ಲಕ್ಷ ಲಕ್ಷ ಭಕ್ತರಿಂದ ಪ್ರಸಾದ ಸ್ವೀಕಾರ

KannadaprabhaNewsNetwork |  
Published : Jan 16, 2025, 12:45 AM IST
15ಕೆಪಿಎಲ್10:ಕೊಪ್ಪಳ ಗವಿಮಠದಲ್ಲಿ ರಥೋತ್ಸವ ದಿನ ಮಹಾದಾಸೋಹದಲ್ಲಿ ಪ್ರಸಾದ ಸ್ವೀಕರಿಸಿ ಕೈ ತೊಳೆಯುತ್ತಿರುವ ಭಕ್ತರು. | Kannada Prabha

ಸಾರಾಂಶ

ನಗರದ ಗವಿಸಿದ್ಧೇಶ್ವರ ರಥೋತ್ಸವ ದಿನ ಲಕ್ಷ ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ನಗರದ ಗವಿಸಿದ್ಧೇಶ್ವರ ರಥೋತ್ಸವ ದಿನ ಲಕ್ಷ ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ.

ಬುಧವಾರ ಬೆಳಗ್ಗೆಯಿಂದಲೇ ಮಹಾದಾಸೋಹ ಆರಂಭವಾಗಿತ್ತು. ದಾಸೋಹದಲ್ಲಿ ಬೆಳಗ್ಗೆಯಿಂದ ಭಕ್ತರು ಏಕಕಾಲಕ್ಕೆ ಪ್ರಸಾದ ಸ್ವೀಕರಿಸುತ್ತಿದ್ದರು. ಗವಿಸಿದ್ಧೇಶ್ವರ ಜಾತ್ರೆಗೆ ಲಕ್ಷ ಲಕ್ಷ ಭಕ್ತ ಸಮೂಹ ಸಾಲುಗಟ್ಟಿ ನಿಂತು ಪ್ರಸಾದ ಸ್ವೀಕರಿಸಿತು. ಜಾತ್ರೆಯಲ್ಲಿ ಮಹಾದಾಸೋಹಕ್ಕಾಗಿ ಸುಮಾರು 15 ದಿನಗಳ ಕಾಲ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಭಕ್ತರ ಪ್ರಸಾದಕ್ಕಾಗಿ ಲಕ್ಷಾಂತರ ರೊಟ್ಟಿ, ಶೇಂಗಾ ಹೋಳಿಗೆ, ದವಸ ಧಾನ್ಯ, ಜಿಲೇಬಿ ಗವಿಮಠಕ್ಕೆ ಟನ್ ಗಟ್ಟಲೇ ಹರಿದು ಬಂದಿತ್ತು.

ಮಠದ ಪಕ್ಕದ ಸುಮಾರು ಆರು ಎಕರೆ ಪ್ರದೇಶದಲ್ಲಿ ಮಹಾದಾಸೋಹ ಜರುಗುತ್ತಿದ್ದು, ರಥೋತ್ಸವ ದಿನ ಅಪಾರ ಸಂಖ್ಯೆಯಲ್ಲಿ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ. ಬರೋಬ್ಬರಿ ಸುಮಾರು 1.5 ಲಕ್ಷಕ್ಕೂ ಹೆಚ್ಚು ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಪ್ರಸಾದ ಸ್ವೀಕಾರ ತಡರಾತ್ರಿವರೆಗೂ ಜರುಗುವುದರಿಂದ ಇದರ ಪ್ರಮಾಣ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ. ಬರೋಬ್ಬರಿ ನೂರು ಕ್ಚಿಂಟಲ್ ಅಕ್ಕಿ ಬಳಕೆ ಆಗಿದೆ.

ಮಹಾದಾಸೋಹದಲ್ಲಿ ಸಿಹಿ ಊಟ, ರೊಟ್ಟಿಗಳ ಬಳಕೆ ಲೆಕ್ಕವೇ ಇಲ್ಲ. ಹೋಳಿಗೆ, ಜಿಲೇಬಿ, ಶೇಂಗಾ ಹೋಳಿಗೆ, ರೊಟ್ಟಿ, ಸಾಂಬಾರು, ಪಲ್ಯ, ಕೆಂಪು ಚಟ್ಟಿ, ಚಟ್ನಿ ಪುಡಿ, ತುಪ್ಪ, ಹಾಲು ಬಳಕೆಯಾಗಿದೆ.

ಸಾವಿರಾರು ಸ್ವಯಂ ಸೇವಕರು:

ಏಕಕಾಲದಲ್ಲಿ ಸುಮಾರು ನಾಲ್ಕೈದು ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ಪ್ರಸಾದ ವ್ಯವಸ್ಥೆಯನ್ನು ಆಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ನಿಯಂತ್ರಣಕ್ಕೆ ಕ್ರಮ:

ಜಾತ್ರೆಯಲ್ಲಿ ಪ್ರಸಾದ ಸ್ವೀಕರಿಸುತ್ತಿರುವ ಭಕ್ತರನ್ನು ಸರದಿ ಸಾಲಿನಲ್ಲಿ ನಿಲ್ಲಿಸಿ ಅವರು ಸುಗಮವಾಗಿ ಪ್ರಸಾದ ಸೇವನೆಗೆ ಪೊಲೀಸ್ ಇಲಾಖೆ ಹಾಗೂ ಗೃಹ ರಕ್ಷಕ ದಳದವರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸ್ವಯಂ ಸೇವಕರು, ಸೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು ವ್ಯವಸ್ಥೆ ಮಾಡಿದರು. ಭಕ್ತರಿಗೆ ಸಮರ್ಪಕವಾಗಿ ತಿಳಿವಳಿಕೆ ಮೂಡಿಸುತ್ತಿದ್ದರು.

ನೆರಳು ವ್ಯವಸ್ಥೆ:

ಊಟಕ್ಕೆ ಬಂದ ಮಹಾಭಕ್ತರಿಗೆ ದಾಸೋಹದ ಜೊತೆಗೆ ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಕೆಲವರು ನಿಂತುಕೊಂಡು ಊಟ ಮಾಡಿದರೆ ಕೆಲವರು ಕುಳಿತು ಪ್ರಸಾದ ಸೇವಿಸಿದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ