ಪ್ರಕೃತಿ ಅಭಿಯಾನ ಆಪ್ ಬಿಡುಗಡೆ: ಡಾ.ಸುಮನಾ

KannadaprabhaNewsNetwork | Published : Dec 26, 2024 1:02 AM

ಸಾರಾಂಶ

ಪ್ರಕೃತಿ ಪರೀಕ್ಷಣಾ ಅಭಿಯಾನ ಆಪ್‌ನ್ನು ಬಿಡುಗಡೆ ಮಾಡಿದ್ದು ಎಲ್ಲರೂ ಇದರ ಸದುಪಯೋಗಪಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ತಾಲೂಕಿನ ಕೊನೇಹಳ್ಳಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಹಿರಿಯ ವೈದ್ಯಾಧಿಕಾರಿ ಡಾ.ಸುಮನಾ ತಿಳಿಸಿದರು. ತಿಪಟೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಪ್ರತಿಯೊಬ್ಬರಿಗೂ ಮಾನಸಿಕ ಮತ್ತು ದೈಹಿಕ ಆರೋಗ್ಯ ಮುಖ್ಯವಾಗಿದ್ದು ಇವೆರಡರ ಸಮತೋಲನ ಆರೋಗ್ಯಕ್ಕಾಗಿ ಭಾರತ ಸರ್ಕಾರದ ಆಯುಷ್ ಮಂತ್ರಾಲಯ ಪ್ರಕೃತಿ ಪರೀಕ್ಷಣಾ ಅಭಿಯಾನ ಆಪ್‌ನ್ನು ಬಿಡುಗಡೆ ಮಾಡಿದ್ದು ಎಲ್ಲರೂ ಇದರ ಸದುಪಯೋಗಪಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ತಾಲೂಕಿನ ಕೊನೇಹಳ್ಳಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಹಿರಿಯ ವೈದ್ಯಾಧಿಕಾರಿ ಡಾ. ಸುಮನಾ ತಿಳಿಸಿದರು.

ತಾಲೂಕಿನ ಕೊನೇಹಳ್ಳಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನುಷ್ಯನ ದೇಹದ ಪ್ರಕೃತಿಯನ್ನು ತಿಳಿದು ಅದರ ಅನುಸಾರ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದನ್ನು ಜನರಿಗೆ ತಿಳಿಸುವ ಸಲುವಾಗಿ ಭಾರತ ಸರ್ಕಾರದ ಆಯುಷ್ ಮಂತ್ರಾಲಯ ದೇಶ್‌ಕೀ ಪ್ರಕೃತಿ ಪರೀಕ್ಷಾ ಅಭಿಯಾನ ಹಮ್ಮಿಕೊಂಡಿದೆ.

ಈ ಅಭಿಯಾನ ವಿಶೇಷ ಮೊಬೈಲ್ ಆಪ್ ಆಧಾರಿತ ಕಾರ್ಯಕ್ರಮವಾಗಿದ್ದು ಕೆಲವು ಮೂಲ ಪ್ರಶ್ನೆಗಳಿಗೆ ಉತ್ತರಿಸಿದ್ದಲ್ಲಿ ಕಾಲ ಕಾಲಕ್ಕೆ ನಿಮ್ಮ ಪ್ರಕೃತಿ ಅನುಸಾರವಾಗಿ ಆರೋಗ್ಯಕ್ಕೆ ಪೂರಕವಾದ ಸೂಚನೆ ಮತ್ತು ಸಲಹೆಗಳು ನಿಮ್ಮ ಮೊಬೈಲಿಗೆ ಬರಲಿದೆ. ನೀವು ಆಪ್ ಬಳಸಿದಲ್ಲಿ ನಿಮಗೆ ಡಿಜಿಟಲ್ ಪ್ರಕೃತಿ ಪ್ರಮಾಣ ಪತ್ರ ನೀಡಲಾಗುವುದು. ಅಲ್ಲದೆ ಆರೋಗ್ಯ ಪರಿಪಾಲನೆಯ ಬಗ್ಗೆ ಇನ್ನೂ ಹೆಚ್ಚಿನ ಉಪಯುಕ್ತ ಮಾಹಿತಿಗಳನ್ನು ನೀಡಲಾಗುವುದು. ನಿಮ್ಮ ದೇಹ ಪ್ರಕೃತಿಗೆ ಅನುಗುಣವಾಗಿ ಮತ್ತು ಋತುಗಳಿಗೆ ಅನುಸಾರ ಅನುಸರಿಬೇಕಾದ ನಿತ್ಯದ ಆಹಾರದ ಮಾಹಿತಿ ತಿಳಿಸಲಾಗುವುದು. ಈ ಪ್ರಮಾಣ ಪತ್ರವನ್ನು ನೀವು ಯಾವುದೇ ಆಯುರ್ವೇದ ಆಸ್ಪತ್ರೆಯಲ್ಲಿ ತೋರಿಸಿದಾಗ ಸುಲಭವಾಗಿ ತಪಾಸಣೆ ಮತ್ತು ಚಿಕಿತ್ಸೆ ದೊರಕುತ್ತದೆ. ಆದ್ದರಿಂದ ಈ ಆಪ್‌ನ್ನು ಪ್ರತಿಯೊಬ್ಬರು ಉಪಯೋಗಿಸಿಕೊಂಡು ದೀರ್ಘಾಯುಷ್ಯರಾಗಿ ರೋಗ ರಹಿತ ಜೀವನ ನಡೆಸಬೇಕೆಂದು ತಿಳಿಸಿದರು.

Share this article