ಕನ್ನಡಪ್ರಭ ವಾರ್ತೆ ಕಲಬುರಗಿ
ಸಮಾಜ ಕಲ್ಯಾಣ ಇಲಾಖೆ ಕಟ್ಟಡ ನಿರ್ಮಾಣ ಪೂರೈಸಿದ್ದರೂ, ಬಹು ನಿರೀಕ್ಷಿತ ತರಬೇತಿ ಕೇಂದ್ರ ಆರಂಭಗೊಳ್ಳದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಚಿವರು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದಲೇ ಈ ಕೇಂದ್ರವನ್ನು ನಡೆಸಲು ಸಿದ್ಧರಿರುವುದಾಗಿ ಹೇಳಿದರು.
ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಹಾಗೂ ಇನ್ನಿತರ ಪರೀಕ್ಷೆಗಳಿಗೆ ಪೂರ್ವಸಿದ್ಧತೆ ನಡೆಸಲು ಅನುಕೂಲವಾಗುವಂತೆ ನಿರ್ಮಾಣ ಮಾಡಲಾಗಿರುವ ಈ ತರಬೇತಿ ಕೇಂದ್ರವನ್ನು ಕೂಡಲೇ ಆರಂಭಿಸಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಡಾ.ರಾಕೇಶ್‌ಕುಮಾರ್ ಅವರಿಗೆ ಸೂಚಿಸಿದರು. ಕಲಬುರಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಈ ಸಂಬಂಧ ಶೀಘ್ರ ನಿರ್ಧಾರ ಕೈಗೊಂಡು ತರಬೇತಿ ಕೇಂದ್ರವನ್ನು ಆರಂಭಿಸಲು ಸಚಿವರು ಸಲಹೆ ಮಾಡಿದರು.ವಿಕಾಸಸೌಧದ ಸಚಿವರ ಕಚೇರಿಯಲ್ಲಿ ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಡಿ ನಡೆಯುತ್ತಿರುವ ಬಾಲಕಿಯರ ಹಾಗೂ ಬಾಲಕರ ಹಾಸ್ಟೆಲ್‌ಗಳು, ಕ್ರೈಸ್ ನಡೆಸುತ್ತಿರುವ ವಸತಿ ಶಾಲೆಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಪಡೆದು ಹಲವಾರು ಸೂಚನೆಗಳನ್ನು ನೀಡಿದರು. ಜಿಲ್ಲೆಯ ಹಲವೆಡೆ ನಿವೇಶನವನ್ನು ಒದಗಿಸಲಾಗಿದ್ದರೂ, ವಸತಿನಿಲಯಗಳು ಹಾಗೂ ವಸತಿಶಾಲೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ, ಅಂತಹ ಕಡೆ ಸ್ವಂತ ಕಟ್ಟಡಗಳನ್ನು ನಿರ್ಮಾಣ ಮಾಡಲು ತಕ್ಷಣವೇ ಕ್ರಮ ಕೈಗೊಳ್ಳಿ ಎಂದು ಪ್ರಿಯಾಂಕ್ ಖರ್ಗೆ ಸೂಚಿಸಿದರು.
ಹಾಸ್ಟೆಲ್‌ಗಳು ಹಾಗೂ ವಸತಿಶಾಲೆಗಳಲ್ಲಿ ಸೌಲಭ್ಯಗಳ ಕೊರತೆ, ಕಟ್ಟಡಗಳ ದುರಸ್ತಿ, ಶಿಥಿಲ ಕಟ್ಟಡಗಳ ಸ್ಥಳಗಳಲಿ ಹೊಸ ಕಟ್ಟಡಗಳ ನಿರ್ಮಾಣ ಮುಂತಾದವುಗಳನ್ನು ಕೂಲಂಕುಶವಾಗಿ ಗಮನಿಸಿ ಮೂಲಭೂತ ಸೌಲಭ್ಯಗಳ ನೀಲನಕ್ಷೆ ತಯಾರಿಸಿ ಸಲ್ಲಿಸಲು ಸಚಿವರು ಸೂಚನೆ ನೀಡಿದರು. ಕೆಲವು ಹಾಸ್ಟೆಲ್‌ಗಳು ಹಾಗೂ ವಸತಿಗೃಹಗಳಲ್ಲಿ ಹಾಸಿಗೆ, ಹೊದ್ದಿಕೆ, ಜಮಖಾನೆ ಹಾಗೂ ಪೀಠೋಪಕರಣಗಳ ಕೊರತೆಯಿರುವುದನ್ನೂ ನೀಲನಕ್ಷೆಯಲ್ಲಿ ಸೇರಿಸಿಕೊಳ್ಳಲು ಸಚಿವರು ನಿರ್ದೇಶನ ನೀಡಿದರು. ಕಳೆದ ಐದಾರು ವರ್ಷಗಳಿಂದ ಹಲವು ಕಟ್ಟಡಗಳ ನಿರ್ಮಾಣ ವಿಳಂಬವಾಗಿರುವುದನ್ನು ಪರಿಶೀಲಿಸಲು ಮೂರನೆ ವ್ಯಕ್ತಿಗಳಿಂದ ತನಿಖೆ (ಥರ್ಡ್ ಪಾರ್ಟಿ ಇನ್ಸಪೆಕ್ಷನ್) ನಡೆಸಲು ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.