ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕಲಿಸಬೇಕು

KannadaprabhaNewsNetwork | Published : Jan 15, 2024 1:45 AM

ಸಾರಾಂಶ

ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವ ಸಲುವಾಗಿ ಕೈಗಾರಿಕೆಗಳು ಹೆಚ್ಚಾಗಬೇಕೆಂಬುದು ಎಲ್ಲರ ಆಶಯ. ಆದರೆ ಕೈಗಾರಿಕೆಗಳಿಗೆ ಸ್ಥಳೀಯರಿಗಿಂತ ಹೆಚ್ಚಾಗಿ ಹೊರ ದೇಶ ಹಾಗೂ ಹೊರ ರಾಜ್ಯದವರೇ ಹೂಡಿಕೆ ಮಾಡುವುದರಿಂದ ಸ್ಥಳೀಯರಿಗೆ ಉದ್ಯೋಗವಕಾಶ ನೀಡದೇ ಹೊರಗಿನವರೇ ಆದ್ಯತೆ ನೀಡುವುದರಿಂದ ಅಂತವರಿಗೆ ರೈತರ ಭೂಮಿ ಕೊಟ್ಟು ಏನೂ ಪ್ರಯೋಜನವಾಗುವುದಿಲ್ಲ

- - ದರ್ಶನ್ ಧ್ರುವನಾರಾಯಣ್ಕನ್ನಡಪ್ರಭ ವಾರ್ತೆ ನಂಜನಗೂಡು

ನಮ್ಮ ನಾಡಿನ ಕಲೆ, ಸಂಸ್ಕೃತಿಗೆ ಅಪಾರವಾದ ಜನಮನ್ನಣೆಯಿದೆ. ಅದನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಕಲಿಸುವ ಕೆಲಸ ಮಾಡುವ ಜೊತೆಗೆ ನಮ್ಮ ನಾಡು, ನುಡಿಯನ್ನು ಉಳಿಸಿ ಬೆಳೆಸುವ ಸಲುವಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

ನಗರದ ದೇವೀರಮ್ಮನಹಳ್ಳಿ ಶರಣ ಸಂಗಮ ಮಠದ ಆವರಣದಲ್ಲಿ ಪ್ರತಿಧ್ವನಿ ವೇದಿಕೆ ವತಿಯಿಂದ ಯೋಜಿಸಿದ್ದ ನಮ್ಮೂರ ಕನ್ನಡ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಾಡು, ನುಡಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಕನ್ನಡ ಭಾಷೆ ಬಗ್ಗೆ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕಿದೆ ಎಂದರು.

ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಮಾತನಾಡಿ, ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವ ಸಲುವಾಗಿ ಕೈಗಾರಿಕೆಗಳು ಹೆಚ್ಚಾಗಬೇಕೆಂಬುದು ಎಲ್ಲರ ಆಶಯ. ಆದರೆ ಕೈಗಾರಿಕೆಗಳಿಗೆ ಸ್ಥಳೀಯರಿಗಿಂತ ಹೆಚ್ಚಾಗಿ ಹೊರ ದೇಶ ಹಾಗೂ ಹೊರ ರಾಜ್ಯದವರೇ ಹೂಡಿಕೆ ಮಾಡುವುದರಿಂದ ಸ್ಥಳೀಯರಿಗೆ ಉದ್ಯೋಗವಕಾಶ ನೀಡದೇ ಹೊರಗಿನವರೇ ಆದ್ಯತೆ ನೀಡುವುದರಿಂದ ಅಂತವರಿಗೆ ರೈತರ ಭೂಮಿ ಕೊಟ್ಟು ಏನೂ ಪ್ರಯೋಜನವಾಗುವುದಿಲ್ಲ. ಖಾಸಗಿ ವಲಯದಲ್ಲೂ ಸ್ಥಳೀಯರಿಗೆ ಉದ್ಯೋಗ ಮೀಸಲು ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಚಿಂತನೆ ನಡೆಸಿದೆ ಎಂದು ಅವರು ಹೇಳಿದರು.

ಸಹಾಯಕ ಕಾರ್ಮಿಕ ಆಯುಕ್ತೆ ನಾಜೀಯಾ ಸುಲ್ತಾನ ಮಾತನಾಡಿ, 12ನೇ ಶತಮಾನದಲ್ಲಿ ಮಾನವೀಯ ಮೌಲ್ಯ, ತತ್ವಾದರ್ಶಗಳನ್ನು ತಮ್ಮ ಅನುಭವದ ಬುತ್ತಿಯನ್ನು ವಚನಗಳ ಮೂಲಕ ಬಸವಾದಿ ಶರಣರು ನಾಡಿಗೆ ಕೊಟ್ಟು ಹೋಗಿದ್ದಾರೆ. ಆದರೆ, ಅವರ ವಚನಗಳನ್ನು ನಾವು ಹೇಳುವುದಕ್ಕಷ್ಟೇ ಸೀಮಿತಗೊಳಿಸಿದ್ದೇವೆ. ಪರಿಪಾಲಿಸುವಲ್ಲಿ ನಾವು ಎಡವಿದ್ದೇವೆ. ಜಾತಿ, ಧರ್ಮ ಮೀರಿದ ಮೌಲ್ಯಗಳನ್ನು ಸಾರುವ ಶರಣರ ವಚನಗಳು ನಮ್ಮ ಬದುಕಿನ ಆಚರಣೆಯಲ್ಲಿ ಅಡಕವಾಗಬೇಕು. ಮಕ್ಕಳಿಗೆ ವಚನ ಸಾಹಿತ್ಯದ ಬಗ್ಗೆ ಹೆಚ್ಚು ಅರಿವು ಮೂಡಿಸುವ ಕೆಲಸವನ್ನು ಪ್ರತಿಯೊಬ್ಬ ಪೋಷಕರು ಮಾಡಬೇಕು. ಆಗ ಮಾತ್ರ ದ್ವೇಷ, ಅಸೂಹೆ, ತಾರತಮ್ಯವನ್ನು ಹೋಗಲಾಡಿಸಿ ಮೌಲ್ಯಗಳನ್ನು ಬಿತ್ತಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ನಂಜನಗೂಡು ಮಧು, ಟಿ.ಆರ್. ವಿದ್ಯಾಸಾಗರ್, ಶಂಕರ್ ಪ್ರಸಾದ್, ಗೋಳೂರು ನಾರಾಯಣಸ್ವಾಮಿ, ಚೇತನ್, ಹರಿಪ್ರಸಾದ್, ಪೈಲ್ವಾನ್ ಸಿದ್ದರಾಜು, ಮುನೀರ್, ಗೀತಾ, ಮಣಿಕಂಠ, ಹಲ್ಲರೆ ಶಿವಬುದ್ಧಿ, ಮಹೇಂದ್ರ, ಮಹೇಶ್, ಕಲ್ಮಳ್ಳಿ ನಟರಾಜು, ಹುಸ್ಕೂರು ರಾಜಶೇಖರ್, ವಸಂತ ಚನ್ನಪ್ಪ, ಸೌಮ್ಯಾ ಸಿದ್ದರಾಜು, ಕೆ. ನಂಜುಂಡಯ್ಯ, ಉಲ್ಲಾಸ್ ಅವರಿಗೆ ಕನ್ನಡಧ್ವನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ಬಸವಕೇಂದ್ರದ ಬಸವಯೋಗಿ ಪ್ರಭುಗಳು, ಶರಣ ಸಂಗಮ ಮಠದ ನಾಗರಾಜೇಂದ್ರ ಸ್ವಾಮೀಜಿ, ಜಾಮಿಯ ಮಸೀದಿಯ ಅಬ್ದುಲ್ ಮುಸಾಫಿರ್ ರಷಾದಿ ಸಾನ್ನಿಧ್ಯ ವಹಿಸಿದ್ದರು.

ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾಂಪೋಸ್ಟ್ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ಪ್ರತಿಧ್ವನಿ ವೇದಿಕೆ ರಾಜ್ಯಾಧ್ಯಕ್ಷ ಪ್ರಸಾದ್, ತಾಲೂಕು ಅಧ್ಯಕ್ಷ ತ್ರಿಣೇಶ್, ಪಟ್ಟಣ ಅಧ್ಯಕ್ಷ ಆನಂದ್, ಬ್ಲಾಕ್ ಕಾಂಗ್ರೆಸ್ಅಧ್ಯಕ್ಷ ಕುರಹಟ್ಟಿ ಮಹೇಶ್, ಜಿಪಂ ಮಾಜಿ ಸದಸ್ಯ ಸಿ. ಚಿಕ್ಕರಂಗನಾಯಕ, ವಿಶ್ವಕರ್ಮ ನಿಗಮದ ಮಾಜಿ ಅಧ್ಯಕ್ಷ ನಂದಕುಮಾರ್, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಬುಲೆಟ್ ಮಹದೇವಪ್ಪ, ಮುಖಂಡರಾದ ನಾಗೇಶ್ ರಾಜ್, ನಗರ ಪಾಲಿಕೆ ಮಾಜಿ ಸದಸ್ಯ ಪ್ರದೀಪ್ ಕುಮಾರ್ ಮೊದಲಾದವರು ಇದ್ದರು.

Share this article