ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆಯಿಂದ ಪ್ರತಿಭೋತ್ಸವ

KannadaprabhaNewsNetwork |  
Published : Feb 25, 2025, 12:47 AM IST
ಚಿತ್ರ : 24ಎಂಡಿಕೆ1 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿದರು.  | Kannada Prabha

ಸಾರಾಂಶ

ಕೊಡಗು ಜಿಲ್ಲಾ ಪೊಲೀಸ್‌ನ ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ ವತಿಯಿಂದ ಮಡಿಕೇರಿಯ ಗಾಂಧಿಭವನದಲ್ಲಿ ತಿಂಗಳಿಗೊಂದು ಕಾರ್ಯಕ್ರಮದಡಿ ಮಿಡಿದ ಪೊಲೀಸ್ ಹೃದಯಗಳಿಂದ ಘೋಷವಾಕ್ಯದ ‘ಪ್ರತಿಭೋತ್ಸವ’ ಕಾರ್ಯಕ್ರಮ ನಡೆಯಿತು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಉದ್ಘಾಟಿಸಿದರು.

ಪೊಲೀಸರ ಮಕ್ಕಳ ಪ್ರತಿಭೆ ಅನಾವರಣಗೊಳ್ಳಲಿ: ಎಂ.ಪಿ.ಕೇಶವ ಕಾಮತ್ ಕರೆ

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮಕ್ಕಳಲ್ಲಿ ಅಡಗಿರುವ ಕಲಾಪ್ರತಿಭೆಯನ್ನು ಅನಾವರಣಗೊಳಿಸಲು ಪೊಲೀಸ್ ಸಾಂಸ್ಕೃತಿಕ ವೇದಿಕೆ ಸದ್ಬಳಕೆಯಾಗಬೇಕು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಕರೆ ನೀಡಿದರು.ಕೊಡಗು ಜಿಲ್ಲಾ ಪೊಲೀಸ್‌ನ ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ ವತಿಯಿಂದ ಮಡಿಕೇರಿಯ ಗಾಂಧಿಭವನದಲ್ಲಿ ಆಯೋಜಿಸಲಾದ ತಿಂಗಳಿಗೊಂದು ಕಾರ್ಯಕ್ರಮದಡಿ ಮಿಡಿದ ಪೊಲೀಸ್ ಹೃದಯಗಳಿಂದ ಘೋಷವಾಕ್ಯದ ‘ಪ್ರತಿಭೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಾನೂನನ್ನು ಕಾಪಾಡುವ ಪೊಲೀಸರಲ್ಲಿ ಕೂಡ ಕಲಾವಿದನಿರುತ್ತಾನೆ. ಈ ಕಲಾವಿದನ ಪ್ರತಿಭೆಯನ್ನು ಪ್ರತಿಬಿಂಬಿಸಲು ಪೊಲೀಸ್ ಸಾಂಸ್ಕೃತಿಕ ವೇದಿಕೆ ಹೆಚ್ಚು ಉಪಯುಕ್ತವಾಗಿದೆ. ಇದೇ ವೇದಿಕೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಕ್ಕಳ ಪ್ರತಿಭೆ ಕೂಡ ಅನಾವರಣಗೊಳ್ಳಬೇಕು. ಇದರಿಂದ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ದೊರೆತಂತ್ತಾಗುತ್ತದೆ ಮತ್ತು ಶಾಲಾ, ಕಾಲೇಜುಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸ್ಫೂರ್ತಿ ದೊರೆತಂತ್ತಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆಯ ಕಾರ್ಯಕ್ರಮಗಳಿಗೆ ಕನ್ನಡ ಸಾಹಿತ್ಯ ಪರಿಷತ್ ಸಂಪೂರ್ಣ ಸಹಕಾರ ನೀಡಲಿದ್ದು, ಪೊಲೀಸರು ಕಸಾಪದ ಸದಸ್ಯತ್ವ ಪಡೆದುಕೊಳ್ಳುವಂತೆ ಎಂ.ಪಿ.ಕೇಶವ ಕಾಮತ್ ಮನವಿ ಮಾಡಿದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಪೊಲೀಸ್ ಸಾಂಸ್ಕೃತಿಕ ವೇದಿಕೆ ನಡೆಸುವ ಯಾವುದೇ ಕಾರ್ಯಕ್ರಮಗಳಿಗೆ ಕನ್ನಡ ಸಾಹಿತ್ಯ ಪರಿಷತ್ ಬೆಂಗಾವಲಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.ನಿತ್ಯ ಖಾಕಿ ಸಮವಸ್ತ್ರ ಧರಿಸಿ ಕರ್ತವ್ಯದಲ್ಲೇ ನಿರತರಾಗಿರುವ ಪೊಲೀಸರಿಗೆ ತಿಂಗಳಿಗೊಮ್ಮೆ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ಈ ವೇದಿಕೆಯಡಿ ಕಲಾಪ್ರತಿಭೆಯನ್ನು ಪ್ರದರ್ಶಿಸುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾಷ್ಟ್ರಮಟ್ಟದಲ್ಲೂ ಮಿಂಚಬೇಕು ಎಂದರು.ಪೊಲೀಸ್ ಸಾಂಸ್ಕೃತಿಕ ವೇದಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ ಜಂಟಿಯಾಗಿ ಮುಂದಿನ ದಿನಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸೋಣವೆಂದು ಟಿ.ಪಿ.ರಮೇಶ್ ಹೇಳಿದರು.ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಬದುಕಿನ ಜಂಜಾಟದಿಂದ ಹೊರ ಬಂದು ಕೊಂಚ ಕಾಲ ಸಾಂಸ್ಕೃತಿಕ ಸಂಭ್ರಮದಲ್ಲಿ ಮನಸ್ಸನ್ನು ಹಗುರವಾಗಿಸಿಕೊಳ್ಳಲು ರಚನೆಯಾಗಿರುವ ಪೊಲೀಸ್ ಸಾಂಸ್ಕೃತಿಕ ವೇದಿಕೆ ಒಂದು ವಿಭಿನ್ನ ಪ್ರಯತ್ನವಾಗಿದೆ ಎಂದು ಶ್ಲಾಘಿಸಿದರು.ಕಸಾಪದ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್ ಮಾತನಾಡಿ, ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಸಂಗೀತದ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು. ಪೊಲೀಸ್ ಸಾಂಸ್ಕೃತಿಕ ವೇದಿಕೆಯ ರಚನೆ ಅದ್ಭುತ ಚಿಂತನೆಯಾಗಿದೆ. ಇದು ಬದುಕಿನ ಜಂಜಾಟವನ್ನು ಮರೆತು ಕೌಟುಂಬಿಕ ಸಂಬಂಧಗಳನ್ನು ಗಟ್ಟಿಗೊಳಿಸಲು ಮತ್ತು ಒಂದೆಡೆ ಸೇರಿ ಪ್ರತಿಭೆಯನ್ನು ವಿನಿಮಯ ಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್, ಡಿವೈಎಸ್‌ಪಿಗಳಾದ ಮಡಿಕೇರಿಯ ಪಿ.ಎ.ಸೂರಜ್, ಸೋಮವಾರಪೇಟೆಯ ಗಂಗಾಧರಪ್ಪ ಆರ್.ವಿ., ವಿರಾಜಪೇಟೆಯ ಮಹೇಶ್ ಕುಮಾರ್, ಸೆನ್ ಡಿವೈಎಸ್‌ಪಿ ರವಿ, ವೃತ್ತ ನಿರೀಕ್ಷಕರಾದ ಐ.ಪಿ.ಮೇದಪ್ಪ, ಅನೂಪ್ ಮಾದಪ್ಪ ಆರ್.ಪಿ.ಚೆನ್ನ ನಾಯಕ, ಠಾಣಾಧಿಕಾರಿಗಳಾದ ತಮ್ಮಯ್ಯ, ಲತಾ, ನವೀನ್, ಮಂಜುನಾಥ್, ಗೀತಾ ಎಚ್.ಟಿ. ಮತ್ತಿತರ ಪೊಲೀಸರ ಅಧಿಕಾರಿಗಳು ಉಪಸ್ಥಿತರಿದ್ದರು.ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಮೂಡಿ ಬಂದ ಜನಪದ ಗೀತೆ ಮತ್ತು ಭಾವಗೀತೆ ಕಲಾಭಿಮಾನಿಗಳ ಮನಸೂರೆಗೊಂಡಿತು. ಪ್ರತಿಭೆಯನ್ನು ಅನಾವರಣಗೊಳಿಸಿದ ಪೊಲೀಸರಿಗೆ ನೆನಪಿನ ಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು. ಮಹಿಳಾ ಸಿಬ್ಬಂದಿ ಕಾವೇರಮ್ಮ ಪ್ರಾರ್ಥಿಸಿದರು. ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಚಂದ್ರಶೇಖರ್ ಸ್ವಾಗತಿಸಿದರು. ಮಡಿಕೇರಿ ನಗರ ವೃತ್ತ ನಿರೀಕ್ಷಕ ರಾಜು ಹಾಗೂ ಕಂಟ್ರೋಲ್ ರೂಮ್ ಠಾಣಾಧಿಕಾರಿ ಧನಂಜಯ ನಿರೂಪಿಸಿದರು. ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ ವತಿಯಿಂದ ಪ್ರತಿ ತಿಂಗಳ 4ನೇ ಶನಿವಾರ ಪ್ರತಿಭೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರಕಾರಿಯಲ್ಲಿ ಹಾನಿಕಾರಕ ಅಂಶ ಪತ್ತೆ: ಶೀಘ್ರ ಸೂಕ್ತ ಮಾರ್ಗಸೂಚಿ
ಸಿಲಿಂಡರ್‌ಗೆ ಹಾಹಾಕಾರ: ಊಟ, ತಿಂಡಿ ಹರೋಹರ!