)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಶನಿವಾರ ಬಂಧಿಸಿದೆ.ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿ ನೌಶಾದ್ (32) ಹಾಗೂ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚೌಡ್ಲಿ ಕಾನ್ವೆಂಟ್ ರಸ್ತೆ ನಿವಾಸಿ ಅಬ್ದುಲ್ ನಾಸಿರ್ ಪಿ. (41) ಬಂಧಿತರು. ಎನ್‌ಐಎ ನೌಶಾದ್‌ನನ್ನು ತಮಿಳುನಾಡಿನ ಹೊಸೂರಿನಲ್ಲಿ ಹಾಗೂ ಅಬ್ದುಲ್ ನಾಸಿರ್‌ನನ್ನು ಕೇಳದ ಕೊಚ್ಚಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಆಂಧ್ರಪ್ರದೇಶ ಪೊಲೀಸರ ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ಎರಡು ರಾಜ್ಯಗಳಲ್ಲಿ ನಡೆಸಿದ ಸೂಕ್ಷ್ಮ ಕಾರ್ಯಾಚರಣೆಯಲ್ಲಿ ಆರೋಪಿಗಳ ಬಂಧಿಸಲಾಗಿದೆ.
ಉಳಿದ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚಲು ಎನ್‌ಐಎ ತನ್ನ ಕಾರ್ಯಾಚರಣೆ ಮುಂದುವರೆಸಿದೆ ಎನ್ಐಎ ತಿಳಿಸಿದೆ.ಬಂಧಿತ ಈ ಇಬ್ಬರು ಆರೋಪಿಗಳು ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿಗಳು ತಪ್ಪಿಸಿಕೊಳ್ಳಲು ನೆರವು ನೀಡಿದ್ದು, ಮೈಸೂರು, ಚಾಮರಾಜನಗರ, ತಮಿಳುನಾಡಿನ ಈರೋಡ್‌ನಲ್ಲಿ ಸುರಕ್ಷಿತವಾಗಿ ಅಡಗಿಕೊಳ್ಳಲು ರಹಸ್ಯ ಸ್ಥಳದ ವ್ಯವಸ್ಥೆ ಮಾಡಿರುವ ಆರೋಪ ಇವರ ಮೇಲಿದೆ.
ಪ್ರವೀಣ್ ನೆಟ್ಟಾರು ಅವರನ್ನು 2022ರ ಜುಲೈ 26ರಂದು ರಾತ್ರಿ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳ ತಂಡ ಮಾರಕಾಯುಧಗಳಿಂದ ಬರ್ಬರವಾಗಿ ಕೊಲೆ ಮಾಡಿ ಪರಾಯಿಯಾಗಿದ್ದರು. ಆರಂಭದಲ್ಲಿ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ರಾಷ್ಟ್ರೀಯ ತನಿಖಾ ದಳ ಪ್ರಕರಣ ಕೈಗೆತ್ತಿಕೊಂಡು ಇನ್ನುಳಿದ ಪ್ರಮುಖ ಹಾಗೂ ಪ್ರಕರಣದ ಆರೋಪಿಗಳಿಗೆ ಸಹಕರಿಸಿದವರನ್ನು ಬಂಧಿಸಿದೆ. ಬಂಧಿತ ಆರೋಪಿಗಳಿಗೆ ಸಹಕಾರ ನೀಡಿದವರ ವಿರುದ್ಧವೂ ಪ್ರಕರಣ ದಾಖಲಾಗುತ್ತಿರುವುದರಿಂದ ಪ್ರಕರಣದ ಆರೋಪಿಗಳ ಸಂಖ್ಯೆ ಹೆಚ್ಚಾಗುತ್ತಿದೆ.