10 ದಿನದಲ್ಲಿ 12 ಲಕ್ಷ ಭಕ್ತರಿಂದ ಪ್ರಸಾದ ಸೇವನೆ

KannadaprabhaNewsNetwork |  
Published : Feb 07, 2024, 01:49 AM IST
5ಕೆಪಿಎಲ್21 ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದಲ್ಲಿ ಭಕ್ತ ಸಾಗರ ಮಹಾದಾಸೋಹಕ್ಕಾಗಿ ಸರದಿಯಲ್ಲಿ | Kannada Prabha

ಸಾರಾಂಶ

ರಥೋತ್ಸವದ ದಿನವೇ ಬರೋಬ್ಬರಿ 116 ಕ್ವಿಂಟಲ್ ಅಕ್ಕಿಯ ಬಳಕೆಯಾಗಿದ್ದರೆ, ಅದರ ಮರುದಿನ 115 ಕ್ವಿಂಟಲ್ ಹಾಗೂ ನಂತರ 100 ಕ್ವಿಂಟಲ್ ಬಳಕೆಯಾಗಿದೆ. ಅಲ್ಲಿಂದ 50ರಿಂದ 70 ಕ್ವಿಂಟಲ್ ಅಕ್ಕಿ ನಿತ್ಯವೂ ಬಳಕೆಯಾಗಿದೆ. ಬರೋಬ್ಬರಿ ಒಂದು ಸಾವಿರ ಕ್ವಿಂಟಲ್ ಅಕ್ಕಿ ಬಳಕೆ

ಸೋಮರಡ್ಡಿ ಅಳವಂಡಿ ಕೊಪ್ಪಳ

ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಈ ವರ್ಷ ಹತ್ತೇ ದಿನದಲ್ಲಿ ಸುಮಾರು 12-13 ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಿದ್ದು, 20 ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆದಿದ್ದಾರೆ. ಹಿಂದಿನ ವರ್ಷದ ಎಲ್ಲ ದಾಖಲೆ ಮೀರಿ ಈ ವರ್ಷ ಭಕ್ತ ಸಾಗರ ಹರಿದುಬಂದಿದೆ.

ರಥೋತ್ಸವ (ಜ.27) ನಡೆದು ಹತ್ತು ದಿನ ಕಳೆಯಿತು. ರಥೋತ್ಸವ, ನಂತರದ ಮೂರೇ ದಿನಗಳಲ್ಲಿ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ. ಬಳಿಕ ನಿತ್ಯವೂ 50 ಸಾವಿರದಿಂದ ಒಂದು ಲಕ್ಷ ಭಕ್ತರು ಪ್ರಸಾದ ಸೇವಿಸಿದ್ದಾರೆ. ಈ ಎಲ್ಲ ಲೆಕ್ಕಾಚಾರದಲ್ಲಿ ಬರೋಬ್ಬರಿ 12-13 ಲಕ್ಷಕ್ಕೂ ಅಧಿಕ ಭಕ್ತರು ಪ್ರಸಾದ ಸೇವಿಸಿದ್ದಾರೆ.

ಹತ್ತೇ ದಿನಗಳಲ್ಲಿ ದಾಖಲೆ: ರಥೋತ್ಸವ ಆರಂಭವಾದಾಗಿನಿಂದ ಇಲ್ಲಿವರೆಗೆ (ಫೆ.5ರವರೆಗೂ) ಬರೋಬ್ಬರಿ 1000 ಕ್ವಿಂಟಲ್ ಅಕ್ಕಿ ಬಳಕೆಯಾಗಿದೆ. 650 ಕ್ವಿಂಟಲ್ ಸಿಹಿ ತಿನಿಸು ಬಳಕೆಯಾಗಿದೆ. ಇನ್ನು 12-14 ಲಕ್ಷ ರೊಟ್ಟಿ ಬಡಿಸಲಾಗಿದೆ. ಇದಕ್ಕೆ ಅನುಗುಣವಾಗಿ ತುಪ್ಪ, ಹಾಲು, ತರಕಾರಿ ಬಳಕೆಯಾಗಿದೆ.

8 ಲಕ್ಷ ಶೇಂಗಾ ಹೋಳಿಗೆ:

ಹತ್ತಾರು ಸಾವಿರ ಕರ್ಚಿಕಾಯಿ, ಕ್ವಿಂಟಲ್ ಗಟ್ಟಲೇ ಮೈಸೂರುಪಾಕ್, 300 ಕ್ವಿಂಟಲ್ ಮಾದಲಿ, ಹೀಗೆ ತರಾವರಿ ಸಿಹಿ ಪದಾರ್ಥ ಸೇರಿ ಬರೋಬ್ಬರಿ 650 ಕ್ವಿಂಟಲ್ ಗೂ ಅಧಿಕ ಸಿಹಿ ಪದಾರ್ಥ ಬಳಕೆಯಾಗಿದೆ.

ರಥೋತ್ಸವದ ದಿನವೇ ಬರೋಬ್ಬರಿ 116 ಕ್ವಿಂಟಲ್ ಅಕ್ಕಿಯ ಬಳಕೆಯಾಗಿದ್ದರೆ, ಅದರ ಮರುದಿನ 115 ಕ್ವಿಂಟಲ್ ಹಾಗೂ ನಂತರ 100 ಕ್ವಿಂಟಲ್ ಬಳಕೆಯಾಗಿದೆ. ಅಲ್ಲಿಂದ 50ರಿಂದ 70 ಕ್ವಿಂಟಲ್ ಅಕ್ಕಿ ನಿತ್ಯವೂ ಬಳಕೆಯಾಗಿದೆ. ಬರೋಬ್ಬರಿ ಒಂದು ಸಾವಿರ ಕ್ವಿಂಟಲ್ ಅಕ್ಕಿ ಬಳಕೆಯಾಗಿದೆ.

ತಿರುಪತಿಯಂತಾದ ಗದ್ದುಗೆ ದರ್ಶನ: ಗವಿಸಿದ್ಧೇಶ್ವರ ಶ್ರೀಗಳ ಗದ್ದುಗೆ, ಗವಿಸಿದ್ಧೇಶ್ವರ ಶ್ರೀಗಳ ದರ್ಶನಕ್ಕೆ ನಾಲ್ಕಾರು ಗಂಟೆ ಕಾಯಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಷ್ಟೊಂದು ಭಕ್ತ ಸಾಗರ ಹರಿದು ಬಂದಿದ್ದು, ತಿರುಪತಿಯಂತೆಯೇ ಇಲ್ಲಿಯೂ ದರ್ಶನಕ್ಕಾಗಿ ನಾಲ್ಕಾರು ಗಂಟೆ ಕಾಯಬೇಕಾಗಿದೆ ಎನ್ನುತ್ತಾರೆ ಭಕ್ತರು.

ಹಿಂದಿನ ಯಾವ ವರ್ಷವೂ ಇಷ್ಟೊಂದು ಜನಸಾಗರ ಜಾತ್ರೆಗೆ ಸೇರಿರಲಿಲ್ಲ. ಈ ವರ್ಷ ರಥೋತ್ಸವ, ನಂತರದ ದಿನಗಳಲ್ಲೂ ಭಕ್ತರು ಆಗಮಿಸುತ್ತಿದ್ದಾರೆ. ಪ್ರತಿವರ್ಷ ರಥೋತ್ಸವ ಆದ ಮೂರು ದಿನಗಳ ನಂತರ ಜಾತ್ರೆಯಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿತ್ತು. ಆದರೆ, ಈ ವರ್ಷ 10 ದಿನಗಳಾದರೂ ಒಂದಿನಿತೂ ಜಾತ್ರೆಯಲ್ಲಿ ಗದ್ದಲ ಕಡಿಮೆಯಾಗಿಲ್ಲ ಎನ್ನುವುದು ಈ ವರ್ಷದ ವಿಶೇಷ.

ವಾರದ ಮೊದಲೇ ಪ್ರಾರಂಭ: ಈ ವರ್ಷ ವಾರ ಮೊದಲೇ ಮಹಾದಾಸೋಹ ಆರಂಭಿಸಲಾಗಿದೆ. ಪ್ರತಿವರ್ಷ ರಥೋತ್ಸವ ದಿನ ಪ್ರಾರಂಭಿಸಲಾಗುತ್ತಿತ್ತು . ಆದರೆ, ವಿಕಲಚೇತನರ ಸಾಮೂಹಿಕ ವಿವಾಹ ಇದ್ದುದರಿಂದ ಜ.21ರಿಂದಲೇ ಮಹಾದಾಸೋಹ ಪ್ರಾರಂಭವಾಗಿದೆ.

ಏನೇನು? ಎಷ್ಟು ಖರ್ಚು?

ಅಕ್ಕಿ - 1000 ಕ್ವಿಂಟಲ್

ಸಿಹಿ – 650 ಕ್ವಿಂಟಲ್

ತುಪ್ಪ – 10 ಕ್ವಿಂಟಲ್

ಹಾಲು – 7 ಸಾವಿರ ಲೀಟರ್

ತರಕಾರಿ – 25 ಕ್ವಿಂಟಲ್‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ