ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ಮಕ್ಕಳಲ್ಲಿ ಹುದುಗಿದ ಸುಪ್ತ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ ಎಂದು ಪುರಸಭಾಧ್ಯಕ್ಷೆ ಶಿಲ್ಪಾ ರೋಡಕರ ಹೇಳಿದರು.ಪಟ್ಟಣದ ಸಿದ್ದೇಶ್ವರ ಶಾಲೆಯಲ್ಲಿ ಮಂಗಳವಾರ ಜರುಗಿದ ತೇರದಾಳ ಪಶ್ಚಿಮ ವಲಯದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿ ಮಗುವಿನಲ್ಲಿಯೂ ಒಂದಿಲ್ಲೊಂದು ಪ್ರತಿಭೆ ಅಡಗಿರುತ್ತದೆ. ಮಗುವಿಗೆ ಉತ್ತಮ ಪ್ರೋತ್ಸಾಹ, ಅವಕಾಶ ನೀಡಿದರೆ ಮಗುವಿನಲ್ಲಿ ಅಡಕವಾದ ಸೂಕ್ತ ಪ್ರತಿಭೆ ಹೊರಬರುತ್ತದೆ. ಈ ದಿಶೆಯಲ್ಲಿ ಪ್ರತಿಭಾ ಕಾರಂಜಿ, ಕಲೋತ್ಸವ ಪ್ರತಿಭೆಯ ವೇದಿಕೆಯಾಗಿದೆ ಎಂದು ಹೇಳಿದರು.
ಮಕ್ಕಳು ಸಹ ಶಿಕ್ಷಕರ ಮಾರ್ಗದರ್ಶನದಲ್ಲಿ ಇಂಥ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಬದುಕು ಉಜ್ವಲಗೊಳಿಸಿಕೊಳ್ಳುವ ಮೂಲಕ ರಾಷ್ಟ್ರದ ಉತ್ತಮ ಭವಿಷ್ಯದ ನಿರ್ಮಾತೃವಾಗಬೇಕೆಂದರು.ಮಧ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕ ಸಿ.ಎಸ್. ಕಲ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿ ಪ್ರತಿಭಾವಂತರಾಗಿ ಹೊರಬಂದ ಮಕ್ಕಳಲ್ಲಿ ಅನೇಕರು ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಸಾಧಕರಾಗಿ ರಾಜ್ಯ-ರಾಷ್ಟ್ರದ ಹೆಮ್ಮೆಯ ವ್ಯಕ್ತಿಗಳಾಗಿ ಹೊರಹೊಮ್ಮಿದ್ದಾರೆ. ಆ ದಿಸೆಯಲ್ಲಿ ಪ್ರತಿಭಾ ಕಾರಂಜಿ ಮಕ್ಕಳ ಉತ್ತಮ ಭವಿಷ್ಯಕ್ಕೆ ಉತ್ತಮ ವೇದಿಕೆಯಾಗಿದೆ ಎಂದರು.
ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಎಸ್.ಎನ್. ಅಥಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಎಂ.ಬಿ. ಮಾಳೇದ ಮಾತನಾಡಿದರು.ಸಂಸ್ಥೆಯ ಚೇರ್ಮನ್ ಮಹೇಶ ಯಾದವಾಡ, ಪ್ರೌಢವಿಭಾಗದ ಚೇರಮನ್ ಮಹೇಶ ಹಂಜಿ, ನಿರ್ದೇಶಕರಾದ ಪರಪ್ಪಣ್ಣ ಅಥಣಿ, ಮಲ್ಲಪ್ಪಣ್ಣ ಮುಕರಿ, ಶಂಕರ ಹೊಸಮನಿ, ಮುತ್ತಪ್ಪ ಮಿರ್ಜಿ, ಪುರಸಭೆ ಉಪಾಧ್ಯಕ್ಷೆ ನಸ್ರೀನ್‌ಬಾನು ರಾಜೇಸಾಬ ನಗಾರ್ಜಿ, ಸಿಆರ್‌ಪಿಗಳಾದ ಅನಂತರಾಜು ಮುಧೋಳ, ಭರತೇಶ ಯಲ್ಲಟ್ಟಿ, ದಾನಿಗೊಂಡ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಆರ್. ಪಾಟೀಲ, ಆರ್.ಬಿ. ಬಾಬನ್ನವರ, ಎಸ್.ಎಸ್. ನಿಡಗುಂದಿ ಸೇರಿದಂತೆ ವಿವಿಧ ಶಾಲೆಗಳ ಮುಖ್ಯಸ್ಥರು, ಸಿಬ್ಬಂದಿ ಹಾಗೂ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ ಬಿ.ಇಡಿ. ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಗಣ್ಯರನ್ನು ಡೊಳ್ಳು ಬಾರಿಸುವ ಮೂಲಕ ಸ್ವಾಗತಿಸಿಕೊಂಡರು. ಬಳಿಕ ದಿನವಿಡೀ ವಿವಿಧ ಕಾರ್ಯಕ್ರಮ ಜರುಗಿದವು. ಮುಕ್ತಾಯ ಸಮಾರಂಭದಲ್ಲಿ ಸಂಸ್ಥೆಯ ಬಸವರಾಜ ಬಾಳಿಕಾಯಿ ಹಾಗೂ ಗಣ್ಯರು ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಿದರು. ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಬಿ.ಟಿ. ಪತ್ತಾರ ಸ್ವಾಗತಿಸಿದರು. ಪ್ರೌಢವಿಭಾಗದ ಮುಖ್ಯಶಿಕ್ಷಕ ಡಿ.ಎ. ಉಗಾರ ನಿರೂಪಿಸಿದರು.