ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಪ್ರಮುಖ ಆರೋಪಿ ಕೇರಳದಲ್ಲಿ ಸೆರೆ

KannadaprabhaNewsNetwork |  
Published : Jul 4, 2025 11:47 PM ISTUpdated : Jul 5, 2025 7:58 AM IST
32 | Kannada Prabha

ಸಾರಾಂಶ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅಬ್ದುಲ್ ರಹಿಮಾನ್ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಕೇರಳದ ಕಣ್ಣೂರಿನ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

 ಮಂಗಳೂರು :  ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅಬ್ದುಲ್ ರಹಿಮಾನ್ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಕೇರಳದ ಕಣ್ಣೂರಿನ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಎರಡು ವರ್ಷಗಳಿಂದ ವಿದೇಶದಲ್ಲಿದ್ದ ರಹಿಮಾನ್ ಕತಾರ್‌ನಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಲೇ ಎನ್‌ಐಎ ಬಂಧಿಸಿದೆ.

ಏಪ್ರಿಲ್ ತಿಂಗಳಲ್ಲಿ ಅಬ್ದುಲ್ ರಹಿಮಾನ್ ಸೇರಿದಂತೆ ಮೂವರು ತಲೆಮರೆಸಿಕೊಂಡಿದ್ದವರು ಸೇರಿ ನಾಲ್ವರ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರು ಮಂದಿಯ ಸುಳಿವು ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಎನ್‌ಐಎ ಪ್ರಕಟಿಸಿತ್ತು. ಅಬ್ದುಲ್ ರಹಿಮಾನ್ ಹೆಸರಲ್ಲಿ ನಾಲ್ಕು ಲಕ್ಷ ರು. ಬಹುಮಾನ ಘೋಷಣೆಯಾಗಿತ್ತು. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಎನ್‌ಐಎ ಬಂಧಿಸುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಅಬ್ದುಲ್ ರಹಿಮಾನ್ ಸದ್ದಿಲ್ಲದೆ ವಿದೇಶಕ್ಕೆ ಪರಾರಿಯಾಗಿದ್ದ.ಈ ಬಗ್ಗೆ ಮಾಹಿತಿ ಪಡೆದಿದ್ದ ಎನ್‌ಐಎ ಲುಕೌಟ್ ನೋಟಿಸ್ ಜಾರಿ ಮಾಡಿತ್ತು. ಇದೀಗ ಕತಾರ್ ವಿಮಾನ ನಿಲ್ದಾಣದಿಂದ ನೇರ ವಿಮಾನದಲ್ಲಿ ಕೇರಳದ ಕಣ್ಣೂರಿಗೆ ಬಂದಿಳಿಯುತ್ತಿದ್ದಾಗಲೇ ಮಾಹಿತಿ ಪಡೆದ ಎನ್‌ಐಎ ಅಧಿಕಾರಿಗಳು, ಅಲ್ಲಿಗೆ ತೆರಳಿ ವಶಕ್ಕೆ ಪಡೆದಿದ್ದಾರೆ.

ಪಿಎಫ್‌ಐ ಪ್ರಮುಖರ ಸೂಚನೆಯಂತೆ ಅಬ್ದುಲ್ ರಹಿಮಾನ್ ಮತ್ತು ಇತರರು ಸೇರಿ ಪ್ರವೀಣ್ ನೆಟ್ಟಾರು ಕೊಲೆಗೆ ಸಂಚು ರೂಪಿಸಿದ್ದರು. ಪ್ರಕರಣದಲ್ಲಿ ಒಟ್ಟು ೨೮ ಮಂದಿಯ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ. ಪ್ರವೀಣ್ ನೆಟ್ಟಾರುರವರನ್ನು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ೨೦೨೨ರ ಜುಲೈ ೨೬ರಂದು ಹತ್ಯೆ ಮಾಡಲಾಗಿತ್ತು. ಹಿಂದುಗಳನ್ನು ಭಯಪಡಿಸುವುದು ಮತ್ತು ಸಮಾಜದಲ್ಲಿ ಕೋಮು ದ್ವೇಷದ ಗಲಾಟೆ ಎಬ್ಬಿಸುವ ಉದ್ದೇಶದಿಂದ ಹತ್ಯೆ ನಡೆಸಲಾಗಿತ್ತು ಎಂದು ಎನ್‌ಐಎ ದೆಹಲಿ ಕಚೇರಿಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿತ್ತು.

PREV
Read more Articles on