ಯಲಬುರ್ಗಾ: ವಿದ್ಯಾರ್ಥಿಗಳ ಬೌದ್ಧಿಕ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ನಿಡಗುಂದಿಕೊಪ್ಪ ಶಾಖಾ ಶಿವಯೋಗಿಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.
ಗ್ರಾಮೀಣ ಪ್ರದೇಶಗಳ ಮಕ್ಕಳಲ್ಲಿರುವ ಪ್ರತಿಭೆ ಇಂದು ಪಟ್ಟಣದ ಮಕ್ಕಳಲ್ಲಿ ಕಾಣಸಿಗುತ್ತಿಲ್ಲ. ಯಾವುದಾದರೂ ಕಲೆ ಜೀವಂತವಾಗಿ ಉಳಿದಿದ್ದರೆ, ಅದು ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಎಂದರು.
ಗ್ರಾಮದ ಹಿರಿಯ ಮುಖಂಡರಾದ ಶೇಖರಗೌಡ ಪಾಟೀಲ ಮಾತನಾಡಿ, ಸೃಜನಾತ್ಮಕ ಗುಣಗಳನ್ನು ಬೆಳೆಸುವಲ್ಲಿ ಪ್ರತಿಭಾ ಕಾರಂಜಿ ಅತ್ಯಂತ ಮಹತ್ವದ್ದಾಗಿದ್ದು, ನಶಿಸಿ ಹೋಗುತ್ತಿರುವ ನಾಡಿನ ಸಂಸ್ಕೃತಿ, ಜಾನಪದ ಕಲೆಗಳ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ವಹಿಸಿ ಅಧ್ಯಯನ ಮಾಡಿ ಸ್ಪರ್ಧಾ ವೇದಿಕೆಗಳಲ್ಲಿ ಪ್ರತಿಭೆ ಅನಾವರಣಗೊಳಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಸಿದ್ಲಿಂಗಪ್ಪ ಶ್ಯಾಗೋಟಿ, ಮೆಹಬೂಬ ಬಾದಶಾಹ, ಶೇಖರಗೌಡ ಪಾಟೀಲ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಶಿಕ್ಷಕರು-ಪಾಲಕರು ಪರಿಶ್ರಮ ವಹಿಸಬೇಕಿದೆ. ಮಕ್ಕಳಲ್ಲಿ ಅನೇಕ ಪ್ರತಿಭೆಗಳು ಇರುತ್ತವೆ. ಅವುಗಳನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಆಶಾಕಿರಣವಾಗಿದೆ ಎಂದರು.