ಕನ್ನಡಪ್ರಭ ವಾರ್ತೆ ಬೆಳಗಾವಿಪ್ರಜ್ವಲ್ ರೇವಣ್ಣ ಅವರಿಗೆ ಎಂತಹ ಶಿಕ್ಷೆ ಕೊಟ್ಟರೂ ಕಡಿಮೆ. ಅವರನ್ನು ತುಂಡು ತುಂಡು ಮಾಡಿ ಸಂತ್ರಸ್ತ 3 ಸಾವಿರ ಹೆಣ್ಣು ಮಕ್ಕಳಿಗೆ ಹಂಚಬೇಕು ಎಂದು ಹುಬ್ಬಳ್ಳಿಯಲ್ಲಿ ಹತ್ಯೆಯಾದ ವಿದ್ಯಾರ್ಥಿನಿ ನೇಹಾ ತಂದೆ ನಿರಂಜನ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳಿಗೆ ಅನ್ಯಾಯವಾದ ಸಂದರ್ಭದಲ್ಲಿ ಅದನ್ನು ಖಂಡಿಸುವುದು, ಪ್ರತಿಭಟಿಸುವುದು ಸರಿ. ಆದರೆ, ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಅವರದೇ ಮನೆಯ ಹೆಣ್ಣು ಮಗಳಿಗೆ ಈ ರೀತಿಯಾದರೇ ಅವರು ರಾಜಕೀಯ ಮಾಡುತ್ತಾರಾ ಎಂದು ಪ್ರಶ್ನಿಸಿದರು.
ಫೋಟೋ ದುರ್ಬಳಕೆ ಸಲ್ಲದು:ಮೂರು ವರ್ಷಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಫಯಾಜ್‌ಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸನ್ಮಾನ ಮಾಡುವಾಗ ಹಾಜರಿದ್ದ ಫೋಟೋವನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ರಾಜಕಾರಣಿಗಳು ಎಲ್ಲೇ ಕಾರ್ಯಕ್ರಮಕ್ಕೆ ಕರೆದರೂ ಹೋಗುತ್ತೇವೆ. ಅಲ್ಲಿ ಯಾರ್‍ಯಾರಿಗೋ ಸನ್ಮಾನ ಮಾಡುತ್ತಾರೆ. ಅಂದು ಸಾಧನೆ ಮಾಡಿ ಸನ್ಮಾನಿಸಿಕೊಂಡವರು ಮುಂದೆ ಒಳ್ಳೆಯ ವ್ಯಕ್ತಿಗಳೂ ಆಗಬಹುದು, ಕ್ರಿಮಿನಲ್‌ಗಳೂ ಆಗಬಹುದು. ಅದು ನಮಗೆ ಹೇಗೆ ಗೊತ್ತಾಗುತ್ತದೆ? ಆದರೆ, ಇಂತಹ ಫೋಟೋಗಳನ್ನೆಲ್ಲ ಈ ರೀತಿ ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳುವುದು ತಪ್ಪು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಾಕ್ಸ್..
ಬೆಳಗಾವಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಮೃಣಾಲ ಹೆಬ್ಬಾಳಕರ್ ಬೆಂಬಲಿಸುವಂತೆ ಹತ್ಯೆಯಾದ ವಿದ್ಯಾರ್ಥಿನಿ ನೇಹಾ ತಂದೆ ನಿರಂಜನ ಹಿರೇಮಠ ಮನವಿ ಮಾಡಿದರು. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಮೃಣಾಲ್ ಹೆಬ್ಬಾಳಕರ ಬೆಂಬಲಿಸಿ. ಇಂತಹ ಯುವ ಸಂಸದರಿದ್ದರೇ ಹೆಣ್ಣು ಮಕ್ಕಳಿಗೆ ಅನ್ಯಾಯವಾದಾಗ ಧ್ವನಿ ಎತ್ತುತ್ತಾರೆ. ನಮಗೆ ನ್ಯಾಯ ಒದಗಿಸುತ್ತಾರೆ. ಹಾಗಾಗಿ ಸಮಾಜದ ಎಲ್ಲರೂ ಅವರನ್ನು ಬೆಂಬಲಿಸಬೇಕು ಎಂದು ಕೈ ಮುಗಿದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಬಾಕ್ಸ್......
ನಮ್ಮ ಕಷ್ಟಕಾಲದಲ್ಲಿ ತಮ್ಮೆಲ್ಲ ಕೆಲಸಗಳನ್ನು ಬಿಟ್ಟು ಲಕ್ಷ್ಮೀ ಹೆಬ್ಬಾಳಕರ್ ಸುರಿಯುತ್ತಿದ್ದ ಮಳೆಯ ಮಧ್ಯೆಯೂ ನಮ್ಮ ಮನೆಗೆ ಬಂದು ನಮ್ಮ ದುಃಖದಲ್ಲಿ ಭಾಗಿಯಾದರು. ಜೊತೆಗೆ ನಮಗೆ ಭದ್ರತೆ ಒದಗಿಸುವ, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಮತ್ತು ಪ್ರಕರಣದ ತನಿಖೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪನೆ ಮಾಡುವ ಕೆಲಸ ಮಾಡಿದರು. ಹಾಗಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ಕೃತಜ್ಞತೆ ಸಲ್ಲಿಸಬೇಕೆಂದು ದಂಪತಿ ಸಮೇತ ಬಂದಿದ್ದೇವೆ ಎಂದು ನಿರಂಜನ ಹಿರೇಮಠ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉಪಸ್ಥಿತರಿದ್ದರು.