ಕಡೂರು ಠಾಣೆಯಲ್ಲಿ ಮೈಕ್ರೋ ಫೈನಾನ್ಸಿನ ಅಧಿಕಾರಿ, ಸಿಬ್ಬಂದಿ, ದಲಿತ ಸಂಘಟನೆಗಳ ಮುಖಂಡರ ಸಭೆ
ಕನ್ನಡಪ್ರಭ ವಾರ್ತೆ, ಕಡೂರುಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ನೀಡಿ ಮತ್ತು ಸಾಲ ವಸೂಲಿ ಮಾಡುವಾಗ ಕಾನೂನಿನ ಮಾನದಂಡಗಳನ್ನು ಅನುಸರಿಸದೇ ಹೋದಲ್ಲಿ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ತರೀಕೆರೆ ಡಿವೈಎಸ್ಪಿ ಹಾಲಮೂರ್ತಿ ರಾವ್ ಎಚ್ಚರಿಕೆ ನೀಡಿದರು.
ಭಾನುವಾರ ಕಡೂರು ಪೊಲೀಸ್ ಠಾಣೆಯಲ್ಲಿ ಮೈಕ್ರೋ ಫೈನಾನ್ಸಿನ ಅಧಿಕಾರಿ, ಸಿಬ್ಬಂದಿ ಹಾಗೂ ದಲಿತ ಸಂಘಟನೆ ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಮೈಕ್ರೋಫೈನಾನ್ಸ್ ಕಂಪನಿಗಳಿಂದ ಸಾಲ ತೆಗೆದುಕೊಂಡವರಲ್ಲಿ ಕೆಲವರು ಆತ್ಮಹತ್ಯೆಗೆ ಮುಂದಾಗಿ ರುವ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದೊಂದಿಗೆ ಈ ಸಭೆ ನಡೆಯುತ್ತಿದೆ. ಕಚೇರಿಗಳ ಕರ್ತವ್ಯದ ಸಮಯ ಬಿಟ್ಟು ಬೇರೆ ಸಂದರ್ಭಗಳಲ್ಲಿ ಸಾಲಗಾರರ ಮನೆಗೆ ಗುಂಪೊಂದಿಗೆ ಅವೇಳೆಯಲ್ಲಿ ತೆರಳಿ ವಸೂಲಿಗೆ ಮುಂದಾದಾಗ ಅವಮಾನವಾಗುವ, ಆತ್ಮಹತ್ಯೆಗೆ ಶರಣಾಗುವ ಹಾಗು ಮಾನಸಿಕವಾಗಿ ಕುಗ್ಗುವ ಪ್ರಕರಣಗಳು ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಈ ಸಭೆ ಮೂಲಕ ತಿಳುವಳಿಕೆ, ಕಾನೂನು ರೀತಿ ಸಾಲ ವಿತರಣೆ ಮತ್ತು ವಸೂಲಿ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.
ಸಾಲ ವಸೂಲಿಗೆ ಕಾನೂನು ಮೀರಿ ಹೋಗದೆ ಕಠಿಣ ಕ್ರಮಕ್ಕೆ ಅವಕಾಶ ನೀಡದಂತೆ ನಿಯಮ ಪಾಲಿಸುವ ಜೊತೆ ಮಾನವೀಯತೆ ಮೈಗೂಡಿಸಿಕೊಳ್ಳಬೇಕೆಂದು ಸೂಚ್ಯವಾಗಿ ಹೇಳಿದರು.ವೃತ್ತ ನಿರೀಕ್ಷಕ ರಫೀಕ್ ಮಾತನಾಡಿ, ಮೈಕ್ರೋ ಕಂಪನಿಗಳಿಂದ ಸಾಲ ಪಡೆದವರ ಮನೆ ಬಾಗಿಲಿಗೆ ಹೋಗಿ ಅಧಿಕ ಬಡ್ಡಿ ಸೇರಿಸಿ ನೀಡುವಂತೆ ಗ್ರಾಹಕರಿಗೆ ದೌರ್ಜನ್ಯ ಮಾಡುವುದು ಸರಿಯಲ್ಲ. ಸೌಜನ್ಯದಿಂದ ವರ್ತಿಸಬೇಕು. ವಸೂಲಾತಿಗೆ ಕಾನೂನು ರೀತಿಯಲ್ಲಿ ಪೊಲೀಸರ ರಕ್ಷಣೆ ಪಡೆಯಬಹುದು. ಮೈಕ್ರೋ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಾದಲ್ಲಿ ನಿಮ್ಮ ಭವಿಷ್ಯ ಕತ್ತಲಾಗುವ ಅಪಾಯವಿರುತ್ತದೆ ಹಾಗಾಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.
ಪಿಎಸ್ಐ ಪವನ್ ಮಾತನಾಡಿ, ಈ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನಾನ್ ಶೆಡ್ಯೂಲ್ ಬ್ಯಾಂಕುಗಳ ವ್ಯಾಪ್ತಿಗೆ ಬರಲಿದ್ದು, ಭಾಗದಲ್ಲಿ ಬರುವ ಈ ಸಂಸ್ಥೆಗಳು ಜನರಿಗೆ ಹಣಕಾಸು ಸಾಲ ನೀಡಿ ಗೊಂದಲವಿಲ್ಲದ ವಸೂಲಿಗೆ ನಮ್ಮ ಅಭ್ಯಂತರವಿಲ್ಲ. ಆದರೆ ಕೆಟ್ಟ ವರ್ತನೆಯಿಂದ ವಸೂಲಿಗೆ ಮುಂದಾದರೆ ಪೊಲೀಸರು ಮಧ್ಯಪ್ರವೇಶ ಮಾಡಬೇಕಾಗುತ್ತದೆ. ದೌರ್ಜನ್ಯದಿಂದ ವಸೂಲಿಗೆ ಹೋಗಿ ಆತ್ಮಹತ್ಯೆಗೆ ಶರಣಾದ ಉದಾಹರಣೆ ಬಹಳಷ್ಟಿವೆ. ಕಡ್ಡಾಯವಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆ ಪುರಸಭೆ ಪರವಾಗಿ, ಪೋಲೀಸರ ಪರಿಶೀಲನಾತ್ಮಕ ಗುರುತಿನ ಚೀಟಿ ಕಡ್ಡಾಯವಾಗಿ ಪಡೆದು ವ್ಯವಹರಿಸಬೇಕು ಎಂದು ತಿಳಿಸಿದರು.ಪಿಎಸೈ ಲೀಲಾವತಿ, ಠಾಣೆ ಸಿಬ್ಬಂದಿ ಹಾಗು ಅನೇಕ ಮುಖಂಡರು ಹಾಜರಿದ್ದರು.
--ಬಾಕ್ಸ್ --ಖಾಸಗಿ ಸಂಸ್ಥೆಗಳಾದ ಮೈಕ್ರೋ ಫೈನಾನ್ಸ್ ಗಳು ಆರ್ ಬಿ ಐ ನಿಯಮಾವಳಿ ಪಾಲಿಸದಿರುವುದು, ಸರಿಯಾದ ಕಚೇರಿಗಳು ಇಲ್ಲದೆ, ಪುರಸಭೆ ಅನುಮತಿ ಪಡೆಯದಿರುವುದು, ಕೆಲವರ ಬಳಿ ಸಂಸ್ಥೆ ಐಡಿ ಕಾರ್ಡ್ ಇಲ್ಲ. ಪೊಲೀಸ್ ಇಲಾಖೆ ಪ್ರಮಾಣ ಪತ್ರ ಕೂಡ ಇಲ್ಲದಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಆರ್ ಬಿಐ ನಿಯಂತ್ರಣವಿಲ್ಲದೆ ಸಾಲ ನೀಡುವ ಈ ಸಂಸ್ಥೆಗಳ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಚಿಕ್ಕಂಗಳ ಗ್ರಾಮದಲ್ಲಿ ಇವರ ಕಚೇರಿ ಇಲ್ಲ. ಆದರೂ ರಸ್ತೆಯಲ್ಲಿಯೇ ವ್ಯವಹರಿಸಿ ಹೆಣ್ಣು ಮಕ್ಕಳಿಗೆ ಬಳಸುವ ಭಾಷೆಯನ್ನು ನಾನು ಗಮನಿಸಿದ್ದು ಕಾನೂನು ರೀತಿ ಸಾಲ ವಸೂಲಿ ಮಾಡಲಿ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಕಠಿಣ ಕ್ರಮ ವಹಿಸಬೇಕು ಎಂದು ಚಿಕ್ಕಂಗಳ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ನಾಯ್ಕ ಆಗ್ರಹಿಸಿದರು.ದಲಿತ ಮುಖಂಡ ರಾಘವೇಂದ್ರ- ತಾವಿಲ್ಲದ ವೇಳೆ ಬಂದು ದೌರ್ಜನ್ಯದಿಂದ ಮಾತನಾಡಿದ್ದು, ವಸೂಲಾತಿಗೆ ಮುಂದಾದಾಗ 25,000 ಚೆಕ್ ನೀಡಿ ಉಳಿದ ಹಣ ಒಂದು ವಾರದ ಬಳಿಕ ಕಟ್ಟುವುದಾಗಿ ಹೇಳಿದರೂ ಮತ್ತೆ ತಮ್ಮ ಮನೆಗೆ ಬಂದು ನಿಂದಿಸಿ ತೇಜೋವಧೆ ಮಾಡಿದರು ಎಂದು ಅಳಲು ತೋಡಿಕೊಂಡರು.
ನಮ್ಮ ಸಂಭಂಧಿಕರು ಸುಮಾರು ₹7 ಲಕ್ಷ ವನ್ನು ಸಂಸ್ಥೆಯಿಂದ ಸಾಲ ಪಡೆದಿದ್ದರು. ಸುಮಾರು ₹2 ಲಕ್ಷ ಅಧಿಕ ಬಡ್ಡಿ ಕಟ್ಟಿದ್ದು ಸಾಲ ಕಟ್ಟಲಾಗದೆ ಕಟ್ಟಿದ ಮನೆಯನ್ನು ಮಾರಾಟ ಮಾಡಿ ಸಾಲ ತೀರಿಸುವ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಸಂಸ್ಥೆ ಮತ್ತು ಸಿಬ್ಬಂದಿಗೆ ಪೊಲೀಸ್ ಅಧಿಕಾರಿಗಳು ನಿರ್ದೇಶನ ನೀಡಬೇಕು ಡಿಎಸ್ಎಸ್ ಮುಖಂಡ ಕೃಷ್ಣಪ್ಪ ಮನವಿ ಮಾಡಿದರು..1ಕೆಕೆಡಿಯು1.
ಕಡೂರು ಪೋಲೀಸ್ ಠಾಣೆಯಲ್ಲಿ ಡಿವೈಎಸ್ಪಿ ಹಾಲಮೂರ್ತಿರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೈಕ್ರೋ ಪೈನಾನ್ಸ್ ಸಂಸ್ಥೆ ಅಧಿಕಾರಿ ಸಿಬ್ಬಂದಿ, ದಲಿತ ಮುಖಂಡರು ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು