ಕನ್ನಡಪ್ರಭ ವಾರ್ತೆ ಮೈಸೂರುಜನಪರ ಕೆಲಸ ಮಾಡುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದ ಮೇಲೆ ಕೆಸರು ಎರಚುವ ಕೆಲಸ ನಿರಂತರವಾಗಿ ನಡೆದಿದ್ದು, ಇದರ ವಿರುದ್ಧ ಜನರು ಆಂದೋಲನ ರೂಪಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ವಿ.ಎಸ್. ಉಗ್ರಪ್ಪ ಹೇಳಿದರು.ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಭಾನುವಾರ ನಡೆದ ಜಿಲ್ಲಾ ಕಾರ್ಯಕಾರಿಣಿ ಹಾಗೂ ಸ್ವಾಭಿಮಾನಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ಮುಚ್ಚಿಕೊಳ್ಳಲು ವಿಪಕ್ಷಗಳು ಹುಸಿ ಹೋರಾಟಕ್ಕೆ ಮುಂದಾಗಿವೆ. ವಕ್ಫ್, ಮುಡಾ ಹೆಸರಿನಲ್ಲಿ ಪಾದಯಾತ್ರೆ, ಹೋರಾಟ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಪತ್ನಿ ಜಮೀನಿಗೆ ಬದಲಾಗಿ ನಿವೇಶನ ಪಡೆದಿದ್ದಕ್ಕೆ ಪಾದಯಾತ್ರೆ ನಡೆಸಿದವು. ಇದರ ವಿರುದ್ಧ ಜನರು ಆಂದೋಲನ ನಡೆಸಬೇಕು ಎಂದರು.ರಾಜ್ಯದಲ್ಲಿ ಬಿಜೆಪಿ ಪಕ್ಷದ ಸ್ಥಿತಿ ಮನೆಯೊಂದು ಮೂರು ಬಾಗಿಲು ಎನ್ನುವಂತೆ ಆಗಿದೆ. ಬಿಜೆಪಿಯಲ್ಲಿ ಬರೀ ರಾಜಾಹುಲಿಗಳೇ ಇದ್ದಾರೆ ಹೊರತು ಮನುಷ್ಯತ್ವ ಇರುವವರು ಕಡಿಮೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಂತಹವರನ್ನು ಎದುರಿಸಬೇಕು ಎಂದು ಹೇಳಿದರು.ಡಿ. 5 ರಂದು ಹಾಸನದಲ್ಲಿ ನಡೆಯುವ ಸ್ವಾಭಿಮಾನಿ ಸಮಾವೇಶದಲ್ಲಿ ಮೈಸೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ವಿರೋಧಿಗಳಿಗೆ ಎಚ್ಚರಿಕೆಯ ಸಂದೇಶ ನೀಡಬೇಕು. ಜಿಲ್ಲೆಯಿಂದ ಕನಿಷ್ಠ ಒಂದೂವರೆ ಲಕ್ಷ ಜನರು ಸಮಾವೇಶದಲ್ಲಿ ಪಾಲ್ಗೊಂಡು ಶಕ್ತಿ ಪ್ರದರ್ಶನ ನೀಡಬೇಕು ಎಂದು ಅವರು ಕೋರಿದರು.ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್ ನಿರೀಕ್ಷೆಯಷ್ಟು ಸಂಘಟನೆ ಆಗಿಲ್ಲ. ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದೂವರೆ ವರ್ಷವಾದರೂ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬ ಕೊರಗು ಇರುವುದು ಸಹಜ. ಸಿದ್ದರಾಮಯ್ಯ ಅವರು ನಿಗಮ-ಮಂಡಳಿಗೆ ಸದ್ಯದಲ್ಲೇ ನಿರ್ದೇಶಕರು ಹಾಗೂ ಸದಸ್ಯರನ್ನು ನೇಮಿಸಲಿದ್ದು, ಪಕ್ಷ ನಿಷ್ಠರಿಗೆ ಅವಕಾಶ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಎಐಸಿಸಿ ಸಮ್ಮತಿಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಡಿ. 5ರಂದು ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶವನ್ನು ಕಾಂಗ್ರೆಸ್ ಬ್ಯಾನರ್ ಅಡಿಯಲ್ಲೇ ನಡೆಸಲು ಎಐಸಿಸಿ ಹಾಗೂ ಕೆಪಿಸಿಸಿ ಸೂಚನೆ ನೀಡಿವೆ. ಸ್ವಾಭಿಮಾನಿ ಸಮಾವೇಶದಲ್ಲಿ ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಂವಿಧಾನ ವಿರೋಧಿಗಳಿಗೆ ಎಚ್ಚರಿಕೆ ನೀಡಬೇಕು. ಸಿದ್ದರಾಮಯ್ಯ ಅವರಿಗೆ ಮಸಿ ಬಳಿಯುವ ಯತ್ನ ನಡೆಸಿದರೆ ಕಾಂಗ್ರೆಸ್ ಸುಮ್ಮನೆ ಇರುವುದಿಲ್ಲ ಎನ್ನುವ ಸಂದೇಶವನ್ನು ಈ ಸಮಾವೇಶದ ಮೂಲಕ ತಿಳಿಸಬೇಕು ಎಂದು ಕಿವಿಮಾತು ಹೇಳಿದರು.ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಜನಪರ ಸಂಘಟನೆಗಳು ಪ್ರತಿಭಟನೆ ಮಾಡುತ್ತಲೇ ಬಂದಿದ್ದು, ನಾವು ಈ ಸಂದರ್ಭ ಬಳಸಿಕೊಂಡು ಪಕ್ಷವನ್ನು ಬಲವರ್ಧನೆ ಮಾಡಬೇಕು. ಜನವರಿ- ಫೆಬ್ರುವರಿಯಲ್ಲಿ ಜಿಪಂ, ತಾಪಂ, ಚುನಾವಣೆ ನಡೆಯಬಹುದು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಸಜ್ಜಾಗಬೇಕು ಎಂದು ಅವರು ಸಲಹೆ ನೀಡಿದರು.ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಮಾತನಾಡಿ, ಹಾಸನದಲ್ಲಿ ಪಕ್ಷ ಬಲವರ್ಧನೆ ಸಲುವಾಗಿ ಸಮಾವೇಶ ಮಾಡುತ್ತಿದ್ದೇವೆ. ಸ್ವಾಭಿಮಾನಿ ಸಮಾವೇಶ ಅನಿರೀಕ್ಷಿತ. ಮೈಸೂರಿನಲ್ಲಿ ಅಹಿಂದ ಸಂಘಟನೆಗಳ ಸಹಯೋಗದಲ್ಲಿ ಸಮಾವೇಶ ಮಾಡಲು ಸಿದ್ದರಾಮಯ್ಯ ಉದ್ದೇಶಿಸಿದ್ದರು. ಆದರೆ ಎಲ್ಲಾ ಕಾರ್ಯಕ್ರಮಗಳು ಮೈಸೂರಿನಲ್ಲೇ ಮಾಡುವುದಕ್ಕಿಂತ ಬೇರೆ ಕಡೆ ಮಾಡಿ ಎಂದು ನಾವೆಲ್ಲ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದೆವು. ಅದರಂತೆ ಹಾಸನದಲ್ಲಿ ಆಯೋಜಿಸಲಾಗುತ್ತಿದೆ ಎಂದರು.ಹಾಸನದಲ್ಲಿ ಸಮಾವೇಶ ಮಾಡಿ ಜೆಡಿಎಸ್ ವಿರುದ್ಧ ತೊಡೆ ತಟ್ಟುವ ಉದ್ದೇಶ ನಮಗೆ ಇಲ್ಲ. ಜಿಲ್ಲೆಯಿಂದ 1300 ಬಸ್ ವ್ಯವಸ್ಥೆ ಮಾಡಲಾಗುತ್ತಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಅವರು ಕೋರಿದರು.ಸಮಾವೇಶದ ವಿರುದ್ಧ ಯಾರೂ ಅನಾಮಧೇಯ ಪತ್ರ ಬರೆದಿಲ್ಲ. ಬರೆದಿದ್ದರೂ ಅದು ನಮ್ಮ ಪಕ್ಷದವರಲ್ಲ. ಅದಕ್ಕೆ ಮಹತ್ವ ಕೊಡುವ ಅಗತ್ಯ ಇಲ್ಲ. ಬಿಜೆಪಿಯವರೇ ಏಕೆ ಬರೆದಿರಬಹುದು? ಎಂದು ಅವರು ಪ್ರಶ್ನಿಸಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ವಿಧಾನ ಪರಿಷತ್ ಸದಸ್ಯ ಡಿ. ತಿಮ್ಮಯ್ಯ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.---ಬಾಕ್ಸ್ಗೆಡಾ.ಬಿಜೆವಿಗೆ ಎಂ.ಎಲ್ಸಿ ಸ್ಥಾನ ನೀಡಲು ನಿರ್ಣಯಕಾಂಗ್ರೆಸ್ ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಅವರನ್ನು ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಬೇಕು ಎಂದು ಒತ್ತಾಯಿಸಿ ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಯಿತು.ಪಕ್ಷದ ಪದಾಧಿಕಾರಿಗಳು, ಸಚಿವರ ಸಮ್ಮುಖದಲ್ಲೇ ಕಾಂಗ್ರೆಸ್ ಜಿಲ್ಲಾ ಕಾರ್ಯಕಾರಿಣಿಯ ಮುಖಂಡರು, ಸತತ 25 ವರ್ಷಗಳಿಂದ ವಿಜಯಕುಮಾರ್ ಅವರನ್ನು ವಿಧಾನ ಪರಿಷತ್ಗೆ ನಾಮ ನಿರ್ದೇಶನ ಮಾಡಬೇಕು ಎನ್ನುವ ಒಂದಂಶದ ನಿರ್ಣಯವನ್ನು ಸಭೆ ಕೈಗೊಂಡಿರುವುದಾಗಿ ಪ್ರಕಟಿಸಿದರು. ಇದನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು.ಇದರ ಬೆನ್ನಲ್ಲೇ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರಲ್ಲಿ ಕೆಲವರು ಮೇಲೆದ್ದು ನೇಮಕಾತಿ ಮಾಡಲೇಬೇಕು ಎಂದು ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಜೋರು ಮಾತಿನಲ್ಲಿ ಎಲ್ಲರನ್ನೂ ಗದರಿಸಿ ಸಭೆಯನ್ನು ತಹಬದಿಗೆ ತಂದರು.ತದನಂತರ ತಮ್ಮ ಭಾಷಣದಲ್ಲಿ ಈ ಘಟನೆಗೆ ಬೇಸರ ವ್ಯಕ್ತಪಡಿಸಿದ ಮಹದೇವಪ್ಪ, ಮೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ ಮತದಾರರಿಗೆ ಅಭಿನಂದನೆ ಸಲ್ಲಿಸಲು ಈ ಕಾರ್ಯಕಾರಿಣಿ ನಿರ್ಣಯ ಕೈಗೊಳ್ಳಬೇಕೇ ಹೊರತು ಇಂತಹವರಿಗೆ ಸಚಿವ ಸ್ಥಾನ, ವಿಧಾನ ಪರಿಷತ್ ಸ್ಥಾನ ಕೊಡಿ ಎಂದು ಅಲ್ಲ. ಯಾರಿಗೆ ಯಾವ ಸ್ಥಾನಮಾನ ನೀಡಬೇಕು ಎಂಬುದನ್ನು ಪಕ್ಷವು ಸೂಕ್ತ ಸಮಯದಲ್ಲಿ ನಿರ್ಣಯ ಕೈಗೊಳ್ಳಲಿದೆ ಎಂದರು.