28ರಿಂದ ಚಂದಗುಳಿ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ: ಲಕ್ಷ್ಮಿನಾರಾಯಣ ಭಟ್ಟ

KannadaprabhaNewsNetwork | Published : Feb 15, 2025 12:33 AM

ಸಾರಾಂಶ

ಸುಮಾರು ₹೪೦ ಲಕ್ಷ ಕಾರ್ಯಕ್ರಮಕ್ಕೆ ತಗುಲಬಹುದೆಂದು ಸಮಿತಿ ಅಂದಾಜು ಮಾಡಿದೆ.

ಯಲ್ಲಾಪುರ: ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಚಂದಗುಳಿಯ ಸಿದ್ಧಿವಿನಾಯಕ(ಘಂಟೆ ಗಣಪತಿ) ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ ಇದೇ ಫೆ. ೨೮ರಿಂದ ಮಾ. ೩ರ ವರೆಗೆ ೪ ದಿನ ನಡೆಯಲಿದೆ. ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದು ದೇವಸ್ಥಾನದ ಅಧ್ಯಕ್ಷ, ಸ್ವಾಗತ ಸಮಿತಿಯ ಅಧ್ಯಕ್ಷ ವಿ. ಲಕ್ಷ್ಮಿನಾರಾಯಣ ಭಟ್ಟ ತಾರೀಮಕ್ಕಿ ತಿಳಿಸಿದರು.

ಫೆ. ೧೪ರಂದು ಪತ್ರಿಕಾಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಮಾತನಾಡಿ, ಸುಮಾರು ₹೪೦ ಲಕ್ಷ ಕಾರ್ಯಕ್ರಮಕ್ಕೆ ತಗುಲಬಹುದೆಂದು ಸಮಿತಿ ಅಂದಾಜು ಮಾಡಿದೆ. ಕಾರ್ಯಕ್ರಮವನ್ನು ವಿವಿಧ ಸಂಘ- ಸಂಸ್ಥೆ, ಸಾರ್ವಜನಿಕರ ಮತ್ತು ಭಕ್ತರ ಸಹಕಾರದಲ್ಲಿ ನಡೆಸಲಿದ್ದೇವೆ ಎಂದರು.

ಈ ಮಂದಿರ ಪುರಾಣ ಕಾಲದ ಇತಿಹಾಸವುಳ್ಳದ್ದಾಗಿದ್ದು, ಸೋದೆಯ ಅರಸಪ್ಪ ನಾಯಕ ಇಲ್ಲಿ ಸಿದ್ಧಿವಿನಾಯಕನನ್ನು ಸ್ಥಾಪಿಸಿ, ದೇವಸ್ಥಾನಕ್ಕೆ ೧೦ ಎಕರೆ ಕೃಷಿ ಜಮೀನನ್ನು ಉಂಬಳಿಯಾಗಿ ನೀಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಘಂಟೆ ಗಣಪನೆಂದು ಪ್ರಸಿದ್ಧಿಯಾಗಿದೆ. ಪ್ರಾಚೀನ ಉಲ್ಲೇಖದಂತೆ ಸೋದೆ ರಾಜರ ಕುಟುಂಬದ ಮಗುವಿಗೆ ನಾಲಿಗೆಯಲ್ಲಿ ಶುದ್ಧ ಅಕ್ಷರ ಹೊರಡದ ಕಾರಣ ಚಂದಗುಳಿಯ ಸಿದ್ಧಿವಿನಾಯಕನಲ್ಲಿ ಘಂಟೆ ಹರಕೆ ನೀಡಿದ ಪರಿಣಾಮ ಆ ಬಾಲಕನಿಗೆ ಮಾತು ಬಂತೆಂಬ ಪ್ರತೀತಿಯಿದೆ. ನಂತರ ಕಾಲಕ್ರಮೇಣ ಅನೇಕ ಭಕ್ತರು ತಮ್ಮಿಷ್ಟ ಈಡೇರಿಕೆಗಾಗಿ ದೇವಾಲಯಕ್ಕೆ ಘಂಟೆಯನ್ನು ನೀಡುತ್ತ ಬಂದರು. ಇದು ಇತಿಹಾಸ. ಸಿದ್ಧಿವಿನಾಯಕನಿಗೆ ಸಿದ್ಧಿ ಬುದ್ಧಿ ಸಹಿತ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.

ಅನೇಕ ದಾನಿಗಳು, ಭಕ್ತರು ಸುಮಾರು ₹೪ ಕೋಟಿಯನ್ನು ಕಟ್ಟಡ ನಿರ್ಮಾಣಕ್ಕೆ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಸುಂದರ ಸಭಾಭವನ, ಚಂದ್ರಶಾಲೆ, ಗುರುಭವನ, ಯಾಗಶಾಲೆಗಳನ್ನು ನಿರ್ಮಿಸಲಾಗಿದೆ. ನಿತ್ಯ ೨೦- ೨೫ ಗಣಹವನಗಳು ನಡೆಯುತ್ತಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಆಡಳಿತ ಸಮಿತಿಯ ಸದಸ್ಯ, ಸ್ವಾಗತ ಸಮಿತಿಯ ಕೋಶಾಧ್ಯಕ್ಷ ಎಲ್.ಪಿ. ಭಟ್ಟ ಗುಂಡ್ಕಲ್, ಉಪಾಧ್ಯಕ್ಷ ಡಿ. ಶಂಕರ ಭಟ್ಟ, ಪ್ರಚಾರ ಸಮಿತಿಯ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ, ಸ್ವಾಗತ ಸಮಿತಿಯ ಸದಸ್ಯರಾದ ನರಸಿಂಹ ಭಟ್ಟ ಗುಂಡ್ಕಲ್, ಆರ್.ಎಸ್. ಭಟ್ಟ ದೇಸಾಯಿಮನೆ, ನಾಗೇಶ ಭಟ್ಟ ಮಳಲಗಾಂವ್ ಮತ್ತಿತರರು ಉಪಸ್ಥಿತರಿದ್ದರು. ನಾಳೆ ಅಘನಾಶಿನಿ ಆರತಿ ಕಾರ್ಯಕ್ರಮ

ಕುಮಟಾ: ತಾಲೂಕಿನ ದಿವಗಿಯಲ್ಲಿ ಅಘನಾಶಿನಿ ನದಿಗೆ ಫೆ. ೧೬ರ ಸಂಜೆ ೬ ಗಂಟೆಗೆ ಅಘನಾಶಿನಿ ನದಿಗೆ ಅತಿವಿಶಿಷ್ಟವಾದ ಕಾಶಿಯ ಗಂಗಾ ಆರತಿಯ ಮಾದರಿಯಲ್ಲಿ ಅಘನಾಶಿನಿ ಆರತಿ ಕಾರ್ಯಕ್ರಮ ಮಾಡಲಿದ್ದೇವೆ ಎಂದು ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಅಣ್ಣಪ್ಪ ನಾಯ್ಕ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿ, ಅಘನಾಶಿನಿ ನದಿಗೆ ಮೂರನೇ ಬಾರಿಗೆ ಮಾಡುತ್ತಿರುವ ಆರತಿ ಕಾರ್ಯಕ್ರಮಕ್ಕೆ ಮೂಡಬಿದಿರೆಯ ಕರಿಂಜೆ ಕ್ಷೇತ್ರದ ಮುಕ್ತಾನಂದ ಶ್ರೀಗಳು, ಬಳ್ಕೂರ ಯಕ್ಷಿಚೌಡೇಶ್ವರಿ ದೇವಾಲಯದ ಮಾದೇವ ಸ್ವಾಮಿ, ಉದ್ಯಮಿ ಜಗದೀಶ ಸುರೇಶ ಭಟ್, ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಉಪಸ್ಥಿತರಿರಲಿದ್ದಾರೆ.

ದಿವಗಿಯ ಹೇಮಂತಕುಮಾರ ಗಾಂವಕರ ಮಾತನಾಡಿ, ಅಘನಾಶಿನಿ ನದಿಯೊಟ್ಟಿಗೆ ಲಕ್ಷಾಂತರ ಜನರ ಬದುಕು ತಳುಕು ಹಾಕಿಕೊಂಡಿದೆ. ಅಂತಹ ನದಿಗೆ ಶ್ರದ್ಧೆ, ಗೌರವ ಸಮರ್ಪಣೆಯ ಆರತಿಯನ್ನು ದಿವಗಿಯಲ್ಲಿ ಹಮ್ಮಿಕೊಂಡಿರುವುದು ಒಳ್ಳೆಯ ವಿಚಾರ. ತಾಲೂಕಿನ ಎಲ್ಲೆಡೆಯಿಂದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಬಂದು ಅಘನಾಶಿನಿ ಆರತಿಯ ವೈಭವವನ್ನು ಕಣ್ತುಂಬಿಕೊಳ್ಳಬೇಕು ಎಂದರು.

ಯುವ ಬ್ರಿಗೇಡ್ ತಾಲೂಕು ಸಂಚಾಲಕ ಸಚಿನ್ ಭಂಡಾರಿ, ಸದಸ್ಯರಾದ ಗೌರೀಶ ನಾಯ್ಕ, ಲಕ್ಷ್ಮೀಕಾಂತ ಮುಕ್ರಿ, ದಿವಗಿ ಗ್ರಾಮದ ಸುಭಾಷ ಅಂಬಿಗ, ಗಣಪತಿ ಅಂಬಿಗ, ವಿನೋದ ಅಂಬಿಗ, ಆನಂದು ದೇಶಭಂಡಾರಿ, ಪ್ರಶಾಂತ ಅಂಬಿಗ ಇತರರು ಇದ್ದರು.

Share this article