ಕನ್ನಡಪ್ರಭ ವಾರ್ತೆ ಶಿವಮೊಗ್ಗ ಗಲಭೆಪೀಡಿತ ಪ್ರದೇಶವಾಗಿದ್ದ ರಾಗಿಗುಡ್ಡಕ್ಕೆ ಭೇಟಿ ನೀಡಲು ಮುಂದಾಗಿದ್ದ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಅವರಿಗೆ ಜಿಲ್ಲೆಯ ಪ್ರವೇಶಕ್ಕೆ ನಿರಾಕರಿಸಿದ ಪೊಲೀಸರು ಗಡಿಭಾಗದಲ್ಲಿಯೇ ಬುಧವಾರ ಮುಂಜಾನೆ ತಡೆಯೊಡ್ಡಿದ ಘಟನೆ ನಡೆದಿದೆ. ಮಂಗಳೂರಿನಿಂದ ಶಿವಮೊಗ್ಗದೆಡೆ ಹೊರಟಿದ್ದ ಮುತಾಲಿಕ್ ಅವರನ್ನು ತೀರ್ಥಹಳ್ಳಿ ಗಡಿಭಾಗದಲ್ಲಿ ಮುಂಜಾನೆ 2 ಗಂಟೆ ಸುಮಾರಿಗೆ ಪೊಲೀಸರು ತಡೆದು, ತಮ್ಮ ವಾಹನದಲ್ಲಿಯೇ ದಾವಣಗೆರೆ ಗಡಿಯವರೆಗೆ ದಾಟಿಸಿಬಂದರು. ಇದರಿಂದಾಗಿ ಬುಧವಾರ ಬೆಳಗ್ಗೆ ರಾಗಿಗುಡ್ಡಕ್ಕೆ ಭೇಟಿ ನೀಡಬೇಕಿದ್ದ ಪ್ರಮೋದ್ ಮುತಾಲಿಕ್ ಅವರ ಭೇಟಿ ರದ್ದಾಯಿತು. ತೀರ್ಥಹಳ್ಳಿ ಗಡಿಭಾಗದ ಆಗುಂಬೆ ಪ್ರದೇಶದಲ್ಲಿ ಪೊಲೀಸರು ಮುತಾಲಿಕ್ ಅವರು ಬರುವ ಮಾಹಿತಿ ಆಧರಿಸಿ ಕಾಯುತ್ತಿದ್ದರು. ಮಂಗಳೂರಿನಿಂದ ಆಗುಂಬೆ ಮೂಲಕ ಪ್ರವೇಶಿಸುತ್ತಿದ್ದಂತೆ ಅವರ ವಾಹನವನ್ನು ತಡೆದ ಪೊಲೀಸರು ಮುತಾಲಿಕ್ ಅವರಿಗೆ ಜಿಲ್ಲೆಗೆ ಪ್ರವೇಶ ನಿರಾಕರಿಸಿರುವ ಜಿಲ್ಲಾಡಳಿತದ ಆದೇಶ ತಿಳಿಸಿದರು. ರಾಗಿಗುಡ್ಡದಲ್ಲಿ 144ನೇ ವಿಧಿ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಪ್ರವೇಶ ನಿರಾಕರಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನು ವಿರೋಧಿಸಲು ಮುತಾಲಿಕ್ ಮುಂದಾದರೂ ಇದನ್ನು ಲೆಕ್ಕಿಸದ ಪೊಲೀಸರು ತಮ್ಮ ವಾಹನದಲ್ಲಿ ಕೂರಿಸಿಕೊಂಡು, ಹೊನ್ನಾಳಿ ಮೂಲಕ ದಾವಣಗೆರೆ ಜಿಲ್ಲೆಗೆ ದಾಟಿಸಿದರು. ಜೊತೆಗೆ ಇನ್ನು 15 ದಿನಗಳ ಕಾಲ ರಾಗಿಗುಡ್ಡ ಪ್ರವೇಶಿಸದಂತೆ ಪೊಲೀಸರು ಸೂಚನೆ ನೀಡಿದರು. - - - ಮುತಾಲಿಕ್‌ಗೆ ಅವರೇನು ದರೋಡೆಕೋರರಾ?: ರಾಜ್ಯಾಧ್ಯಕ್ಷ ಶಿವಮೊಗ್ಗ: ಶಿವಮೊಗ್ಗದಲ್ಲಿ ಬಾಂಬ್ ಬ್ಲಾಸ್ಟ್ ಮಾಡುವವರಿಗೆ ನಿರ್ಬಂಧ ಇಲ್ಲ, ಕೊಲೆ ಮಾಡುವವರಿಗೆ ನಿರ್ಬಂಧ ಇಲ್ಲ. ಹಿಂದುಗಳ ಮನೆ ಮೇಲೆ ಕಲ್ಲುತ್ತಿರುವವರಿಗೆ ನಿರ್ಬಂಧ ಇಲ್ಲ. ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುತ್ತಿರುವವರಿಗೆ ನಿಬಂಧ ಇಲ್ಲ. ಪ್ರಮೋದ್ ಮುತಾಲಿಕ್ ಹಾಗೂ ಶ್ರೀರಾಮ ಸೇನೆಯವರಿಗೆ ಮಾತ್ರ ನಿರ್ಬಂಧ ಏಕೆ? ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಕಿಡಿಕಾರಿದರು. ಶಿವಮೊಗ್ಗದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಿವಮೊಗ್ಗಕ್ಕೆ ಭೇಟಿ ಕೊಡುವ ಸಂಬಂಧ ಆಗಮಿಸುತ್ತಿದ್ದ ಪ್ರಮೋದ್ ಮುತಾಲಿಕ್ ಅವರನ್ನು ಪೊಲೀಸರು ರಾತ್ರೋರಾತ್ರಿ ತಡೆದು ವಾಪಸ್ ಕಳುಹಿಸಿದ್ದಾರೆ. ಈ ರೀತಿ ಮಾಡಲು ಪ್ರಮೋದ್ ಮುತಾಲಿಕ್ ಏನಾದ್ರೂ ದರೋಡೆಕೋರರಾ? ಮುಂದಿನ ದಿನಗಳಲ್ಲಿ ಶಿವಮೊಗ್ಗ ಮತ್ತೆ ಬಂದೇ ಬರುತ್ತೇವೆ. ಎರಡ್ಮೂರು ದಿನಗಳಲ್ಲಿ ಶ್ರೀರಾಮ ಸೇನೆಯಿಂದ ಶಿವಮೊಗ್ಗ ಚಲೋ ನಡೆಯುತ್ತದೆ. ಯಾರು ತಡೆಯುತ್ತಾರೆ ನೋಡೋಣ ಎಂದು ಸವಾಲು ಎಸೆದರು. - - - -ಫೋಟೋ: ಪ್ರಮೋದ್ ಮುತಾಲಿಕ್