ನಾಗಮಂಗಲ: ರಾಜಕೀಯ ಅಸ್ತಿತ್ವಕ್ಕಾಗಿ ಬೆಳಗಾವಿಯಲ್ಲಿ ಮರಾಠಿಗರು ಹಿಂದಿನಿಂದಲೂ ಚೇಷ್ಟೆ ಮಾಡುತ್ತಿದ್ದಾರೆ. ಆದರೆ, ನಾಡು, ನುಡಿ, ನೆಲ, ಜಲಗಳಿಗೆ ಯಾವುದೇ ಧಕ್ಕೆ ಬಾರದಂತೆ ಅಖಂಡ ಕರ್ನಾಟಕದ ಅಸ್ತಿತ್ವವನ್ನು ರಾಜ್ಯ ಸರ್ಕಾರ ಕಾಪಾಡುತ್ತದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ತಾಲೂಕಿನ ಶ್ರೀರಘುರಾಮಪುರ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಸರಬರಾಜು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಬೆಳಗಾವಿಯಲ್ಲಿ ಮರಾಠಿಗರ ಒಕ್ಕೂಟ ಅವರ ಅಸ್ತಿತ್ವಕ್ಕಾಗಿ ಮೊದಲಿನಿಂದಲೂ ಚೇಷ್ಟೆ ಮಾಡಿಕೊಂಡು ಬರುತ್ತಿದೆ. ಆದರೆ, ಎಂದೂ ಸಹ ನಮ್ಮ ರಾಜ್ಯ ಕನ್ನಡ ಮತ್ತು ಕನ್ನಡಿಗರ ವಿಚಾರದಲ್ಲಿ ಮರಾಠಿಗರಿಗೆ ಪ್ರಾಮುಖ್ಯತೆ ಕೊಟ್ಟಿಲ್ಲ. ನಮ್ಮ ಸರ್ಕಾರವೂ ಸಹ ಮರಾಠಿಗರಿಗೆ ಪ್ರಾಮುಖ್ಯತೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕರ್ನಾಟಕ ಸುವರ್ಣ ಮಹೋತ್ಸವದಲ್ಲಿ ಬೆಳಗಾವಿಯಲ್ಲಿ ಕರಾಳದಿನ ಆಚರಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಕಾನೂನು ಬದ್ಧವಾಗಿ ಏನೆಲ್ಲಾ ಕ್ರಮವಹಿಸಬೇಕೋ ಅದೆಲ್ಲನ್ನೂ ತೆಗೆದುಕೊಳ್ಳುತ್ತಿದೆ. ಈ ವಿಚಾರವಾಗಿ ಸರ್ಕಾರ ಏನು ಸೂಚನೆ ನೀಡಬೇಕೋ ಅದನ್ನು ಬೆಳಗಾವಿ ಜಿಲ್ಲಾಡಳಿತಕ್ಕೆ ನೀಡಿದೆ ಎಂದರು. ಮರಾಠಿಗರು ಅವರ ಚಟ ತೀರಿಸಿಕೊಳ್ಳುವ ಸಲುವಾಗಿ ಅವರ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಕನ್ನಡಿಗರ ಅಸ್ತಿತ್ವಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುತ್ತೇವೆ. ಮರಾಠಿಗರ ಪರವಾಗಿ ಮಹಾರಾಷ್ಟ್ರದ ಸಚಿವರು ಸಹಜವಾಗಿ ಹಿಂದಿನಿಂದಲೂ ಇದ್ದಾರೆ. ನಾವು ನಮ್ಮ ಕನ್ನಡಿಗರ ಪರವಾಗಿ ಸದಾ ಇದ್ದು, ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದರು. ಭ್ರೂಣಲಿಂಗ ಪತ್ತೆಗೆ ಕಠಿಣ ಕ್ರಮ: ಜಿಲ್ಲೆಯಲ್ಲಿ ಬೆಳಕಿಗೆ ಬಂದ ಭ್ರೂಣಲಿಂಗ ಪತ್ತೆ ಜಾಲದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷೀಣ್ಯ ಕ್ರಮ ಜರುಗಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಂತಹ ಸಮಾಜ ಘಾತುಕ ಕೃತ್ಯಗಳು ಜಿಲ್ಲೆಯಲ್ಲಿ ನಡೆಯದಂತೆ ಅಗತ್ಯ ಕ್ರಮವಹಿಸಲು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿರುವುದಾಗಿ ತಿಳಿಸಿದರು. ಈ ವೇಳೆ ಚಿಣ್ಯ ಗ್ರಾಪಂ. ಅಧ್ಯಕ್ಷೆ ಇಂದ್ರಮ್ಮ, ಸದಸ್ಯರಾದ ವೆಂಕಟೇಶ್, ನಾಗೇಶ್, ತಾಪಂ ಮಾಜಿ ಅಧ್ಯಕ್ಷ ಆರ್.ಕೃಷ್ಣೇಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಅಲ್ಪಹಳ್ಳಿ ಡಿ.ಕೃಷ್ಣೇಗೌಡ, ಮನ್ಮುಲ್ ಮಾಜಿ ನಿರ್ದೇಶಕ ರಾಮಚಂದ್ರು, ಗ್ರಾಪಂ ಪಿಡಿಓ ದಿವ್ಯಶ್ರೀ, ಹೊಣಕೆರೆ ಗ್ರಾಪಂ ಅಧ್ಯಕ್ಷೆ ಸುನೀತ ಲೋಕೇಶ್, ಮಾಜಿ ಅಧ್ಯಕ್ಷ ಕುಮಾರ್, ಪಿಎಸಿಎಸ್ ಅಧ್ಯಕ್ಷ ಜಯರಾಮು, ಮುಖಂಡರಾದ ಸತೀಶ್, ಅಶೋಕ್ ಸೇರಿದಂತೆ ಹಲವರಿದ್ದರು.