ಪ್ರವೀಣ್‌ ನೆಟ್ಟಾರು ಕೊಲೆ: ಜಬೀರ್‌ ಜಾಮೀನು ಅರ್ಜಿ ವಜಾ

KannadaprabhaNewsNetwork | Published : Mar 20, 2024 1:20 AM

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿ ಸಮಿತಿಯ ಸದಸ್ಯನಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನು 2022ರ ಜು.26ರಂದು ರಾತ್ರಿ 8.30ರ ವೇಳೆ ಕೆಲ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದ್ದರಿಂದ ಮೃತಪಟ್ಟಿದ್ದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಜೆಪಿಯ ಯುವ ಮೋರ್ಚಾದ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ 21ನೇ ಆರೋಪಿಯಾಗಿರುವ ಮೊಹಮ್ಮದ್ ಜಬೀರ್‌ಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.

ಪ್ರಕರಣ ಸಂಬಂಧ ತಮ್ಮ ಕಸ್ಟಡಿಯನ್ನು ವಿಸ್ತರಣೆ ಮಾಡಿದ ಹಾಗೂ ಡೀಫಾಲ್ಟ್ ಜಾಮೀನು ಅರ್ಜಿ ತಿರಸ್ಕರಿಸಿ ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಪಡಿಸುವಂತೆ ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ನಿವಾಸಿ ಜಬೀರ್ (35) ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ಕುಮಾರ್‌ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಆದೇಶಿಸಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿ ಸಮಿತಿಯ ಸದಸ್ಯನಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನು 2022ರ ಜು.26ರಂದು ರಾತ್ರಿ 8.30ರ ವೇಳೆ ಕೆಲ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದ್ದರಿಂದ ಮೃತಪಟ್ಟಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಎನ್‌ಐಎ ಪೊಲೀಸರು, 2022ರ ನ.7ರಂದು ಅರ್ಜಿದಾರ ಜಬೀರ್‌ ನನ್ನು ಬಂಧಿಸಿದ್ದರು. 2023ರ ಫೆ.6ರಂದು ಜಬೀರ್‌ ಬಂಧನದ ಅವಧಿ 90 ದಿನ ಮುಗಿದಿದ್ದರೂ ಎನ್ಐಎ ಆರೋಪ ಪಟ್ಟಿ ಸಲ್ಲಿಸಿರಲಿಲ್ಲ. 2023ರ ಫೆ.7ರಂದು ಪ್ರಕರಣದ ವಿಚಾರಣೆಯ ದಿನ ಜಬೀರ್ ಜಾಮೀನು ಕೋರಿ ಅರ್ಜಿ ಸಲ್ಲಿಸಿರಲಿಲ್ಲ. ಎನ್ಐಎ ಸಹ ಕಸ್ಟಡಿ ವಿಸ್ತರಣೆಯನ್ನೂ ಕೋರಿರಲಿಲ್ಲ. ಆದರೆ, ಫೆ.8ರಂದು ಎನ್ಐಎ ಕಸ್ಟಡಿ ವಿಸ್ತರಣೆ ಕೋರಿತ್ತು. ಅದೇ ದಿನ ಅರ್ಜಿದಾರರು ಡಿಫಾಲ್ಟ್ ಜಾಮೀನು ಕೋರಿದ್ದರು. ಅದನ್ನು ತಿರಸ್ಕರಿಸಿದ್ದ ವಿಶೇಷ ನ್ಯಾಯಾಲಯ, ಜಬೀರ್‌ ಕಸ್ಟಡಿ ಅವಧಿಯನ್ನು ವಿಸ್ತರಿಸಿತ್ತು. ಈ ಆದೇಶ ಪ್ರಶ್ನಿಸಿ ಆತ ಹೈಕೋರ್ಟ್‌ ಮೊರೆ ಹೋಗಿದ್ದ.

ಕಸ್ಟಡಿ ವಿಸ್ತರಣೆ ಕೋರಿ ಎನ್ಐಎ ಮತ್ತು ಡಿಫಾಲ್ಟ್ ಜಾಮೀನು ಕೋರಿ ಅರ್ಜಿದಾರರು ಒಂದೇ ದಿನ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ, ಎರಡೂ ಅರ್ಜಿಗಳನ್ನು ಎನ್ಐಎ ವಿಶೇಷ ನ್ಯಾಯಾಲಯ ಒಂದೇ ದಿನ ವಿಚಾರಣೆ ನಡೆಸಿದೆ. ಅರ್ಜಿದಾರರ ಕಸ್ಟಡಿ ವಿಸ್ತರಣೆ ಕೋರಿ ನಿರ್ದಿಷ್ಟ ಕಾರಣಗಳನ್ನು ಒಳಗೊಂಡ ಮನವಿಯನ್ನು ಎನ್ಐಎ ಸಲ್ಲಿಸಿದೆ. ಎನ್ಐಎ ಅರ್ಜಿಯನ್ನು ಪುರಸ್ಕರಿಸಿರುವುದರಿಂದ ಡಿಫಾಲ್ಟ್ ಜಾಮೀನು ಕೋರಿರುವ ಅರ್ಜಿದಾರರ ಕೋರಿಕೆ ತಿರಸ್ಕರಿಸಲಾಗಿದೆ. ಕಸ್ಟಡಿ ಪಡೆಯಲು ಸೂಕ್ತ ಮತ್ತು ನಿರ್ದಿಷ್ಟ ಕಾರಣ ನೀಡಲಾಗಿಲ್ಲ ಎಂದು ಅರ್ಜಿದಾರರು ಪ್ರತಿಪಾದಿಸದ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯದ ಆದೇಶ ಪರಿಶೀಲಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ.

Share this article