾಪಂ ಇಓ ಶ್ರೀಧರ್ ಐ.ಬಾರೀಕರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲೆಲ್ಲೂ ಗಣೇಶೋತ್ಸವದ ಸಂಭ್ರಮ; ಡಿಜೆ ನಿಷೇಧಕ್ಕೆ ಅಸಮಾಧಾನ
ದೇಶದ ಪ್ರಗತಿಗೆ ಗುಣಮಟ್ಟದ ಶಿಕ್ಷಣ ಅವಶ್ಯಕ: ಮಾಜಿ ಸಂಸದ ಸಂಗಣ್ಣ ಕರಡಿ