ಕನ್ನಡಪ್ರಭ ವಾರ್ತೆ ಮೂಲ್ಕಿ
ಮೂಲ್ಕಿಯಿಂದ ಕಿನ್ನಿಗೋಳಿ ಮೂಲಕ ಮೂಡುಬಿದಿರೆ ಹಾಗೂ ಬಜಪೆ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಕಿನ್ನಿಗೋಳಿ ಪೇಟೆಯಲ್ಲಿ ಪ್ರತಿದಿನ ಟ್ರಾಫಿಕ್ ಜಾಮ್ ಮಾಮೂಲಿಯಾಗಿದೆ.ಕಳೆದ ಕೆಲವು ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿವಾಹ ಮತ್ತಿತರ ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದು ಮೂಲ್ಕಿ- ಮೂಡುಬಿದಿರೆ ರಾಜ್ಯ ಹೆದ್ದಾರಿಯ ಮುಖ್ಯ ರಸ್ತೆಯಲ್ಲಿ ಕಿನ್ನಿಗೋಳಿ ಪೇಟೆಯಿದ್ದು ಕಳೆದ ಕೆಲವು ದಿನಗಳಿಂದ ವಾಹನ ಸಂಚಾರ ಅಸ್ತವ್ಯಸ್ತ ಉಂಟಾಗುತ್ತಿದ್ದು ಸಮಸ್ಯೆಯನ್ನು ಕೇಳುವವರು ಇಲ್ಲದಂತಾಗಿದೆ.
ಕಿನ್ನಿಗೋಳಿ ಬಸ್ ನಿಲ್ದಾಣದ ಸರ್ಕಲ್‌ನಿಂದ ಯುಗಪುರುಷದವರೆಗೆ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಿದ್ದು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಅನೇಕ ಬಾರಿ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಹಾಗೂ ಮಂಗಳೂರು ಉತ್ತರ ಸಂಚಾರಿ ಠಾಣಾ ಪೊಲೀಸರಿಗೆ ದೂರು ನೀಡಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ಕೆಲವು ದಿನಗಳಿಂದ ಮದುವೆ ಮುಂಜಿ ಸಮಾರಂಭ ಪ್ರಯುಕ್ತ ವಾಹನ ಸಂಚಾರ ದಟ್ಟಣೆ ವಿಪರೀತವಾಗಿದ್ದು ಎಲ್ಲೆಂದರಲ್ಲಿ ವಾಹನ ಸಂಚಾರ ನಿಲುಗಡೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಬುಧವಾರ ಮತ್ತು ಗುರುವಾರ ಕಟೀಲು ದೇವಳ ಹಾಗೂ ಆಸುಪಾಸಿನಲ್ಲಿ ಹೆಚ್ಚಿನ ವಿವಾಹ ಸಮಾರಂಭವಿದ್ದು ಕಿನ್ನಿಗೋಳಿ ರಾಜ್ಯ ಹೆದ್ದಾರಿಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ಕಟೀಲು ದೇವಸ್ಥಾನಕ್ಕೆ ಹೋಗುವ ಮದುವೆಯ ದಿಬ್ಬಣಗಳು, ಬಜಪೆ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು ತುಂಬಾ ಹೊತ್ತು ಟ್ರಾಫಿಕ್‌ನಲ್ಲಿ ಸಿಲುಕಿ ಸಂಕಟಪಟ್ಟಿದ್ದಾರೆ.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಬಳಿಕ ಪಟ್ಟಣ ಪಂಚಾಯಿತಿ ಆಗಿದ್ದು ಇದೀಗ ಆಡಳಿತಾಧಿಕಾರಿ ಅಧಿಕಾರ ನಡೆಸುತ್ತಿದ್ದು ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಿಯಾದ ಚರಂಡಿ ಇಲ್ಲ. ಫುಟ್‌ಪಾತ್ ವ್ಯವಸ್ಥೆ ಇಲ್ಲದೆ ಅಸ್ತವ್ಯವಸ್ಥೆಯಿಂದ ಕೂಡಿದೆ. ಕಿನ್ನಿಗೋಳಿ ರಾಜ್ಯ ಹೆದ್ದಾರಿಯಲ್ಲಿ ಕಿನ್ನಿಗೋಳಿ ಪೇಟೆಯಲ್ಲಿ ಪ್ರತಿದಿನ ಟ್ರಾಫಿಕ್ ಜಾಮ್ ಮಾಮೂಲಾಗಿದ್ದು ಈ ಬಗ್ಗೆ ಪಟ್ಟಣ ಪಂಚಾಯಿತಿ ಹಾಗೂ ಸಂಚಾರಿ ಠಾಣಾ ಪೊಲೀಸರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಂಚಾರಿ ಠಾಣಾ ಪೊಲೀಸರು ಸೂಕ್ತ ಕ್ರಮ ತೆಗೆದುಕೊಂಡಲ್ಲಿ ಸಮಸ್ಯೆ ಬಗೆಹರಿಯಲು ಸಾಧ್ಯವಿದೆ- ದಾಮೋದರ್ ಕಿನ್ನಿಗೋಳಿ