ಸಿಲಿಂಡರ್‌ ಅಭಾವದಿಂದ ಬೇಲೂರು ದೇಗುಲದಲ್ಲಿ ದಾಸೋಹ ಬಂದ್‌

KannadaprabhaNewsNetwork |  
Published : Mar 14, 2026, 01:30 AM IST
13ಎಚ್ಎಸ್ಎನ್6 : ಬೇಲೂರು ಚನ್ನಕೇಶವ ದೇಗುಲಕ್ಕೂ   ಗ್ಯಾಸ್ ಸಿಲಿಂಡರ್ ಸಮಸ್ಯೆ ಎದುರಾಗಿದ್ದು      ಪ್ರಸಾದವಿಲ್ಲದೆ  ಭಕ್ತರು ನಿರಾಶೆಯಿಂದ  ಹಿಂದಿರುಗುವಂತಾಗಿದೆ | Kannada Prabha

ಸಾರಾಂಶ

ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಹಲವು ವರ್ಷಗಳಿಂದ ಆಡಳಿತ ಮಂಡಳಿ ದಾಸೋಹ ವ್ಯವಸ್ಥೆ ಕಲ್ಪಿಸಿ ಬಂದಿತ್ತು. ಆದರೆ ಇತ್ತೀಚೆಗೆ ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ದಾಸೋಹ ಅಡುಗೆ ಕಾರ್ಯ ನಿರ್ವಹಿಸಲು ಸಾಧ್ಯವಾಗದೆ, ದೇವಾಲಯದ ಬಳಿ “ದಾಸೋಹ ಇಲ್ಲ” ಎಂಬ ನಾಮಫಲಕ ಅಳವಡಿಸಲಾಗಿದೆ. ಇದನ್ನು ನೋಡಿ ಹಲವು ಭಕ್ತರು ನಿರಾಸೆಯಿಂದ ಹಿಂದಿರುಗುತ್ತಿರುವುದು ಕಂಡುಬರುತ್ತಿದೆ. ದಾಸೋಹ ಇಲ್ಲದ ಕಾರಣ ಭಕ್ತರು ಹೋಟೆಲ್‌ಗಳ ಕಡೆ ಮುಖ ಮಾಡುತ್ತಿದ್ದರೂ, ಗ್ಯಾಸ್ ಸಿಲಿಂಡರ್ ಕೊರತೆಯಿಂದ ಅಲ್ಲಿಯೂ ಸಹ ಅಡುಗೆ ವ್ಯವಸ್ಥೆ ಸಮಸ್ಯೆಗೆ ಒಳಗಾಗಿದೆ ಎಂದು ತಿಳಿದುಬಂದಿದೆ.

ಕನ್ನಡಪ್ರಭ ವಾರ್ತೆ ಬೇಲೂರುವಿಶ್ವವಿಖ್ಯಾತ ಶ್ರೀ ಚನ್ನಕೇಶವ ಸ್ವಾಮಿ ದೇಗುಲಕ್ಕೂ ಇರಾನ್‌ ಯುದ್ಧದ ಬಿಸಿ ತಗುಲಿದ್ದು, ಎಲ್‌ಪಿಜಿ ಸಿಲಿಂಡರ್ ಸಮಸ್ಯೆ ಎದುರಾಗಿದೆ. ಹಾಗಾಗಿ ಮಧ್ಯಾಹ್ನದ ಊಟ ನಿಲ್ಲಿಸಲಾಗಿದ್ದು, ಭಕ್ತರು ಪ್ರಸಾದವಿಲ್ಲದೆ ನಿರಾಸೆಯಿಂದ ಹಿಂದಿರುಗುವಂತಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಅಭಾವ ಉಂಟಾಗಿದ್ದು, ದೇವಾಲಯದಲ್ಲಿ ನಡೆಯುತ್ತಿದ್ದ ದಾಸೋಹ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪ್ರವಾಸಿ ತಾಣವಾಗಿ ಪ್ರಸಿದ್ಧಿಯಾಗಿರುವ ಈ ಸ್ಥಳಕ್ಕೆ ಪ್ರತಿದಿನ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ಆಗಮಿಸುತ್ತಾರೆ. ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಹಲವು ವರ್ಷಗಳಿಂದ ಆಡಳಿತ ಮಂಡಳಿ ದಾಸೋಹ ವ್ಯವಸ್ಥೆ ಕಲ್ಪಿಸಿ ಬಂದಿತ್ತು. ಆದರೆ ಇತ್ತೀಚೆಗೆ ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ದಾಸೋಹ ಅಡುಗೆ ಕಾರ್ಯ ನಿರ್ವಹಿಸಲು ಸಾಧ್ಯವಾಗದೆ, ದೇವಾಲಯದ ಬಳಿ “ದಾಸೋಹ ಇಲ್ಲ” ಎಂಬ ನಾಮಫಲಕ ಅಳವಡಿಸಲಾಗಿದೆ. ಇದನ್ನು ನೋಡಿ ಹಲವು ಭಕ್ತರು ನಿರಾಸೆಯಿಂದ ಹಿಂದಿರುಗುತ್ತಿರುವುದು ಕಂಡುಬರುತ್ತಿದೆ. ದಾಸೋಹ ಇಲ್ಲದ ಕಾರಣ ಭಕ್ತರು ಹೋಟೆಲ್‌ಗಳ ಕಡೆ ಮುಖ ಮಾಡುತ್ತಿದ್ದರೂ, ಗ್ಯಾಸ್ ಸಿಲಿಂಡರ್ ಕೊರತೆಯಿಂದ ಅಲ್ಲಿಯೂ ಸಹ ಅಡುಗೆ ವ್ಯವಸ್ಥೆ ಸಮಸ್ಯೆಗೆ ಒಳಗಾಗಿದೆ ಎಂದು ತಿಳಿದುಬಂದಿದೆ.ಸ್ಥಳೀಯ ನಿವಾಸಿಗಳಾದ ಸುರೇಶ್ ಹಾಗೂ ದಬ್ಬೆ ನಾರಾಯಣ್ ಮಾತನಾಡಿ, “ಪ್ರತಿದಿನ ಸಾವಿರಾರು ಪ್ರವಾಸಿಗರು ಬೇಲೂರಿಗೆ ಆಗಮಿಸುತ್ತಾರೆ. ಹಲವು ವರ್ಷಗಳಿಂದ ಇಲ್ಲಿ ದಾಸೋಹ ನಡೆಯುತ್ತಿದ್ದು, ಕೊರೋನಾ ಕಾಲದಲ್ಲೂ ನಿಲ್ಲಿಸದೇ ಮುಂದುವರಿಸಲಾಗಿತ್ತು. ಆದರೆ ಈಗ ಗ್ಯಾಸ್ ಸಿಲಿಂಡರ್ ಕೊರತೆಯಿಂದ ದೊಡ್ಡ ಸಮಸ್ಯೆ ಉಂಟಾಗಿದೆ. ಇದಕ್ಕೂ ಸೇರಿ ದಾಸೋಹಕ್ಕೆ ಬಳಸುವ ಗೀಸರ್‌ ಸಹ ಹಾಳಾಗಿರುವುದರಿಂದ ಮತ್ತಷ್ಟು ತೊಂದರೆ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.ದೇವಾಲಯದ ಆಡಳಿತಾಧಿಕಾರಿ ಯೋಗೇಶ್ ಮಾತನಾಡಿ, “ಪ್ರತಿದಿನ ಸುಮಾರು ಎರಡು ಸಾವಿರಕ್ಕೂ ಅಧಿಕ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗುತ್ತಿತ್ತು. ಅದಕ್ಕಾಗಿ ಪ್ರತಿದಿನ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಅಗತ್ಯವಿತ್ತು. ಆದರೆ ಕಳೆದ ಎರಡು ದಿನಗಳಿಂದ ಸಿಲಿಂಡರ್‌ ಅಭಾವದಿಂದ ದಾಸೋಹವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇದಕ್ಕೂ ಸೇರಿ ಬಾಯ್ಲರ್‌ ಸಹ ಕೆಟ್ಟಿರುವುದರಿಂದ ಅಡುಗೆ ಕಾರ್ಯದಲ್ಲಿ ತೊಂದರೆ ಉಂಟಾಗಿದೆ. ತಾತ್ಕಾಲಿಕವಾಗಿ ಸೌದೆ ಒಲೆ ವ್ಯವಸ್ಥೆ ಮಾಡಲಾಗಿದೆ. ನಾಳೆಯಿಂದ ಸೌದೆ ಒಲೆಯಲ್ಲಿ ಅಡುಗೆ ಮಾಡಿ ದಾಸೋಹ ಪುನರಾರಂಭಿಸಲು ನಿರ್ಧರಿಸಲಾಗಿದೆ. ಈ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸಮಸ್ಯೆ ಶೀಘ್ರ ಬಗೆಹರಿಸಲು ಮನವಿ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ