ಸೋಮವಾರಪೇಟೆ: ತಾಲೂಕಿನ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ೬೭ನೇ ಮಹಾರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಶುಕ್ರವಾರ ನಡೆಯಿತು.
ದಾರಿಯುದ್ದಕ್ಕೂ ಗ್ರಾಮಸ್ಥರು ಮತ್ತು ಭಕ್ತರು ರಥಕ್ಕೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದರು. ಶಾಂತಳ್ಳಿ ಗ್ರಾಮದವರೊಂದಿಗೆ ಕೊತ್ತನಳ್ಳಿ, ಬೀದಳ್ಳಿ, ಹೆಗ್ಗಡಮನೆ, ಕುಮಾರಳ್ಳಿ, ಬಾಚಳ್ಳಿ, ಕೂತಿನಾಡು, ತೋಳುನಾಡು, ಯಡೂರು, ತಲ್ತಾರೆಶೆಟ್ಟಳ್ಳಿ ಸೇರಿದಂತೆ ಮತ್ತಿತರ ಗ್ರಾಮದವರು ಫಲ, ತಾಂಬೂಲ, ದವಸ, ಧಾನ್ಯ, ಕಾಣಿಕೆಗಳನ್ನು ನೀಡಿದರು.ಜಾತ್ರೋತ್ಸವದ ಪ್ರಯುಕ್ತ ಬರಿಗಾಲಿನಲ್ಲಿ ಪುಷ್ಪಗಿರಿ ಬೆಟ್ಟವನ್ನು ಹತ್ತಿ, ಬೆಟ್ಟದ ತುತ್ತತುದಿಯಲ್ಲಿರುವ ಶ್ರೀಕುಮಾರಲಿಂಗೇಶ್ವರ ಸ್ವಾಮಿಯ ಪಾದುಕೆಗೆ ೧೪ರಂದು ಪೂಜೆ ಸಲ್ಲಿಸಿ, ಜ್ಯೋತಿ ಬೆಳಗಿಸಿ ಎರಡು ದಿನ ಬೆಟ್ಟದಲ್ಲಿ ವಾಸ್ತವ್ಯ ಹೂಡಿ, ಜ.೧೫ರಂದು ದೇವಾಲಯಕ್ಕೆ ಜ್ಯೋತಿಯೊಂದಿಗೆ ಬಂದು ಅರಸು ಬಲ ಸೇವೆ ಮಾಡಿದರು.
ಮೂರು ದಿನಗಳ ಕಾಲ ಭಕ್ತಾದಿಗಳಿಗೆ ಅನ್ನದಾನ ನಡೆಯಿತು. ಜಾತ್ರಾ ಆವರಣದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, ರೈತರು ಬೆಳೆದ ತರಕಾರಿ ಸೇರಿದಂತೆ ಇತರ ಬೆಳೆಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ವಿಶೇಷವಾಗಿರುವ ವಸ್ತುಗಳಿಗೆ ಬಹುಮಾನ ನೀಡಲಾಯಿತು.ಗ್ರಾಮೀಣ ಭಾಗದಲ್ಲಿ ಉತ್ಪಾದಿಸುವ ಜೇನನ್ನು ಮಾರಾಟ ಮಾಡಲಾಯಿತು. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯವರು ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ದೇವಾಲಯದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ ಎಂ ಲೋಕೇಶ್, ಧರ್ಮದರ್ಶಿ ಮಂಡಳಿ ಉಪಾಧ್ಯಕ್ಷ ಕೆ.ಟಿ.ಮಧು ತಮ್ಮಯ್ಯ, ಕಾರ್ಯದರ್ಶಿ ಕೆ.ಕೆ.ಮುತ್ತಣ್ಣ, ಖಜಾಂಚಿ ಉತ್ತಯ್ಯ, ಸಹ ಕಾರ್ಯದರ್ಶಿ ಎಚ್.ಎಸ್.ಗಿರೀಶ್ ಇದ್ದರು. ಪ್ರಧಾನ ಅರ್ಚಕ ಎನ್.ಜಿ.ಕೃಷ್ಣಮೂರ್ತಿ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು.