)
ಮಂಗಳೂರು: ಜಿ ರಾಮ್ ಜಿ ಕಾಯ್ದೆ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ನಡೆಸುವುದಾಗಿ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ, ಕೇಂದ್ರದ ಕಾಯ್ದೆ ವಿರುದ್ಧ ರಾಜ್ಯ ವಿಧಾನಸಭೆಯಲ್ಲಿ ಚರ್ಚಿಸುವುದು ಅಸಾಂವಿಧಾನಿಕ, ಈ ನಿರ್ಧಾರ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸದೆ ಸಿಎಂ ಯಾರು ಎಂಬ ಬಗ್ಗೆಯೇ ಚರ್ಚೆ ನಡೆದಿತ್ತು. ಅಭಿವೃದ್ಧಿ ವಿಚಾರಗಳನ್ನು ಚರ್ಚಿಸಲು ಅಧಿವೇಶನ ವಿಸ್ತರಿಸಿ ಎಂದು ಲಿಖಿತ ಮನವಿ ನೀಡಿದರೂ ಸರ್ಕಾರ ವಿಸ್ತರಣೆ ಮಾಡಲಿಲ್ಲ. ಈಗ ಜಿ ರಾಮ್ ಜಿ ಕಾಯ್ದೆ ಬಗ್ಗೆ ಚರ್ಚಿಸಲು ವಿಶೇಷ ಅಧೀವೇಶನ ನಡೆಸುವ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಕಳೆದ ರಾಜ್ಯ ಬಜೆಟ್‌ನ ಶೇ.50ರಷ್ಟು ಅನುದಾನವೂ ಖರ್ಚಾಗಿಲ್ಲ. ಇನ್ನು ಎರಡು ತಿಂಗಳಲ್ಲಿ ಮತ್ತೆ ಬಜೆಟ್ ಬರಲಿದೆ. ಗಾಳಿ ಹೊರತುಪಡಿಸಿ ಬೇರೆ ಎಲ್ಲದಕ್ಕೂ ರಾಜ್ಯ ಸರ್ಕಾರ ತೆರಿಗೆ ಹಾಕುತ್ತಿದೆ ಅಥವಾ ತೆರಿಗೆ ಹೆಚ್ಚಳ ಮಾಡಿದೆ. ಆದರೆ, ಅಭಿವೃದ್ಧಿ ಆಗುತ್ತಿಲ್ಲ. ರಸ್ತೆ ಹೊಂಡಗಳನ್ನೂ ಮುಚ್ಚುತ್ತಿಲ್ಲ ಎಂದು ಹೇಳಿದರು.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ. ಮಂಜುಳಾ ರಾವ್, ಜಿಲ್ಲಾ ವಕ್ತಾರರಾದ ಸತೀಶ್ ಪ್ರಭು, ಅರುಣ್ ಶೇಟ್, ರಾಜಗೋಪಾಲ ರೈ, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಹರೀಶ್ ಮೂಡುಶೆಡ್ಡೆ, ಮಾಧ್ಯಮ ಪ್ರಮುಖ್ ಮನೋಹರ ಶೆಟ್ಟಿ ಇದ್ದರು.